ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ
(ಪ್ರಜಾವಾಣಿ ಚಿತ್ರ)
ನವದೆಹಲಿ: ಭಾರತ ಕ್ರಿಕೆಟ್ ತಂಡದ ಅನುಭವಿ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರು ರಣಜಿ ಟ್ರೋಫಿ ಟೂರ್ನಿಯಲ್ಲಿ ಆಡಬೇಕು ಎಂದು ವೀಕ್ಷಕ ವಿವರಣೆಗಾರ ರವಿಶಾಸ್ತ್ರಿ ಹೇಳಿದ್ದಾರೆ.
ಈಚೆಗೆ ಆಸ್ಟ್ರೇಲಿಯಾದಲ್ಲಿ ಬಾರ್ಡರ್–ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಭಾರತ ತಂಡವು 1–3ರಿಂದ ಸೋತಿತ್ತು. ಕೊನೆಯ ಟೆಸ್ಟ್ ನಂತರದ ಪತ್ರಿಕಾಗೋಷ್ಠಿಯಲ್ಲಿ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರು, ‘ಆಟಗಾರರು ರಾಷ್ಟ್ರೀಯ ತಂಡದಿಂದ ಬಿಡುವು ಲಭಿಸಿದಾಗ ದೇಶಿ ಟೂರ್ನಿಗಳಲ್ಲಿ ಆಡಬೇಕು’ ಎಂದು ಹೇಳಿದ್ದರು. ರೋಹಿತ್ ಮತ್ತು ವಿರಾಟ್ ಅವರು ಈ ಸರಣಿಯಲ್ಲಿ ಸತತ ವೈಫಲ್ಯ ಅನುಭವಿಸಿದ್ದರು. ಇದರಿಂದಾಗಿ ಬಹಳಷ್ಟು ಟೀಕೆಗಳಿಗೂ ಅವರು ಗುರಿಯಾಗಿದ್ದಾರೆ. ಆದ್ದರಿಂದ ಅವರು ದೇಶಿ ಟೂರ್ನಿಗಳಲ್ಲಿ ಆಡಿ ಲಯಕ್ಕ ಮರಳಬೇಕು ಎಂದು ರವಿಶಾಸ್ತ್ರಿ ಪ್ರತಿಪಾದಿಸಿದ್ದಾರೆ.
‘ಅವರಿಗೆ ಇನ್ನೊಂದು ಅಂತರರಾಷ್ಟ್ರೀಯ ಟೂರ್ನಿಯಲ್ಲಿ ಆಡುವ ಮುನ್ನ ಸಮಯಾವಕಾಶವಿದ್ದರೆ, ರಣಜಿ ಟ್ರೋಫಿ ಟೂರ್ನಿಯಲ್ಲಿ ಆಡಬೇಕು. ಎರಡು ಕಾರಣಗಳಿಗಾಗಿ ದೇಶಿ ಟೂರ್ನಿಯಲ್ಲಿ ಆಡಬೇಕು. ಮೊದಲನೆಯದ್ದು ಪ್ರಸಕ್ತ ಯುವ ಪೀಳಿಗೆಯ ಆಟಗಾರರೊಂದಿಗೆ ಬೆರೆತು ಅವರಿಗೆ ನಿಮ್ಮ ಅನುಭವ ಹಂಚಿಕೊಳ್ಳಬಹುದು. ಎಲ್ಲಕ್ಕಿಂತ ಮುಖ್ಯವಾಗಿ ಹೆಚ್ಚಿನ ಅವಧಿಯಲ್ಲಿ ಸ್ಪಿನ್ ಬೌಲಿಂಗ್ ಎದುರಿಸಬಹುದು’ ಎಂದು ಶಾಸ್ತ್ರಿ ಅವರು ಐಸಿಸಿ ರಿವೀವ್ ಕಾರ್ಯಕ್ರಮದಲ್ಲಿ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ರಿಕಿ ಪಾಂಟಿಂಗ್ ಜೊತೆಗಿನ ಸಂವಾದದಲ್ಲಿ ಹೇಳಿದರು.
