
ತಿರುವನಂತಪುರ: ವಿಕೆಟ್‌ಕೀಪರ್–ಬ್ಯಾಟರ್ ಸಂಜು ಸ್ಯಾಮ್ಸನ್ ತಮ್ಮ ತವರಿನ ಅಂಗಳದಲ್ಲಿ ಲಯಕ್ಕೆ ಮರಳುವರೇ? ಆಲ್‌ರೌಂಡ್ ಅಕ್ಷರ್ ಪಟೇಲ್ ಪೂರ್ಣಪ್ರಮಾಣದಲ್ಲಿ ಫಿಟ್ ಆಗಿ ಕಣಕ್ಕಿಳಿಯುವರೇ?
ಶನಿವಾರ ಇಲ್ಲಿ ನಡೆಯಲಿರುವ ನ್ಯೂಜಿಲೆಂಡ್ ಎದುರಿನ ಟಿ20 ಕ್ರಿಕೆಟ್ ಸರಣಿಯ ಐದನೇ ಮತ್ತು ಅಂತಿಮ ಪಂದ್ಯದಲ್ಲಿ ಭಾರತ ತಂಡವು ಉತ್ತರ ಹುಡುಕುತ್ತಿರುವ ಪ್ರಮುಖ ಪ್ರಶ್ನೆಗಳು ಇವು. ಮುಂದಿನ ತಿಂಗಳು ಆರಂಭವಾಗಲಿರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಡಲಿರುವ ಆಟಗಾರರಿಗೆ ಪೂರ್ವಭಾವಿ ಸಿದ್ಧತೆಗಾಗಿ ಸಿಗಲಿರುವ ಕೊನೆಯ ಪಂದ್ಯ ಇದಾಗಿದೆ. ಆದ್ದರಿಂದ ಮಹತ್ವ ಪಡೆದಿದೆ.
ಸದ್ಯ ಸರಣಿಯನ್ನು 3–1ರಿಂದ ಕೈವಶ ಮಾಡಿಕೊಂಡಿರುವ ಆತಿಥೇಯ ತಂಡವು ಕೊನೆಯ ಪಂದ್ಯದಲ್ಲಿಯೂ ಗೆಲುವಿನೊಂದಿಗೆ ಸಂಭ್ರಮಿಸುವ ಛಲದಲ್ಲಿದೆ. ಅದಕ್ಕಾಗಿ ಕಳೆದ ಪಂದ್ಯದಲ್ಲಿ ಆಗಿರುವ ಲೋಪಗಳನ್ನು ತಿದ್ದಿಕೊಳ್ಳಲು ಒಂದು ಅವಕಾಶವೂ ಇದಾಗಿದೆ.
ಇನಿಂಗ್ಸ್ ಆರಂಭಿಸುವ ಸಂಜು ಮತ್ತು ಅಭಿಷೇಕ್ ಶರ್ಮಾ ಅವರು ಹೆಚ್ಚು ರನ್ ಕಲೆಹಾಕಿದರೆ ಮುಂದೆ ಬರುವ ಬ್ಯಾಟರ್‌ಗಳಿಗೆ ಒತ್ತಡ ಕಡಿಮೆಯಾಗುತ್ತದೆ. ಚೇಸಿಂಗ್ ಮಾಡುವಾಗಲಂತೂ ಉತ್ತಮ ಮತ್ತು ವೇಗದ ರನ್ ಗಳಿಕೆಯ ಆರಂಭ ಮುಖ್ಯವಾಗುತ್ತದೆ. ಸರಣಿಯ ನಾಲ್ಕನೇ ಪಂದ್ಯದಲ್ಲಿ ದೊಡ್ಡ ಮೊತ್ತ ಬೆನ್ನಟ್ಟಿದ್ದ ಆತಿಥೇಯ ತಂಡಕ್ಕೆ ಪೆಟ್ಟು ಬಿದ್ದಿದ್ದು ಇದೇ ವಿಷಯದಲ್ಲಿ. ಅಭಿಷೇಕ್ ‘ಗೋಲ್ಡನ್ ಡಕ್’ ಆದರು. ಆದರೆ ಸಂಜು ಸತತ ನಾಲ್ಕನೇ ಪಂದ್ಯದಲ್ಲಿಯೂ ತಮ್ಮ ಸಾಮರ್ಥ್ಯ ತೋರಲಿಲ್ಲ. ಸೂರ್ಯಕುಮಾರ್ ಯಾದವ್ ಕೂಡ ಬೇಗನೆ ನಿರ್ಗಮಿಸಿದರು. ಇಶಾನ್ ಕಿಶನ್ ಇರಲಿಲ್ಲ. ಆದರೆ ಶಿವಂ ದುಬೆ ಏಕಾಂಗಿ ಹೋರಾಟದಿಂದಾಗಿ ತಂಡವು ಅಲ್ಪಮೊತ್ತಕ್ಕೆ ಆಲೌಟ್ ಆಗಲಿಲ್ಲ. ದುಬೆ ಅವರು ಕ್ರೀಸ್‌ನಲ್ಲಿದ್ದಷ್ಟು ಹೊತ್ತು ಗೆಲುವಿನ ಆಶಾಕಿರಣ ಇತ್ತು.
