ADVERTISEMENT

ಜಮೈಕಾದಲ್ಲಿ ವಿದಾಯದ ಪಂದ್ಯ ಆಡಲು ಬಯಸಿದ ಕ್ರಿಸ್ ಗೇಲ್

ಪಿಟಿಐ
Published 7 ನವೆಂಬರ್ 2021, 11:00 IST
Last Updated 7 ನವೆಂಬರ್ 2021, 11:00 IST
ಕ್ರಿಸ್ ಗೇಲ್
ಕ್ರಿಸ್ ಗೇಲ್   

ದುಬೈ: ಜಮೈಕಾದ ಅಭಿಮಾನಿಗಳ ಮುಂದೆ ತಮ್ಮ ವಿದಾಯದ ಪಂದ್ಯವನ್ನು ಆಡಲು ಬಯಸುವುದಾಗಿ ವೆಸ್ಟ್‌ಇಂಡೀಸ್‌ನ ದೈತ್ಯ ಆಟಗಾರ ಕ್ರಿಸ್ ಗೇಲ್ ತಿಳಿಸಿದ್ದಾರೆ.

ಐಸಿಸಿ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ವೆಸ್ಟ್‌ಇಂಡೀಸ್ ಸೋಲು ಅನುಭವಿಸಿತ್ತು. ಇದು 42 ವರ್ಷದ ಗೇಲ್ ಅವರ ಕೊನೆಯ ಪಂದ್ಯ ಎಂದೇ ಅಂದಾಜಿಸಲಾಗಿದೆ.

ಇತ್ತಂಡಗಳ ಆಟಗಾರರು ಗೇಲ್ ಅವರಿಗೆ ಗೌರವವನ್ನು ಸಲ್ಲಿಸಿದರು. ಗೇಲ್ ಕೂಡ ಅಭಿಮಾನಿಗಳಿಗೆ ಬ್ಯಾಟ್ ಬೀಸುತ್ತಾ ನಿರ್ಗಮಿಸುವ ಸೂಚನೆ ನೀಡಿದರು.

ಬಳಿಕ ಈ ಕುರಿತು ಕೇಳಿದಾಗ ನಾನಿನ್ನೂ ವಿದಾಯ ಹೇಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೂ ನಿವೃತ್ತಿಯಾಗುವ ಸುಳಿವನ್ನು ನೀಡಿದ್ದಾರೆ.

'ನಾನು ಅರ್ಧದಷ್ಟು ನಿವೃತ್ತಿಯಾಗಿದ್ದೇನೆ. ಬಹುಶಃ ಕೊನೆಯ ಪಂದ್ಯ ಆಡಬೇಕಿದೆ. ಇನ್ನೊಂದು ವಿಶ್ವಕಪ್ ಆಡಲು ಇಷ್ಟಪಡುತ್ತೇನೆ. ಆದರೆ ನನಗೆ ಅವಕಾಶ ಸಿಗಲಿದೆ ಎಂದು ನಾನು ಭಾವಿಸುವುದಿಲ್ಲ' ಎಂದು ಹೇಳಿದ್ದಾರೆ.

'ಇಂದಿನ ಪಂದ್ಯವನ್ನು ತುಂಬಾನೇ ಆನಂದಿಸಿದ್ದೇನೆ. ಇದು ನನ್ನ ಕೊನೆಯ ವಿಶ್ವಕಪ್ ಪಂದ್ಯ ಆಗಿರುವುದರಿಂದ ಅಭಿಮಾನಿಗಳೊಂದಿಗೆ ಬೆರೆತುಕೊಂಡು ಸಂವಾದ ನಡೆಸಿದ್ದೇನೆ'ಎಂದು ಹೇಳಿದರು.

'ಇದೊಂದು ಅಧ್ಭುತ ವೃತ್ತಿಜೀವನ. ನಾನು ವಿದಾಯವನ್ನು ಘೋಷಿಸಿಲ್ಲ. ಜಮೈಕಾದ ಅಭಿಮಾನಿಗಳ ಮುಂದೆ ಒಂದು ಪಂದ್ಯ ಆಡಿ ವಿದಾಯ ಹೇಳಲು ಬಯಸುತ್ತೇನೆ. ನೋಡೋಣ, ಇಲ್ಲದಿದ್ದರೆ ಡ್ವೇನ್ ಬ್ರಾವೊ ಜೊತೆ ಎಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸುತ್ತೇನೆ' ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.