ADVERTISEMENT

T-20 WC; ದಕ್ಷಿಣ ಆಫ್ರಿಕಾ ಎದುರು ಅಮೋಘ ಜಯ: ಪಾಕ್ ಸೆಮಿ ಆಸೆಗೆ ಜೀವ

ದ. ಆಫ್ರಿಕಾಕ್ಕೆ ಸೋಲು; ಕುತೂಹಲ ಕೆರಳಿಸಿದ ಎರಡನೇ ಗುಂಪಿನ ಪೈಪೋಟಿ

ಪಿಟಿಐ
Published 3 ನವೆಂಬರ್ 2022, 19:41 IST
Last Updated 3 ನವೆಂಬರ್ 2022, 19:41 IST
ವಿಕೆಟ್ ಗಳಿಸಿದ ಶಾದಾಬ್ ಖಾನ್ ಅವರನ್ನು ಅಭಿನಂದಿಸಿದ ಸಹ ಆಟಗಾರರು –ಎಎಫ್‌ಪಿ ಚಿತ್ರ
ವಿಕೆಟ್ ಗಳಿಸಿದ ಶಾದಾಬ್ ಖಾನ್ ಅವರನ್ನು ಅಭಿನಂದಿಸಿದ ಸಹ ಆಟಗಾರರು –ಎಎಫ್‌ಪಿ ಚಿತ್ರ   

ಸಿಡ್ನಿ:‌ಶಾದಾಬ್ ಖಾನ್ ಆಲ್‌ರೌಂಡ್ ಆಟದ ಬಲದಿಂದ ಪಾಕಿಸ್ತಾನ ಕ್ರಿಕೆಟ್ ತಂಡವು ಗುರುವಾರ ದಕ್ಷಿಣ ಆಫ್ರಿಕಾ ಎದುರು ಅಮೋಘ ಜಯ ಸಾಧಿಸಿತು.

ಇದರೊಂದಿಗೆ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್ ಪ್ರವೇಶಿಸುವ ಪಾಕ್ ತಂಡದ ಕನಸು ಜೀವಂತವಾಗುಳಿಯಿತು. ಸಿಡ್ನಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಪಾಕಿಸ್ತಾನ ತಂಡವು ಶಾದಾಬ್ ಖಾನ್ (52; 22ಎಸೆತ) ಮಿಂಚಿನ ಅರ್ಧಶತಕದ ಬಲದಿಂದ 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 185 ರನ್‌ ಗಳಿಸಿತು.

ದಕ್ಷಿಣ ಆಫ್ರಿಕಾ ಇನಿಂಗ್ಸ್‌ಗೆ ಮಳೆ ಅಡ್ಡಿಯಾಯಿತು. ಪರಿಷ್ಕತ ಗುರಿ ಬೆನ್ನಟ್ಟಿದ ತಂಡಕ್ಕೆ ಬೌಲಿಂಗ್‌ನಲ್ಲಿಯೂ ಮಿಂಚಿದ ಶಾದಾಬ್ (16ಕ್ಕೆ2) ಹಾಗೂ ಶಹೀನ್ ಶಾ ಆಫ್ರಿದಿ (14ಕ್ಕೆ3) ಸೋಲಿನ ರುಚಿ ತೋರಿಸಿದರು. ಪಾಕ್ ತಂಡವು 33 ರನ್‌ಗಳಿಂದ ಜಯಿಸಿತು.

ADVERTISEMENT

ಮಳೆಯಿಂದಾಗಿ ಕೆಲಹೊತ್ತು ಆಟ ನಿಂತ ಕಾರಣ ಡಕ್ವರ್ಥ್ ಲೂಯಿಸ್ ನಿಯಮದ ಪ್ರಕಾರ
ದಕ್ಷಿಣ ಆಫ್ರಿಕಾ ತಂಡಕ್ಕೆ 14 ಓವರ್‌ಗಳಲ್ಲಿ 142 ರನ್‌ಗಳನ್ನು ಗಳಿಸುವ ಗುರಿ ನೀಡಲಾಗಿತ್ತು. ತೆಂಬಾ ಬವುಮಾ ಬಳಗದ ಬ್ಯಾಟಿಂಗ್ ಪಡೆ ವೈಫಲ್ಯ ಅನುಭವಿಸಿತು.