ಈ ಪಂದ್ಯದಲ್ಲಿ ಇಶಾನ್ ಕಿಶನ್ ಕಣಕ್ಕಿಳಿಯುವುದು ಬಹುತೇಕ ಖಚಿತ. ಅದರೊಂದಿಗೆ ಅಕ್ಷರ್ ಪಟೇಲ್ ಅವರ ಫಿಟ್‌ನೆಸ್ ಪರೀಕ್ಷೆ ಕೂಡ ಇದೆ.
ಕಳೆದ ಪಂದ್ಯದಲ್ಲಿ ಸ್ಪಿನ್ನರ್ ವರುಣ್ ಚಕ್ರವರ್ತಿ ಅವರಿಗೆ ವಿಶ್ರಾಂತಿ ನೀಡಲಾಗಿತ್ತು. ಅದರಿಂದಾಗಿ ಬೌಲಿಂಗ್ ವಿಭಾಗದಲ್ಲಿ ಕೊರತೆ ಕಂಡಿತು. ವೇಗಿ ಹರ್ಷಿತ್ ರಾಣಾ ದುಬಾರಿಯಾಗಿದ್ದರು. ವಿಕೆಟ್ ಕೂಡ ಪಡೆಯಲಿಲ್ಲ. ಕುಲದೀಪ್ ಯಾದವ್ ಮತ್ತು ವೇಗಿ ಅರ್ಷದೀಪ್ ಸಿಂಗ್ ಅವರು ತಲಾ 2 ವಿಕೆಟ್ ಗಳಿಸಿದ್ದರು. ಆದರೆ ಟಿಮ್ ಸೀಫರ್ಡ್ ಮತ್ತು ಡೆವಾನ್ ಕಾನ್ವೆ ಅವರನ್ನು ಕಟ್ಟಿಹಾಕುವಲ್ಲಿ ಬೌಲರ್‌ಗಳು ಯಶಸ್ವಿಯಾಗಲಿಲ್ಲ. ಈ ಪಂದ್ಯಕ್ಕೆ ವರುಣ್ ಮರಳುವ ನಿರೀಕ್ಷೆ ಇದೆ.
ಇಲ್ಲಿಯ ಪಿಚ್ ಕೂಡ ಸ್ಪಿನ್ನರ್‌ಗಳಿಗೆ ಹೆಚ್ಚು ನೆರವು ನೀಡುವ ಸಾಧ್ಯತೆ ಇದೆ. ಆದ್ದರಿಂದ ಟಾಸ್ ಗೆದ್ದವರು ತೆಗೆದುಕೊಳ್ಳುವ ತೀರ್ಮಾನವೂ ಮುಖ್ಯವಾಗಲಿದೆ.
ಪಂದ್ಯ ಆರಂಭ: ರಾತ್ರಿ 7
ನೇರಪ್ರಸಾರ: ಸ್ಟಾರ್ ಸ್ಫೋರ್ಟ್ಸ್, ಜಿಯೊಹಾಟ್‌ಸ್ಟಾರ್ ಆ್ಯಪ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.