ADVERTISEMENT

IPL 2025 | RCB vs RR: ಕೊಹ್ಲಿ, ಸಾಲ್ಟ್‌ಗೆ– ಆರ್ಚರ್‌ ಮುಖಾಮುಖಿಗೆ ವೇದಿಕೆ

ಪಿಟಿಐ
Published 12 ಏಪ್ರಿಲ್ 2025, 23:30 IST
Last Updated 12 ಏಪ್ರಿಲ್ 2025, 23:30 IST
   

ಜೈಪುರ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಭಾನುವಾರ ನಡೆಯುವ ಐಪಿಎಲ್‌ ಪಂದ್ಯದಲ್ಲಿ ಆತಿಥೇಯ ರಾಜಸ್ಥಾನ ರಾಯಲ್ಸ್‌ ತಂಡವನ್ನು ಎದುರಿಸಲಿದ್ದು, ಉಭಯ ತಂಡಗಳು  ಗೆಲುವಿನ ಹಳಿಗೆ ಮರಳುವ ಯತ್ನದಲ್ಲಿವೆ. ಈ ಪಂದ್ಯವು ಫಿಲ್‌ ಸಾಲ್ಟ್‌, ವಿರಾಟ್‌ ಕೊಹ್ಲಿ ಎದುರು ರಾಯಲ್ಸ್‌ನ ಎಕ್ಸ್‌ಪ್ರೆಸ್‌ ವೇಗಿ ಜೋಫ್ರಾ ಆರ್ಚರ್‌ ಮುಖಾಮುಖಿಗೆ ವೇದಿಕೆಯೂ ಆಗಿದೆ.

ಆರ್‌ಸಿಬಿಯು ತವರಿನಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ಗೆ ಆರು ವಿಕೆಟ್‌ಗಳಿಂದ ಸೋತಿತ್ತು. ಸಂಜು ಸ್ಯಾಮ್ಸನ್ ಪಡೆ ತನ್ನ ಹಿಂದಿನ ಪಂದ್ಯದಲ್ಲಿ ಗುಜರಾತ್‌ ಟೈಟನ್ಸ್ ಎದುರು 58 ರನ್‌ಗಳ ಸೋಲು ಅನುಭವಿಸಿತ್ತು.

ರಜತ್ ಪಾಟೀದಾರ್ ಪಡೆ ಐದು ಪಂದ್ಯಗಳಲ್ಲಿ ಮೂರು ಗೆದ್ದು ಪಾಯಿಂಟ್‌ ಪಟ್ಟಿಯ ಮೇಲಿನ ಭಾಗದಲ್ಲಿದೆ. ಆರ್‌ಆರ್‌ ಅಷ್ಟೇ ಪಂದ್ಯಗಳಿಂದ ಎರಡು ಗೆದ್ದು ಏಳನೇ ಸ್ಥಾನದಲ್ಲಿದೆ.

ADVERTISEMENT

ಮೊದಲ ಪಂದ್ಯದಲ್ಲಿ 4 ಓವರುಗಳಲ್ಲಿ 76 ರನ್ನಿತ್ತು ಐಪಿಎಲ್‌ ಇತಿಹಾಸದಲ್ಲೇ ದುಬಾರಿ ಎನಿಸಿದ್ದ ಇಂಗ್ಲೆಂಡ್‌ನ ವೇಗಿ ಆರ್ಚರ್‌ ನಂತರ ಪುಟಿದೆದಿದ್ದಾರೆ. ಗಂಟೆಗೆ 144 ಕಿ.ಮಿ. ವೇಗದಲ್ಲಿ ಬೌಲ್ ಮಾಡಿ ಬ್ಯಾಟರ್‌ಗಳನ್ನು ಕಂಗೆಡಿಸಿದ್ದಾರೆ.‌ ಪಂಜಾಬ್ ಕಿಂಗ್ಸ್ ವಿರುದ್ಧ 25 ರನ್ನಿಗೆ 3 ವಿಕೆಟ್‌ ಪಡೆದು ತಮ್ಮ ತಂಡ ಪಂದ್ಯ ಗೆಲ್ಲಲು ಕಾರಣರಾಗಿದ್ದರು. ಟೈಟನ್ಸ್ ವಿರುದ್ಧ ಪಂದ್ಯದಲ್ಲಿ ಗಿಲ್ ಅವರನ್ನು 147.7 ಕಿ.ಮೀ. ವೇಗದ ಇನ್‌ಸ್ವಿಂಗರ್‌ ಎಸೆತದಲ್ಲಿ ಬೌಲ್ಡ್‌ ಮಾಡಿದ್ದರು.

