
ಸಾಂಗ್ಲಿ (ಮಹಾರಾಷ್ಟ್ರ): ಭಾರತ ಮಹಿಳಾ ಕ್ರಿಕೆಟ್ ತಂಡದ ತಾರಾ ಬ್ಯಾಟರ್ ಸ್ಮೃತಿ ಮಂದಾನ ಹಾಗೂ ಸಂಗೀತಗಾರ ಪಲಾಶ್ ಮುಚ್ಛಲ್ ಅವರ ವಿವಾಹ ಮುಂದೂಡಿಕೆಯಾಗಿದೆ. ಮಂದಾನ ಅವರ ತಂದೆ ಶ್ರೀನಿವಾಸ್ ಅವರಿಗೆ ಎದೆನೋವು ಕಾಣಿಸಿಕೊಂಡಿದ್ದರಿಂದ, ಭಾನುವಾರ ನಡೆಯಬೇಕಿದ್ದ ವಿವಾಹ ಸಮಾರಂಭ ರದ್ದಾಗಿದೆ.
ಮಂದಾನ ಅವರು ತಂದೆಯವರೊಂದಿಗೆ ಭಾವನಾತ್ಮಕ ಬಾಂಧವ್ಯ ಹೊಂದಿದ್ದಾರೆ. ತಂದೆಯವರ ಚೇತರಿಕೆವರೆಗೆ ಮದುವೆಯಾಗದಿರಲು ನಿರ್ಧರಿಸಿದ್ದಾರೆ ಎಂದು ಮಂದಾನ ಅವರ ಮ್ಯಾನೇಜರ್ ತುಹೀನ್ ಮಿಶ್ರಾ ಹೇಳಿದ್ದಾರೆ.
ಭಾನುವಾರ ಬೆಳಿಗ್ಗೆ ಉಪಹಾರ ಸೇವನೆ ವೇಳೆ ಶ್ರೀನಿವಾಸ್ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು. ಹೀಗಾಗಿ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಪರಿಸ್ಥಿತಿ ಹೀಗಿರುವ ಕಾರಣ, ಮಂದಾನ ಅವರು ತಮ್ಮ ವಿವಾಹವನ್ನು ಮುಂದೂಡಲು ನಿರ್ಧರಿಸಿದರು ಎಂದು ಹೇಳಿದ್ದಾರೆ.
‘ಶ್ರೀನಿವಾಸ್ ಅವರಿಗೆ ಎಡಭಾಗದಲ್ಲಿ ಎದೆನೋವು (ಆ್ಯಂಜಿನಾ) ಕಾಣಿಸಿಕೊಂಡಿದೆ. ಅವರ ಹೃದಯದಲ್ಲಿ ಕಿಣ್ವಗಳು ಹೆಚ್ಚಿರುವುದು (ಕಾರ್ಡಿಯಾಕ್ ಎಂಝೈಮ್ಸ್) ಇಸಿಜಿ ಹಾಗೂ ಇತರ ಪರೀಕ್ಷೆಗಳಲ್ಲಿ ಪತ್ತೆಯಾಗಿದೆ. ಹೀಗಾಗಿ ಅವರನ್ನು ನಿಗಾದಲ್ಲಿ ಇಡಲಾಗಿದ್ದು, ಅಗತ್ಯಬಿದ್ದರೆ ‘ಆ್ಯಂಜಿಯೊಗ್ರಫಿ’ ಚಿಕಿತ್ಸೆ ನೀಡಲಾಗುವುದು’ ಎಂದು ವೈದ್ಯರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.