ADVERTISEMENT

ಮೊಣಕೈ ಮುರಿತ; ಐಪಿಎಲ್‌ನಿಂದ ಗಾಯಕವಾಡ ಹೊರಕ್ಕೆ: ಚೆನ್ನೈಗೆ ಮತ್ತೆ ಧೋನಿ ನಾಯಕತ್ವ

ಪಿಟಿಐ
Published 10 ಏಪ್ರಿಲ್ 2025, 19:28 IST
Last Updated 10 ಏಪ್ರಿಲ್ 2025, 19:28 IST
<div class="paragraphs"><p>ಮಹೇಂದ್ರಸಿಂಗ್ ಧೋನಿ</p></div>

ಮಹೇಂದ್ರಸಿಂಗ್ ಧೋನಿ

   

ಚೆನ್ನೈ: ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಮಹೇಂದ್ರಸಿಂಗ್ ಧೋನಿ ಅವರು ಮತ್ತೆ ನಾಯಕರಾಗಿದ್ದಾರೆ. ಋತುರಾಜ್ ಗಾಯಕವಾಡ ಅವರು ಗಾಯಗೊಂಡಿರುವುದರಿಂದ ಟೂರ್ನಿಯಿಂದ ಹೊರಬಿದ್ದಿದ್ದಾರೆ. 

ಶುಕ್ರವಾರ ಚೆಪಾಕ್‌ನಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ಎದುರು ನಡೆಯಲಿರುವ ಪಂದ್ಯದಲ್ಲಿ ಚೆನ್ನೈ ತಂಡವನ್ನು ಧೋನಿ ಮುನ್ನಡೆಸಲಿದ್ದಾರೆ.   ಋತುರಾಜ್ ಅವರ ಮೊಣಕೈ ಮೂಳೆ ಮುರಿದಿದೆ. ಅದರಿಂದಾಗಿ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಅವರು ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ. ಕಳೆದ ಪಂದ್ಯದಲ್ಲಿ  ವೇಗದ ಬೌಲರ್ ಜೋಫ್ರಾ ಆರ್ಚರ್ ಹಾಕಿದ್ದ ಶಾರ್ಟ್‌ ಪಿಚ್ ಎಸೆತದಲ್ಲಿ ಚೆಂಡು ಋತುರಾಜ್ ಮೊಣಕೈಗೆ ಬಡಿದಿತ್ತು. 

ADVERTISEMENT

‘ಋತುರಾಜ್ ಗಾಯಗೊಂಡಿದ್ದಾರೆ. ಆದ್ದರಿಂದ ಟೂರ್ನಿಯಿಂದಲೇ ಹೊರನಡೆಯಬೇಕಾಗಿದೆ. ಧೋನಿ ನಾಯಕತ್ವದ ಹೊಣೆ ನಿಭಾಯಿಸುವರು’ ಎಂದು ತಂಡದ ಮುಖ್ಯ ಕೋಚ್ ಸ್ಟೀಫನ್ ಫ್ಲೆಮಿಂಗ್  ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. 

ಮುಖ್ಯ ಘಟ್ಟ: ಚೆಪಾಕ್ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಜಯಿಸುವುದು ಚೆನ್ನೈ ತಂಡಕ್ಕೆ ಮುಖ್ಯವಾಗಿದೆ. ತಂಡವು ಸತತ ನಾಲ್ಕು ಪಂದ್ಯಗಳಲ್ಲಿ ಸೋತಿದೆ. ತನ್ನ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಎದುರು ಜಯಿಸಿತ್ತು. ಈಚೆಗೆ ಪಂಜಾಬ್ ಕಿಂಗ್ಸ್ ಎದುರು 18 ರನ್‌ಗಳಿಂದ ಚೆನ್ನೈ ಪರಾಭವಗೊಂಡಿತ್ತು. 

