ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಸ್ಫೋಟಕ ಆಟವಾಡಿದ್ದ ಹಾರ್ದಿಕ್ ಪಾಂಡ್ಯ ‘ಬ್ಲಾಕ್ ಲೈವ್ಸ್ ಮ್ಯಾಟರ್’ ಅಭಿಯಾನಕ್ಕೆ ಬೆಂಬಲ ಸೂಚಿಸಿದ್ದಾರೆ. ಆ ಮೂಲಕ ಐಪಿಎಲ್ ವೇದಿಕೆಯಲ್ಲಿ ಈ ಅಭಿಯಾನಕ್ಕೆ ಬೆಂಬಲ ನೀಡಿದ ಮೊದಲ ಕ್ರಿಕೆಟಿಗ ಎನಿಸಿದ್ದಾರೆ.
ಭಾನುವಾರ ನಡೆದ ಪಂದ್ಯದಲ್ಲಿ ಬಿರುಸಾಗಿ ಬ್ಯಾಟ್ ಬೀಸಿದ್ದ ಪಾಂಡ್ಯ ಕೇವಲ 21 ಎಸೆತಗಳಲ್ಲಿ 60 ರನ್ ಬಾರಿಸಿ ಮಿಂಚಿದ್ದರು. ಅವರ ಬ್ಯಾಟಿಂಗ್ ಬಲದಿಂದ ಮುಂಬೈ ಇಂಡಿಯನ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ಗಳನ್ನು ಕಳೆದುಕೊಂಡು 195 ರನ್ ಗಳಿಸಿಕೊಂಡಿತ್ತು.
ಪಾಂಡ್ಯವೈಯಕ್ತಿಕವಾಗಿ 50 ರನ್ ಪೂರೈಸಿದ ವೇಳೆ, ಒಂದು ಮಂಡಿಯೂರಿ ಕುಳಿತು ಬಲಗೈ ಮೇಲೆತ್ತಿ ಸಂಭ್ರಮಿಸಿದರು. ಆ ಸಂದರ್ಭದ ಚಿತ್ರವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಅವರು, #BlackLivesMatter ಎಂದು ಟ್ಯಾಗ್ ಹಾಕಿದ್ದಾರೆ. ಆ ಮೂಲಕ ವರ್ಣಭೇದ ನೀತಿ ವಿರುದ್ಧದ ‘ಬ್ಲಾಕ್ ಲೈವ್ಸ್ ಮ್ಯಾಟರ್’ ಅಭಿಯಾನಕ್ಕೆ ತಮ್ಮ ಬೆಂಬಲ ಘೋಷಿಸಿದ್ದಾರೆ.
ಇದೇ ವರ್ಷ ಮೇ ತಿಂಗಳಲ್ಲಿ ಆಫ್ರಿಕಾ ಮೂಲದ ಅಮೆರಿಕ ಪ್ರಜೆ ಜಾರ್ಜ್ ಫ್ಲಾಯ್ಡ್ ಅವರು ಪೊಲೀಸರಿಂದ ಥಳಿತಕ್ಕೊಳಗಾಗಿ ಅಮೆರಿಕದಲ್ಲಿ ಮೃತಪಟ್ಟಿದ್ದರು. ಪೊಲೀಸ್ ಅಧಿಕಾರಿಯೊಬ್ಬರು ಫ್ಲಾಯ್ಡ್ ಅವರನ್ನು ಕುತ್ತಿಗೆ ಭಾಗದ ಮೇಲೆ ಮಂಡಿಯಿಂದ ಒತ್ತಿ ಹಿಡಿದಿದ್ದರು. ಇದರಿಂದಾಗಿ ಉಸಿರಾಡಲು ಸಾಧ್ಯವಾಗದೆ ಫ್ಲಾಯ್ಡ್ ಸಾವಿಗೀಡಾಗಿದ್ದರು.ಆ ಸಂದರ್ಭದ ಚಿತ್ರಗಳು ಮತ್ತು ವಿಡಿಯೊಗಳು ಸಾಕಷ್ಟು ವೈರಲ್ ಆಗಿದ್ದವು. ಪ್ರಕರಣ ಸಂಬಂಧ ಜಗತ್ತಿನಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ಅದಾದ ಬಳಿಕ ಈ ಅಭಿಯಾನಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.
ಭಾನುವಾರದ ಪಂದ್ಯದಲ್ಲಿ ಮುಂಬೈ ನೀಡಿದ್ದ ಸವಾಲಿನ ಗುರಿ ಎದುರು ಅಮೋಘ ಬ್ಯಾಟಿಂಗ್ ಪ್ರದರ್ಶನ ತೋರಿದ ಬೆನ್ ಸ್ಟೋಕ್ಸ್ (ಅಜೇಯ 107) ಮತ್ತು ಸಂಜು ಸ್ಯಾಮ್ಸನ್ (ಅಜೇಯ 54) ರಾಜಸ್ಥಾನ ರಾಯಲ್ಸ್‌ಗೆ 8 ವಿಕೆಟ್ ಅಂತರದ ಗೆಲುವು ತಂದುಕೊಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.