‘ಸ್ಪಿನ್ ಸ್ನೇಹಿ ಪಿಚ್‌ಗಳಲ್ಲಿ ಭಾರತದ ಸಾಧನೆಗಳ ಇತಿಹಾಸ ನೋಡಿ. ಅಷ್ಟೇನೂ ಉತ್ತಮವಾಗಿಲ್ಲ. ಎದುರಾಳಿ ತಂಡದಲ್ಲಿ ಉತ್ತಮ ಸ್ಪಿನ್ನರ್‌ಗಳು ಇದ್ದಾಗ ಭಾರತಕ್ಕೆ ಕಠಿಣ ಸವಾಲು ಎದುರಾಗಿದೆ. ಭಾರತ ತಂಡಕ್ಕೆ ವಿದೇಶಿ ಸ್ಪಿನ್ನರ್‌ಗಳು ಕಟ್ಟಿಹಾಕಿದ ಹಲವು ಉದಾಹರಣೆಗಳು ಇವೆ’ ಎಂದು ವಿಶ್ಲೇಷಿಸಿದರು.
ವಿರಾಟ್ ಮತ್ತು ರೋಹಿತ್ ಅವರ ಟೆಸ್ಟ್ ಕ್ರಿಕೆಟ್ ಭವಿಷ್ಯದ ಕುರಿತು ಪ್ರತಿಕ್ರಿಯಿಸಿದ ಅವರು, ‘ಮುಂಬರುವ ಟೂರ್ನಿಗಳಲ್ಲಿ (ಇಂಗ್ಲೆಂಡ್ ಎದುರಿನ ಏಕದಿನ ಕ್ರಿಕೆಟ್ ಸರಣಿ, ಚಾಂಪಿಯನ್ಸ್ ಟ್ರೋಫಿ) ಅವರು ಹೇಗೆ ಆಡಲಿದ್ದಾರೆಂಬುದು ಮುಖ್ಯವಾಗಲಿದೆ. ಸಾಧನೆಯ ಹಸಿವು ಬಹಳ ಮುಖ್ಯ. ಒಬ್ಬರಿಗೆ 36, ಇನ್ನೊಬ್ಬರಿಗೆ 38 ವರ್ಷ ವಯಸ್ಸಾಗಿದೆ. ಅವರಿಗೆ ತಮ್ಮ ಹಸಿವಿನ ಬಗ್ಗೆ ಗೊತ್ತಿರುತ್ತದೆ. ತಾವು ಸಾಕಷ್ಟು ಸಾಧಿಸಿದ್ದೇವೆ ಎಂದು ಅನ್ಕೊಂಡರೆ ಹೊರನಡೆಯಬಹುದು’ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ರಿಕಿ ಪಾಂಟಿಂಗ್, ‘ವಿರಾಟ್ ಅವರು ತಮ್ಮ ಈ ಹಂತವನ್ನು ಯಾವ ರೀತಿ ನೋಡುತ್ತಿದ್ದಾರೆಂಬುದು ಇಲ್ಲಿ ಪ್ರಮುಖ ಸವಾಲು. ಅವರು ಲಯಕ್ಕೆ ಮರಳಲು ಶ್ರಮಪಟ್ಟಷ್ಟೂ ಬ್ಯಾಟಿಂಗ್ ಹೆಚ್ಚು ಕಷ್ಟವಾಗುತ್ತದೆ. ಕಠಿಣ ಸವಾಲಿನಿಂದ ಹೊರಬರಲು ಪ್ರಯತ್ನಿಸಿದಷ್ಟೂ ಅದು ಕ್ಲಿಷ್ಟವಾಗುತ್ತದೆ. ನಾನು ಆಡುವ ಸಂದರ್ಭದಲ್ಲಿ ಎಷ್ಟೋ ಬಾರಿ ರನ್ ಗಳಿಕೆಗಿಂತ ಔಟಾಗದೇ ಇರುವ ಬಗ್ಗೆ ಯೋಚಿಸುತ್ತಿದ್ದೆ. ಅದರಲ್ಲಿ ಪೂರ್ಣವಾಗಿ ಯಶಸ್ವಿಯಾಗುತ್ತಿರಲಿಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.