ADVERTISEMENT

2007ರಲ್ಲಿ ನಾಯಕನಾದ ಧೋನಿ; ಆಯ್ಕೆ ಹಿಂದಿನ ಘಟನೆಗಳ ತೆರೆದಿಟ್ಟ ಪವಾರ್

ಏಜೆನ್ಸೀಸ್
Published 7 ಮಾರ್ಚ್ 2021, 14:07 IST
Last Updated 7 ಮಾರ್ಚ್ 2021, 14:07 IST
ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ
ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ   

ನವದೆಹಲಿ: 2007ರಲ್ಲಿ ಭಾರತ ಕ್ರಿಕೆಟ್ ತಂಡದ ನಾಯಕ ಸ್ಥಾನಕ್ಕೆ ಮಹೇಂದ್ರ ಸಿಂಗ್ ಧೋನಿ ಹೆಸರನ್ನು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೇಗೆ ಸೂಚಿಸಿದರು ಎಂಬುದನ್ನು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಹಾಗೂ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಮಾಜಿ ಅಧ್ಯಕ್ಷ ಶರದ್ ಪವಾರ್ ಭಾನುವಾರ ಬಹಿರಂಗಪಡಿಸಿದ್ದಾರೆ.

ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪವಾರ್, 2007ರಲ್ಲಿ ರಾಹುಲ್ ದ್ರಾವಿಡ್ನಾಯಕತ್ವತೊರೆಯಲು ಬಯಸಿದಾಗ ಹೊಸ ನಾಯಕರನ್ನು ಹುಡುಕಾಡುವುದು ಅನಿವಾರ್ಯವೆನಿಸಿತ್ತು ಎಂದು ಹೇಳಿದರು.

'2007ರಲ್ಲಿ ಭಾರತ ತಂಡವು ಇಂಗ್ಲೆಂಡ್‌ಗೆ ತೆರಳಿತ್ತು. ಆಗ ರಾಹುಲ್ ದ್ರಾವಿಡ್ ನಾಯಕರಾಗಿದ್ದರು. ಆ ಸಂದರ್ಭದಲ್ಲಿ ನಾನು ಇಂಗ್ಲೆಂಡ್‌ನಲ್ಲಿದ್ದೆ. ನನ್ನನ್ನು ಭೇಟಿಯಾದ ರಾಹುಲ್ ದ್ರಾವಿಡ್ ನಾಯಕರಾಗಿ ಮುಂದುವರಿಯಲು ಬಯಸುವುದಿಲ್ಲ ಎಂದು ಹೇಳಿದರು. ನಾಯಕತ್ವವು ಬ್ಯಾಟಿಂಗ್ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂದು ಹೇಳಿದರು. ಹಾಗಾಗಿ ನಾಯಕತ್ವ ಜವಾಬ್ದಾರಿಯಿಂದ ಮುಕ್ತಗೊಳಿಸಬೇಕು' ಎಂದು ಆಗ್ರಹಿಸಿದರು.

ADVERTISEMENT

ಆಬಳಿಕ ನಾನು ಸಚಿನ್ ತೆಂಡೂಲ್ಕರ್ ಅವರಲ್ಲಿ ತಂಡವನ್ನು ಮುನ್ನಡೆಸಲು ವಿನಂತಿ ಮಾಡಿಕೊಂಡಿದ್ದೆ. ಅವರು ಕೂಡಾ ಅದನ್ನು ನಿರಾಕರಿಸಿದರು ಎಂದು ಪವಾರ್ ವಿವರಿಸಿದರು.

'ನೀವು ಹಾಗೂ ದ್ರಾವಿಡ್ ಇಬ್ಬರೂ ತಂಡವನ್ನು ಮುನ್ನಡೆಸಲು ಬಯಸದಿದ್ದರೆ, ತಂಡವನ್ನು ಹೇಗೆ ಮುಂದಕ್ಕೆ ಕೊಂಡೊಯ್ಯಬಹುದು ಎಂದು ನಾನು ಸಚಿನ್ ಅವರನ್ನು ಪ್ರಶ್ನಿಸಿದ್ದೆ. ಆಗ ಅವರು ತಂಡವನ್ನು ಮುನ್ನಡೆಸಬಲ್ಲ ಮತ್ತೊಬ್ಬ ಆಟಗಾರರನ್ನು ಸಲಹೆ ಮಾಡಿದರು. ಅವರೇ ಎಂ.ಎಸ್. ಧೋನಿ. ನಂತರ ನಾವು ಧೋನಿಗೆ ನಾಯಕತ್ವವನ್ನು ವಹಿಸಿದೆವು' ಎಂದು ಪವಾರ್ ತಿಳಿಸಿದರು.

2007ರಲ್ಲಿ ಏಕದಿನ ವಿಶ್ವಕಪ್‌ನಲ್ಲಿ ದ್ರಾವಿಡ್ ನಾಯಕತ್ವದಲ್ಲಿ ಭಾರತ ಲೀಗ್ ಹಂತದಿಂದಲೇ ಹೊರನಡೆದಿತ್ತು. ಅಲ್ಲದೆ ವ್ಯಾಪಕ ಟೀಕೆಗೆಒಳಗಾಗಿತ್ತು. ಅದೇ ವರ್ಷ ಧೋನಿಯನ್ನು ನಾಯಕರನ್ನಾಗಿ ನೇಮಕಗೊಳಿಸಿ ಟಿ20 ವಿಶ್ವಕಪ್‌ಗೆ ರವಾನಿಸಲಾಯಿತು. ಅಲ್ಲಿಂದ ಬಳಿಕ ನಡೆದಿದ್ದು ಇತಿಹಾಸವೇ ಸರಿ.

ಧೋನಿ ನಾಯಕತ್ವದಲ್ಲಿ ಭಾರತ 2007ರ ಚೊಚ್ಚಲ ಟಿ20 ವಿಶ್ವಕಪ್, 2011ರಲ್ಲಿ ಏಕದಿನ ವಿಶ್ವಕಪ್ ಮತ್ತು ಐಸಿಸಿ ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರಿತ್ತು.

2013ರಲ್ಲಿ ಚಾಂಪಿಯನ್ಸ್ ಟ್ರೋಫಿ ಗೆಲ್ಲುವುದರೊಂದಿಗೆ ಎಲ್ಲ ಮೂರು ಪ್ರಮುಖ ಐಸಿಸಿ ಟ್ರೋಫಿಗಳನ್ನು ಗೆದ್ದ ವಿಶ್ವದ ಮೊದಲ ಹಾಗೂ ಏಕಮಾತ್ರ ನಾಯಕ ಎಂಬ ಬಿರುದಿಗೆ ಧೋನಿ ಪಾತ್ರರಾದರು.

ಅಂದ ಹಾಗೆ 2005ನೇ ಇಸವಿಯಿಂದ 2008ರ ವರೆಗೆ ಶರದ್ ಪವಾರ್, ಬಿಸಿಸಿಐ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.