ಈ ಜಯದೊಂದಿಗೆ ಪಾಕಿಸ್ತಾನ ತಂಡವು ಒಟ್ಟು ನಾಲ್ಕು ಅಂಕಗಳೊಂದಿಗೆ ಸೂಪರ್ 12ರ ಎರಡನೇ ಗುಂಪಿನಲ್ಲಿ ಮೂರನೇ ಸ್ಥಾನಕ್ಕೇರಿತು. ಭಾರತವು ಅರು ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿ ಮುಂದುವರಿದಿದೆ. ಐದು ಅಂಕ ಗಳಿಸಿರುವ ದಕ್ಷಿಣ ಆಫ್ರಿಕಾ ಎರಡನೇ ಸ್ಥಾನದಲ್ಲಿದೆ.

ಈ ಮೂರು ತಂಡಗಳೂ ತಲಾ ಇನ್ನೊಂದು ಪಂದ್ಯ ಆಡಬೇಕಿದೆ. ಪಾಕ್ ತಂಡವು ತನ್ನ ಪಾಲಿನ ಕೊನೆಯ ಪಂದ್ಯದಲ್ಲಿ ಬಾಂಗ್ಲಾದೇಶದ ಎದುರು ಆಡಲಿದೆ. ಆ ಪಂದ್ಯದಲ್ಲಿ ಗೆಲ್ಲುವ ತಂಡದ ಅಂಕವು ಆರಕ್ಕೇರಲಿದೆ. ಭಾರತ ತಂಡವು ತನ್ನ ಕೊನೆಯ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ ಗೆದ್ದರೆ ಸೆಮಿ ಹಾದಿ ಸುಗಮ. ಇಲ್ಲದಿದ್ದರೆ ಒಟ್ಟು ರನ್‌ರೇಟ್‌ ಲೆಕ್ಕಾಚಾರ ಮುನ್ನೆಲೆಗೆ ಬರಲಿದೆ. ದಕ್ಷಿಣ ಆಫ್ರಿಕಾ ತಂಡವು ನಾಲ್ಕನೇ ಪಂದ್ಯದಲ್ಲಿ ನೆದರ್ಲೆಂಡ್ಸ್‌ ಎದುರು ಗೆದ್ದರೆ ಏಳು ಅಂಕಗಳೊಂದಿಗೆ ಸೆಮಿಫೈನಲ್ ಪ್ರವೇಶಿಸಲಿದೆ. ನಾಲ್ಕು ಪಂದ್ಯಗಳನ್ನು ಆಡಿರುವ ನೆದರ್ಲೆಂಡ್ಸ್‌ ಮೂರರಲ್ಲಿ ಸೋತು, ಒಂದರಲ್ಲಿ ಗೆದ್ದಿದೆ. ನಾಲ್ಕರ ಘಟ್ಟದ ಹಾದಿಯಿಂದ ಹೊರಬಿದ್ದಿದೆ.

ಸಂಕ್ಷಿಪ್ತ ಸ್ಕೋರು: ಪಾಕಿಸ್ತಾನ: 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 185 (ಮೊಹಮ್ಮದ್ ಹ್ಯಾರಿಸ್ 28, ಇಫ್ತಿಕಾರ್ ಅಹಮದ್ 51, ಮೊಹಮ್ಮದ್ ನವಾಜ್ 28, ಶಾದಾಬ್ ಖಾನ್ 52, ಎನ್ರಿಚ್ ನಾಕಿಯಾ 41ಕ್ಕೆ4) ದಕ್ಷಿಣ ಆಫ್ರಿಕಾ: 14 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 108 (ತೆಂಬಾ ಬವುಮಾ 36, ಏಡನ್ ಮರ್ಕರಂ 20, ಹೆನ್ರಿಚ್ ಕ್ಲಾಸೆನ್ 15, ಟ್ರಿಸ್ಟನ್ ಸ್ಟಬ್ಸ್ 18, ಶಾಹೀನ್ ಶಾ
ಆಫ್ರಿದಿ 14ಕ್ಕೆ3, ಶಾದಾಬ್ ಖಾನ್ 16ಕ್ಕೆ2) ಫಲಿತಾಂಶ: ಪಾಕಿಸ್ತಾನ ತಂಡಕ್ಕೆ 33 ರನ್‌ಗಳ ಜಯ (ಡಿಎಲ್‌ಎಸ್ ಪದ್ಧತಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.