
ಸಚಿನ್ ತೆಂಡೂಲ್ಕರ್–ಆಯುಷ್ ಮ್ಹಾತ್ರೆ
ಚಿತ್ರ: ಇನ್‌ಸ್ಟಾಗ್ರಾಂ
ಜಿಂಬಾಬ್ವೆಯಲ್ಲಿ ಐತಿಹಾಸಿಕ ಗೆಲುವು ದಾಖಲಿಸಿದ ಬಳಿಕ 19 ವರ್ಷದೊಳಗಿನವರ ಭಾರತ ತಂಡದ ನಾಯಕ ಆಯುಷ್ ಮ್ಹಾತ್ರೆ ಅವರ ಕುರಿತು ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಟ್ರೋಫಿ ಸಹಿತ ಭಾರತಕ್ಕೆ ಬಂದಿರುವ ಅವರು, ಭಾರತೀಯ ಕ್ರಿಕೆಟ್‌ನ ದಂತಕತೆ ಸಚಿನ್ ತೆಂಡೂಲ್ಕರ್ ಅವರನ್ನು ಭೇಟಿಯಾಗಿದ್ದಾರೆ.
ಹರಾರೆಯಲ್ಲಿ ನಡೆದ 19 ವರ್ಷದೊಳಗಿನವರ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಸೋಲಿಸಿದ ಭಾರತ ಯುವಪಡೆ ಆರನೇ ಬಾರಿ ಟ್ರೋಫಿ ಗೆದ್ದ ಸಾಧನೆ ಮಾಡಿತು. ಸದ್ಯ, ಭಾರತಕ್ಕೆ ಬಂದಿರುವ ಅವರು ಸಚಿನ್ ಅವರನ್ನು ಭೇಟಿಯಾಗಿದ್ದಾರೆ. ಈ ವೇಳೆ ಸಚಿನ್ ಅವರು ಯುವ ಕ್ರಿಕೆಟಿಗನಿಗೆ ತಮ್ಮ ಟೆಸ್ಟ್ ಜೆರ್ಸಿಯ ಮೇಲೆ ಹೃದಯಸ್ಪರ್ಶಿ ಶೀರ್ಷಿಕೆ ಬರೆದು ಉಡುಗೊರೆ ನೀಡಿದ್ದಾರೆ.
‘ಪ್ರಿಯ ಆಯುಷ್, ನಿಮ್ಮ ವೃತ್ತಿಜೀವನದಲ್ಲಿ ನಿಮಗೆ ಎಲ್ಲಾ ರೀತಿಯ ಯಶಸ್ಸು ಸಿಗಲಿ ಎಂದು ಹಾರೈಸುತ್ತೇನೆ’ ಎಂದು ಬರೆದ ಜೆರ್ಸಿಯ ಮೇಲೆ ಸಚಿನ್ ಅವರು ಸಹಿ ಮಾಡಿ ಆಯುಷ್‌ಗೆ ನೀಡಿದ್ದಾರೆ.
ಈ ಕುರಿತು 18 ವರ್ಷದ ಆಯುಷ್ ಮ್ಹಾತ್ರೆ, ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಮಾಸ್ಟರ್ ಬ್ಲಾಸ್ಟರ್‌ನಿಂದ ಅಮೂಲ್ಯವಾದ ಉಡುಗೊರೆ ಸ್ವೀಕರಿಸುವ ವಿಡಿಯೊವನ್ನು ಹಂಚಿಕೊಂಡಿದ್ದಾರೆ.
‘ನಾನು ನಿಮ್ಮನ್ನು ಪರದೆಯ ಮೇಲೆ ನೋಡುತ್ತಾ ಬೆಳೆದವನು. ಇಂದು ನಾನು ನಿಮ್ಮ ಮನೆಗೆ ಬಂದು ನಿಂತಿದ್ದೇನೆ, ನಿಮ್ಮ ಪ್ರಯಾಣದ ಒಂದು ತುಣುಕನ್ನು ಸಹ ನನ್ನ ಕೈಯಲ್ಲಿ ಹಿಡಿದುಕೊಂಡಿದ್ದೇನೆ’ ಎಂದು ಆಯುಷ್ ಬರೆದುಕೊಂಡಿದ್ದಾರೆ.
ಮುಂದುವರೆದು ‘ನೀವು ಇಷ್ಟು ವರ್ಷಗಳಿಂದ ಭಾರತೀಯ ಕ್ರಿಕೆಟ್ ಅನ್ನು ಹೊತ್ತುಕೊಂಡಿದ್ದೀರಿ. ಅದೇ ಗೌರವದಿಂದ ನಾನು ಇದನ್ನು ಸ್ವೀಕರಿಸುತ್ತಿದ್ದೇನೆ ಧನ್ಯವಾದಗಳು ಸರ್’ ಎಂದು ಸಚಿನ್ ತೆಂಡೂಲ್ಕರ್ ಅವರಿಗೆ ಮ್ಹಾತ್ರೆ ಧನ್ಯವಾದ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.