
ಸಚಿನ್ ತೆಂಡೂಲ್ಕರ್
ಕ್ರಿಕೆಟ್ ಲೋಕದ ದಿಗ್ಗಜ ಆಟಗಾರ ಸಚಿನ್ ತೆಂಡೂಲ್ಕರ್ ಅವರು ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿ ಇಂದಿಗೆ ಬರೋಬ್ಬರಿ 36 ವರ್ಷಗಳು ಕಳೆದಿವೆ. ಅವರು ಏಕದಿನ ಮಾದರಿಯ ಕ್ರಿಕೆಟ್‌ಗೆ 1989 ಡಿಸೆಂಬರ್ 18ರಂದು ಪಾಕಿಸ್ತಾನದ ವಿರುದ್ಧ ಆಡುವ ಮೂಲಕ ಪದಾರ್ಪಣೆ ಮಾಡಿದ್ದರು.
ಸಚಿನ್ ತೆಂಡೂಲ್ಕರ್ ಅವರು 1973 ಏಪ್ರಿಲ್ 23ರಂದು ಮುಂಬೈನಲ್ಲಿ ಜನಸಿದ್ದಾರೆ. ತಮ್ಮ 16ನೇ ವಯಸ್ಸಿನಲ್ಲಿ ಕ್ರಿಕೆಟ್ ವೃತ್ತಿಜೀವನ ಆರಂಭಿಸಿದ ಅವರು, ಬರೋಬ್ಬರಿ 22 ವರ್ಷಗಳ ಕಾಲ ಕ್ರಿಕೆಟ್ ಲೋಕದಲ್ಲಿ ಅನಭಿಶಕ್ತ ದೊರೆಯಂತೆ ಆಳಿದವರು. ಈ 22 ವರ್ಷಗಳ ಸುಧೀರ್ಘ ಕ್ರಿಕೆಟ್‌ನಲ್ಲಿ ಅವರು ಅನೇಕ ದಾಖಲೆಗಳನ್ನು ಮಾಡಿದ್ದಾರೆ.
ಮೊದಲ ಪಂದ್ಯದಲ್ಲೇ ಪಾಕಿಸ್ತಾನ ಸವಾಲು
ಸಚಿನ್ ತೆಂಡೂಲ್ಕರ್ ಅವರು ತಮ್ಮ 16ನೇ ವಯಸ್ಸಿನಲ್ಲಿ ಪಾಕಿಸ್ತಾನ ಪ್ರವಾಸಕ್ಕೆ ಆಯ್ಕೆಯಾದ ಭಾರತ ತಂಡದಲ್ಲಿ ಸ್ಥಾನ ಪಡೆದುಕೊಂಡರು. ಆ ಮೂಲಕ ತಮ್ಮ ಮೊದಲ ಪಂದ್ಯದಲ್ಲೇ ಬದ್ಧ ಎದುರಾಳಿ ಪಾಕಿಸ್ತಾನವನ್ನು ಎದುರಿಸುವ ಸವಾಲು ಎದುರಾಯಿತು. ಪಾಕಿಸ್ತಾನದ ಗುಜ್ರನ್‌ವಾಲಾದಲ್ಲಿರುವ ಜಿನ್ನಾ ಅಂತರರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ತಮ್ಮ ಚೊಚ್ಚಲ ಏಕದಿನ ಪಂದ್ಯಕ್ಕೆ ಪದಾರ್ಪಣೆ ಮಾಡಿದರು.
ಏಕದಿನ ಮಾದರಿಯ ಕ್ರಿಕೆಟ್‌ನಲ್ಲಿ ಅವರು, 1989 ರಿಂದ 2012ರ ಅವಧಿಯಲ್ಲಿ 452 ಇನಿಂಗ್ಸ್‌ಗಳಲ್ಲಿ ಬ್ಯಾಟಿಂಗ್ ಮಾಡಿದ್ದು, ಇದರಲ್ಲಿ 44.83ರ ಸರಾಸರಿಯಲ್ಲಿ, 49 ಶತಕ ಹಾಗೂ 96 ಅರ್ಧಶತಕ ಸಹಿತ 18,426 ರನ್ ಕಲೆಹಾಕಿದ್ದಾರೆ. ಇದು ಒಂದು ಮಾದರಿಯ ಕ್ರಿಕೆಟ್‌ನಲ್ಲಿ ವಿಶ್ವದ ಬೇರೆ ಯಾವುದೇ ಆಟಗಾರ ಗಳಿಸಿರದ ರನ್‌ಗಳಾಗಿವೆ.
