ADVERTISEMENT

ಆಂತರಿಕ ರಕ್ತಸ್ರಾವ: ಸಿಡ್ನಿ ಆಸ್ಪತ್ರೆಯ ಐಸಿಯುನಲ್ಲಿ ಅಯ್ಯರ್‌ಗೆ ಚಿಕಿತ್ಸೆ

ಪಿಟಿಐ
Published 27 ಅಕ್ಟೋಬರ್ 2025, 6:52 IST
Last Updated 27 ಅಕ್ಟೋಬರ್ 2025, 6:52 IST
<div class="paragraphs"><p>ಗಾಯಗೊಂಡ ಶ್ರೇಯಸ್ ಅಯ್ಯರ್ ಅವರನ್ನು ಪೆವಿಲಿಯನ್‌ಗೆ ಕರೆದೊಯ್ದ ನೆರವು ಸಿಬ್ಬಂದಿ&nbsp;</p></div>

ಗಾಯಗೊಂಡ ಶ್ರೇಯಸ್ ಅಯ್ಯರ್ ಅವರನ್ನು ಪೆವಿಲಿಯನ್‌ಗೆ ಕರೆದೊಯ್ದ ನೆರವು ಸಿಬ್ಬಂದಿ 

   

ನವದೆಹಲಿ: ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಏಕದಿನ ಪಂದ್ಯದಲ್ಲಿ ಪಕ್ಕೆಲುಬಿನ ಗಾಯಕ್ಕೆ ತುತ್ತಾಗಿ ಆಂತರಿಕ ರಕ್ತಸ್ರಾವದಿಂದ ಬಳಲುತ್ತಿರುವ ಭಾರತ ಏಕದಿನ ಕ್ರಿಕೆಟ್ ತಂಡದ ಉಪನಾಯಕ ಶ್ರೇಯಸ್ ಅಯ್ಯರ್ ಅವರನ್ನು ಸಿಡ್ನಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಅಲೆಕ್ಸ್ ಕ್ಯಾರಿ ಬಾರಿಸಿದ ಚೆಂಡನ್ನು ಹಿಡಿಯಲು ಹಿಂದಕ್ಕೆ ಓಡಿ ಅದ್ಭುತ ಕ್ಯಾಚ್ ಪಡೆದುಕೊಂಡಿದ್ದರು. ಆ ಸಂದರ್ಭದಲ್ಲಿ ಅಯ್ಯರ್ ಪಕ್ಕೆಲುಬಿನ ಗಾಯಕ್ಕೆ ಒಳಗಾಗಿ ಮೈದಾನದಿಂದ ಹೊರಬಂದಿದ್ದರು. ಮಾತ್ರವಲ್ಲ, ಡ್ರೆಸ್ಸಿಂಗ್ ಕೋಣೆಗೆ ಬರುತ್ತಿದ್ದಂತೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ADVERTISEMENT

‘ಶ್ರೇಯಸ್ ಅಯ್ಯರ್ ಕಳೆದ ಎರಡು ದಿನಗಳಿಂದ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವರದಿಯಲ್ಲಿ ಆಂತರಿಕ ರಕ್ತಸ್ರಾವವಾಗಿರುವುದು ಪತ್ತೆಯಾಗಿದೆ. ಕೂಡಲೆ ಅವರನ್ನು ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಗಿದೆ. ರಕ್ತಸ್ರಾವದಿಂದ ಸೋಂಕು ಹರಡುವುದನ್ನು ತಪ್ಪಿಸುವ ಉದ್ದೇಶದಿಂದ ಚೇತರಿಕೆಯ ಆಧಾರದಲ್ಲಿ ಅವರನ್ನು ಎರಡರಿಂದ ಏಳು ದಿನಗಳ ಕಾಲ ವೈದ್ಯರ ಮೇಲ್ವಿಚಾರಣೆಯಲ್ಲಿಡಬೇಕಾಗುತ್ತದೆ’ ಎಂದು ಮೂಲಗಳು ಪಿಟಿಐಗೆ ಮಾಹಿತಿ ನೀಡಿದ್ದಾರೆ.

‘ಅಯ್ಯರ್ ಗಾಯದ ಗಂಭೀರತೆಯನ್ನು ಪರಿಗಣಿಸಿ, ಅವರು ಡ್ರೆಸ್ಸಿಂಗ್‌ ರೂಮ್‌ಗೆ ಬರುತ್ತಿದ್ದಂತೆ ಬಿಸಿಸಿಐ ವೈದ್ಯಕೀಯ ತಂಡ ಯಾವುದೇ ಪ್ರಾಥಮಿಕ ಚಿಕಿತ್ಸೆ ನೀಡದೆ ನೇರವಾಗಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಈಗ ಅವರ ಆರೋಗ್ಯ ಸ್ಥಿರವಾಗಿದೆ. ತಕ್ಷಣ ಆಸ್ಪತ್ರೆಗೆ ಕರೆತರದಿದ್ದರೆ ಅವರ ಸ್ಥಿತಿ ಗಂಭೀರವಾಗುವ ಸಾಧ್ಯತೆ ಇತ್ತು. ಅವರು ಶೀಘ್ರದಲ್ಲೇ ಗುಣಮುಖರಾಗುತ್ತಾರೆ’ ಎಂದು ಮೂಲಗಳು ತಿಳಿಸಿವೆ.

ಆರಂಭದಲ್ಲಿ ಅಯ್ಯರ್ ಸುಮಾರು ಮೂರು ವಾರಗಳ ಕಾಲ ಆಟದಿಂದ ಹೊರಗುಳಿಯಬೇಕಾಗುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಈಗಿನ ಸ್ಥಿತಿ ಗಮನಿಸಿದರೆ ಅವರ ಚೇತರಿಕೆಯ ಅವಧಿ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.