ADVERTISEMENT

ಭಾರತೀಯ ನನ್ನ ದಾಖಲೆ ಮುರಿದಿದ್ದಕ್ಕೆ ಸಂತಸವಿದೆ: ವಿರಾಟ್ ಗುಣಗಾನ ಮಾಡಿದ ಸಚಿನ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ನವೆಂಬರ್ 2023, 12:49 IST
Last Updated 15 ನವೆಂಬರ್ 2023, 12:49 IST
<div class="paragraphs"><p>ವಿರಾಟ್,&nbsp;ಸಚಿನ್ </p></div>

ವಿರಾಟ್, ಸಚಿನ್

   

ICC

ಬೆಂಗಳೂರು: ಏಕದಿನ ಪಂದ್ಯಗಳಲ್ಲಿ 50ನೇ ಶತಕ ಬಾರಿಸಿ ತಮ್ಮ ದಾಖಲೆ ಮುರಿದ ವಿರಾಟ್ ಕೊಹ್ಲಿ ಅವರಿಗೆ ಕ್ರಿಕೆಟ್‌ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ಬುಧವಾರ ಹೃದಯಸ್ಪರ್ಶಿ ಅಭಿನಂದನಾ ಸಂದೇಶ ಕಳುಹಿಸಿದ್ದಾರೆ.

ತಮ್ಮಿಬ್ಬರ ನಡುವಣ ಮೊದಲ ಭೇಟಿಯನ್ನು ಅವರು ಸ್ವಾರಸ್ಯಕರವಾಗಿ ನೆನಪಿಸಿದ್ದಾರೆ. ಆಗಿನ್ನೂ ಹೊಸಬರಾಗಿದ್ದ ವಿರಾಟ್‌ಗೆ ಅಂದಿನ ತಂಡದ ಕೆಲವು ಆಟಗಾರರು ಸಚಿನ್ ಕಾಲು ಹಿಡಿಯುವಂತೆ ‘ಸೂಚಿಸಿದ್ದರು’.

‘ತಂಡದ ಡ್ರೆಸಿಂಗ್‌ ರೂಮ್‌ನಲ್ಲಿ ವಿರಾಟ್‌ಗೆ ಕೆಲ ಸಹಆಟಗಾರರು ಪ್ರಾಂಕ್ ಮಾಡಿದ್ದರು. ನನಗೆ ನಗು ತಡೆಯಲಾಗಲಿಲ್ಲ’ ಎಂದು ಸಚಿನ್ ಹೇಳಿದ್ದಾರೆ. ‘ಆದರೆ ಬದ್ಧತೆ ಮತ್ತು ಕೌಶಲದಿಂದ ನೀನು ಅತಿ ಬೇಗನೇ ನನ್ನ ಹೃದಯ ಗೆದ್ದೆ. ಯುವ ಆಟಗಾರ ಈಗ ‘ವಿರಾಟ್‌ ಆಟಗಾರ’ನಾಗಿ ಬೆಳೆದಿರುವುದು ನನಗೆ ಅತೀವ ಸಂತಸ ಮೂಡಿಸಿದೆ’ ಎಂದು ತೆಂಡೂಲ್ಕರ್‌ ‘ಎಕ್ಸ್‌’ನಲ್ಲಿ ಬರೆದಿದ್ದಾರೆ.

‘ಭಾರತದ ಆಟಗಾರನೇ ನನ್ನ ದಾಖಲೆ ಮುರಿದಿದ್ದಕ್ಕಿಂತ ದೊಡ್ಡ ಸಂತಸ ಬೇರೆ ಇರಲಾರದು. ಅದೂ– ದೊಡ್ಡ ವೇದಿಕೆ (ವಿಶ್ವಕಪ್‌ ಸೆಮಿಫೈನಲ್‌)ಯಲ್ಲಿ ಮತ್ತು ನನ್ನ ತವರು ಮೈದಾನದಲ್ಲಿ ಆಗಿರುವುದು ನನ್ನ ಸಂತಸವನ್ನು ಇಮ್ಮಡಿಸಿದೆ’ ಎಂದು ಬರೆದಿದ್ದಾರೆ.

ತೆಂಡೂಲ್ಕರ್ ಅವರನ್ನು ಹಿಂದೆ ಹಾಕಿರುವುದು ತಮ್ಮ ಪಾಲಿಗೆ ಕನಸು ನನಸಾದಂತೆ ಎಂದು ಕೊಹ್ಲಿ ಸಹ ಪ್ರತಿಕ್ರಿಯಿಸಿದ್ದಾರೆ. ‘ಮತ್ತೊಬ್ಬ ಮಹಾನ್‌ ಆಟಗಾರ ನನ್ನನ್ನು ಅಭಿನಂದಿಸಿದ್ದಾರೆ. ಕನಸಿನ ಅನುಭವ ಆಗುತ್ತಿದೆ’ ಎಂದು ಅವರು ಹೇಳಿದ್ದಾರೆ.

‘ಅಣ್ಣ ಸಚಿನ್ ಸ್ಟ್ಯಾಂಡ್‌ನಲ್ಲಿದ್ದರು. ಆ ಭಾವನೆಯನ್ನು ಮಾತುಗಳಲ್ಲಿ ಹಿಡಿದಿಡಲಾಗದು. ನನ್ನ ಜೀವನಸಂಗಾತಿ, ನನ್ನ ಹೀರೊ ಎಲ್ಲರೂ ಅಲ್ಲಿದ್ದರು. ಅಭಿಮಾನಿಗಳೂ ವಾಂಖೆಡೆಯಲ್ಲಿದ್ದರು’ ಎಂದು ಇನಿಂಗ್ಸ್‌ ಬ್ರೇಕ್‌ ನಡುವೆ ಅವರು ಹೇಳಿದರು.

ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್‌ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ತಮ್ಮ ಏಕದಿನ ಕ್ರಿಕೆಟ್‌ನ 50ನೇ ಶತಕ ಗಳಿಸಿದರು. ಏಕದಿನ ಕ್ರಿಕೆಟ್‌ನಲ್ಲಿ 49 ಶತಕ ಬಾರಿಸಿದ್ದ ಸಚಿನ್ ತೆಂಡೂಲ್ಕರ್ ದಾಖಲೆ ಪತನವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.