ಕೊಹ್ಲಿ (186 ರನ್) ಮತ್ತು ಇಂಗ್ಲೆಂಡ್‌ನ ಕೀಪರ್‌ ಸಾಲ್ಟ್‌ (143 ರನ್) ಅವರನ್ನು ನಿಯಂತ್ರಿಸುವ ಸವಾಲು ಈಗ ಆರ್ಚರ್ ಮುಂದಿದೆ. ಕೊಹ್ಲಿ ಈ ಬಾರಿ ಏರಿಳಿತ ಕಂಡಿದ್ದಾರೆ. ಆದರೆ ಸಾಲ್ಟ್‌ ಪ್ರತಿ ಪಂದ್ಯದಲ್ಲಿ ಆಕ್ರಮಣಕಾರಿ ಆಟಕ್ಕೆ ಮುಂದಾಗುತ್ತಿದ್ದಾರೆ. ದೇವದತ್ತ ಪಡಿಕ್ಕಲ್ ಅವರಿಗೆ ದೊಡ್ಡ ಮೊತ್ತ ಗಳಿಸುವ ಸವಾಲು ಇದೆ.

ಪಾಟೀದಾರ್, ಟಿಮ್‌ ಡೇವಿಡ್‌ ಸಹ ಈ ಬಾರಿ ನಿರಾಸೆ ಮೂಡಿಸಿಲ್ಲ. ಲಿವಿಂಗ್‌ಸ್ಟೋನ್ ಕೆಲವು ಪಂದ್ಯಗಳಲ್ಲಿ ಮಿಂಚಿಸದ್ದಾರೆ.

ಆರ್‌ಸಿಬಿ ಪರ ವೇಗಿಗಳಾದ ಹೇಜಲ್‌ವುಡ್ ಮತ್ತು ಭುವನೇಶ್ವರ್ ಕುಮಾರ್ ಈ ಋತುವಿನಲ್ಲಿ ಉತ್ತಮವಾಗಿ ಬೌಲ್‌ ಮಾಡಿದ್ದಾರೆ. ಆದರೆ ಸ್ಪಿನ್‌ ವಿಭಾಗದಲ್ಲಿ ಸ್ಥಿರ ಪ್ರದರ್ಶನ ಮೂಡಿಬಂದಿಲ್ಲ.

ರಾಯಲ್ಸ್ ತಂಡದಲ್ಲಿ ಸಂಜು ಸ್ಯಾಮ್ಸನ್‌, ರಿಯಾನ್ ಪರಾಗ್‌, ಯಶಸ್ವಿ ಜೈಸ್ವಾಲ್ ಮತ್ತು ನಿತೀಶ್ ರಾಣಾ ಅಂಥ ಅನುಭವಿಗಳಿದ್ದಾರೆ. ಕೆಳ ಮಧ್ಯಮ ಕ್ರಮಾಂಕದಲ್ಲಿ ಧ್ರುವ್ ಜುರೇಲ್‌, ಶಿಮ್ರಾನ್ ಹೆಟ್ಮೆಯರ್‌ ಕೂಡ ಉಪಯುಕ್ತ ಕೊಡುಗೆ ನೀಡಬಲ್ಲರು.

ಪಂದ್ಯ ಆರಂಭ: ಮಧ್ಯಾಹ್ನ 3.30.

ಮುಖಾಮುಖಿ:

ಒಟ್ಟು ಪಂದ್ಯಗಳು: 32

ಆರ್‌ಸಿಬಿ ಜಯ: 15

ಆರ್‌ಆರ್‌ ಗೆಲುವು: 14

ಫಲಿತಾಂಶವಿಲ್ಲ: 3

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.