ಮೊದಲ ದ್ವಿಶತಕ
2010ರಲ್ಲಿ ಭಾರತ ಪ್ರವಾಸದಲ್ಲಿದ್ದ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಸಚಿನ್ ತೆಂಡೂಲ್ಕರ್ ಅವರು ಅಜೇಯ 200 ರನ್ ಗಳಿಸುವ ಮೂಲಕ ಏಕದಿನ ಮಾದರಿಯ ಕ್ರಿಕೆಟ್‌ನಲ್ಲಿ ದ್ವಿಶತಕ ಸಿಡಿಸಿದ ವಿಶ್ವದ ಮೊದಲ ಆಟಗಾರ ಎಂಬ ಸಾಧನೆ ಮಾಡಿದ್ದಾರೆ.
ಏಕದಿನ ಕ್ರಿಕೆಟ್‌ನಲ್ಲಿ ಅತ್ಯಧಿಕ ಅರ್ಧಶತಕ
ಏಕದಿನ ಮಾದರಿಯ ಕ್ರಿಕೆಟ್‌ನಲ್ಲಿ ಅತ್ಯಧಿಕ ಅರ್ಧಶತಕ ಸಿಡಿಸಿರುವ ದಾಖಲೆಯನ್ನು ಸಚಿನ್ ತೆಂಡೂಲ್ಕರ್ ಹೊಂದ್ದಿದ್ದಾರೆ. ಅವರು, ಈ ಮಾದರಿಯೊಂದರಲ್ಲೇ ಬರೋಬ್ಬರಿ 96 ಅರ್ಧಶತಕ ಸಿಡಿಸಿದ್ದಾರೆ. ಎರಡನೇ ಸ್ಥಾನದಲ್ಲಿ 93 ಅರ್ಧಶತಕ ಸಿಡಿಸಿರುವ ಕುಮಾರ ಸಂಗಕ್ಕಾರ ಇದ್ದಾರೆ.
ಏಕದಿನದಲ್ಲಿ ಅತ್ಯಧಿಕ ರನ್ಸ್
ಏಕದಿನ ಮಾದರಿಯಲ್ಲಿ 18,426 ರನ್ ಕಲೆಹಾಕಿರುವ ಸಚಿನ್ ತೆಂಡೂಲ್ಕರ್ ಅವರು, ಈ ಮಾದರಿಯಲ್ಲಿ ಅತೀ ಹೆಚ್ಚು ರನ್ ಗಳಿಸಿರುವ ಬ್ಯಾಟರ್ ಎಂಬ ದಾಖಲೆ ಹೊಂದಿದ್ದಾರೆ. 14,557* ರನ್ ಕಲೆಹಾಕಿರುವ ವಿರಾಟ್ ಕೊಹ್ಲಿಯವರು ಎರಡನೇ ಸ್ಥಾನದಲ್ಲಿದ್ದಾರೆ.
ಅತೀ ಹೆಚ್ಚು ಶತಕ
ಏಕದಿನ ಕ್ರಿಕೆಟ್‌ನಲ್ಲಿ 49 ಶತಕ ಸಿಡಿಸಿರುವ ಸಚಿನ್ ತೆಂಡೂಲ್ಕರ್ ಅವರು ಅತೀ ಹೆಚ್ಚು ಶತಕ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಆದರೆ, ಟೆಸ್ಟ್ ಹಾಗೂ ಏಕದಿನ ಎರಡೂ ಮಾದರಿಗಳಿಂದ ಒಟ್ಟು 100 ಶತಕ ಸಿಡಿಸಿದ್ದಾರೆ. ಆ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತೀ ಹೆಚ್ಚು ಶತಕ ಸಿಡಿಸಿದ ಆಟಗಾರ ಎಂಬ ದಾಖಲೆ ಕೂಡ ಹೊಂದಿದ್ದಾರೆ.
ಹೀಗೆ 16 ವಯಸ್ಸಿನಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿರುವ ಅವರು, ವಿಶ್ವ ಕ್ರಿಕೆಟ್‌ನಲ್ಲಿ ತಮ್ಮದೇ ಆದ ಚಾಪು ಮೂಡಿಸಿದ್ದಾರೆ. ಕ್ರಿಕೆಟ್ ಲೋಕದ ಇವರ ಸಾಧನೆ ಗುರುತಿಸಿದ ಭಾರತ ಸರ್ಕಾರ ಅವರಿಗೆ 2014ರಲ್ಲಿ ಭಾರತದ ಅತ್ಯುನ್ನತ ಪ್ರಶಸ್ತಿಯಾಗಿರುವ ‘ಭಾರತ ರತ್ನ’ ಪ್ರಶಸ್ತಿ ನೀಡಿ ಗೌರವಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.