ಇದೀಗ ತಂಡವು  ಗೆಲುವಿನ ಹಾದಿಗೆ ಮರಳದಿದ್ದರೆ ನಾಕೌಟ್ ಘಟ್ಟ ಪ್ರವೇಶಿಸುವುದು ಕಠಿಣವಾಗಬಹುದು. ಈಗ ಧೋನಿ ಅವರ ಅನುಭವ ಮತ್ತು ಚಾಣಾಕ್ಷತೆಯ ಪರೀಕ್ಷೆಯೂ ಇದಾಗಲಿದೆ. ಚೆನ್ನೈ ತಂಡವು ತನ್ನ ತವರಿನ ಅಂಗಳದಲ್ಲಿಯೂ ಸೋತಿದೆ. ಇದು ತಂಡದ ಮ್ಯಾನೇಜ್‌ಮೆಂಟ್‌ಗೆ ಚಿಂತೆಯ ವಿಷಯವಾಗಿದೆ.  

ತಂಡವು ಜಯದ ಹಾದಿಗೆ ಮರಳಬೇಕಾದರೆ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳು ಫಾರ್ಮ್‌ಗೆ ಮರಳಬೇಕು. ಆರಂಭಿಕ ಬ್ಯಾಟರ್‌ಗಳೂ ಇನಿಂಗ್ಸ್‌ಗೆ ಉತ್ತಮ ಅಡಿಪಾಯ ಹಾಕಿದರೆ ತಂಡವು ದೊಡ್ಡ ಮೊತ್ತ ಗಳಿಸಲು ನೆರವಾಗಲಿದೆ. 43 ವರ್ಷ ವಯಸ್ಸಿನ ಧೋನಿ ಅವರು ತಮ್ಮ ‘ಫಿನಿಷರ್’ ಖ್ಯಾತಿಯನ್ನು ಮರಳಿ ಪಡೆಯುವ ಸವಾಲು ಕೂಡ ಇದೆ. ವೇಗಿಗಳಾದ ಖಲೀಲ್ ಅಹಮದ್, ಮಥೀಷ ಪಥಿರಾಣ, ಸ್ಪಿನ್ನರ್ ಆರ್. ಅಶ್ವಿನ್, ರವೀಂದ್ರ ಜಡೇಜ ಮತ್ತು ನೂರ್ ಅಹಮದ್ ಅವರ ಮುಂದೆ ಕೋಲ್ಕತ್ತ ತಂಡದ ಬ್ಯಾಟರ್‌ಗಳ ಅಬ್ಬರಕ್ಕೆ ತಡೆಯೊಡ್ಡುವ ಸವಾಲು ಇದೆ. 

ಅಜಿಂಕ್ಯ ರಹಾನೆ ನಾಯಕತ್ವದ ಕೋಲ್ಕತ್ತ ತಂಡವು ಐದು ಪಂದ್ಯಗಳಲ್ಲಿ ಆಡಿ ಮೂರರಲ್ಲಿ ಸೋತಿದೆ. ಎರಡರಲ್ಲಿ ಜಯಿಸಿದೆ. ತಂಡದ ವೆಂಕಟೇಶ್ ಅಯ್ಯರ್,  ಅಂಗಕ್ರಿಷ್ ರಘುವಂಶಿ ಹಾಗೂ ರಿಂಕು ಸಿಂಗ್ ಹಾಗೂ ರಹಾನೆ ಉತ್ತಮ ಲಯದಲ್ಲಿದ್ದಾರೆ. ಸ್ಪಿನ್ ಜೋಡಿ ಸುನಿಲ್ ನಾರಾಯಣ್ ಮತ್ತು ವರುಣ್ ಚಕ್ರವರ್ತಿ ಅವರು ಯಶಸ್ಸು ಸಾಧಿಸಿದರೆ ಚೆನ್ನೈ ತಂಡದ ಹಾದಿ ಕಠಿಣವಾಗಬಹುದು. 

ಪಂದ್ಯ ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್‌ ಸ್ಫೋರ್ಟ್ಸ್‌, ಜಿಯೊ ಹಾಟ್‌ಸ್ಟಾರ್ ಆ್ಯಪ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.