ADVERTISEMENT

ಯುಎಇ ವಿರುದ್ಧ ದ.ಆಫ್ರಿಕಾಗೆ ಸುಲಭ ಗೆಲುವು; ಸೂಪರ್–8ರಲ್ಲಿ ಭಾರತ ಎದುರಾಳಿ

ಗೆಲುವಿನೊಡನೆ ಭಾರತ ವಿರುದ್ಧ ಸೂಪರ್ 8ರ ಪಂದ್ಯಕ್ಕೆ ಸಜ್ಜು

ಪಿಟಿಐ
Published 18 ಫೆಬ್ರುವರಿ 2026, 13:05 IST
Last Updated 18 ಫೆಬ್ರುವರಿ 2026, 13:05 IST
<div class="paragraphs"><p>ದಕ್ಷಿಣ ಆಫ್ರಿಕಾ</p></div>

ದಕ್ಷಿಣ ಆಫ್ರಿಕಾ

   

ಐಸಿಸಿ ಚಿತ್ರ

ನವದೆಹಲಿ: ದಕ್ಷಿಣ ಆಫ್ರಿಕಾ ತಂಡ, ಟಿ20 ವಿಶ್ವಕಪ್‌ನ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಬುಧವಾರ ಯುಎಇ ತಂಡದ ವಿರುದ್ಧ ಆರು ವಿಕೆಟ್‌ಗಳ ನಿರಾಯಾಸ ಗೆಲುವು ಸಾಧಿಸಿತು. ಡಿ ಗುಂಪಿನಲ್ಲಿ ಆಡಿದ ನಾಲ್ಕೂ ಪಂದ್ಯಗಳನ್ನು ಗೆದ್ದ ಹರಿಣಗಳ ಪಡೆ ಅಜೇಯ ಸಾಧನೆ ದಾಖಲಿಸಿತು.

ADVERTISEMENT

ಫಿರೋಜ್ ಶಾ ಕೋಟ್ಲಾದಲ್ಲಿ ಮೊದಲು ಆಡಿದ ಯುಎಇ 20 ಓವರುಗಳಲ್ಲಿ 6 ವಿಕೆಟ್‌ಗೆ 122 ರನ್ ಗಳಿಸಿತು. ಈ ಮೊದಲೇ ಸೂಪರ್ ಎಂಟರಲ್ಲಿ ಸ್ಥಾನ ಖಚಿತಪಡಿಸಿಕೊಂಡಿದ್ದ ದಕ್ಷಿಣ ಆಫ್ರಿಕಾ, ಹೆಚ್ಚು ಸಮಯ ವ್ಯರ್ಥಮಾಡದೇ 13.1 ಓವರುಗಳಲ್ಲಿ 4 ವಿಕೆಟ್‌ಗೆ 123 ರನ್ ಹೊಡೆದು ಸಂಭ್ರಮಿಸಿತು.

ನಾಯಕ ಏಡನ್ ಮರ್ಕರಂ ರಟ್ಟೆಯರಳಿಸಿ 11 ಎಸೆತಗಳಲ್ಲಿ 28 ರನ್ ಗಳಿಸಿದರು. ಬ್ರೆವಿಸ್‌ 25 ಎಸೆತಗಳಲ್ಲಿ ಒಂದು ಬೌಂಡರಿ, ಮೂರು ಸಿಕ್ಸರ್‌ಗಳಿದ್ದ ಅಜೇಯ 36 ರನ್ ಗಳಿಸಿದರು. ರಿಯಾನ್ ರಿಕೆಲ್ಟನ್ (30,16 ಎಸೆತ) ಕೂಡ ಹಿಂದೆ ಬೀಳಲಿಲ್ಲ. 

ಭಾರತ ವಿರುದ್ಧ ಭಾನುವಾರ ನಡೆಯಲಿರುವ ಸೂಪರ್‌ ಎಂಟರ ಮಹತ್ವದ ಪಂದ್ಯಕ್ಕೆ ಸಜ್ಜಾಗಲು ಬ್ರೆವಿಸ್‌ಗೆ ಈ ಪಂದ್ಯ ನೆರವಾಯಿತು. ಎಡಗೈ ವೇಗದ ಬೌಲರ್ ಮುಹಮ್ಮದ್ ಜವಾದುಲ್ಲಾ ಎಸೆದ ಬೌನ್ಸರ್‌ನಲ್ಲಿ ಪುಲ್‌ ಮಾಡಿ ಹೊಡೆದ ಸಿಕ್ಸರ್‌ ಆಕರ್ಷಕವಾಗಿತ್ತು. ಎಡಗೈ ಸ್ಪಿನ್ನರ್ ಹೈದರ್ ಅಲಿ ಎಸೆತದಲ್ಲಿ ಎಕ್ಸ್‌ಟ್ರಾ ಕವರ್ ಮೇಲೆ ಎತ್ತಿದ ಸಿಕ್ಸರ್ ಸ್ಟ್ಯಾಂಡ್‌ನಲ್ಲಿ ಲ್ಯಾಂಡ್ ಆಯಿತು.

ಇದಕ್ಕೆ ಮೊದಲು, ಕಾರ್ಬಿನ್ ಬಾಷ್‌ (4–0–12–3) ಅವರ ನೇತೃತ್ವದಲ್ಲಿ ದಕ್ಷಿಣ ಆಫ್ರಿಕಾ ಬೌಲರ್‌ಗಳು ಯುಎಇ ತಂಡವನ್ನು 6 ವಿಕೆಟ್‌ಗೆ 122 ರನ್‌ಗಳಿಗೆ ಸೀಮಿತಗೊಳಿಸಿದರು. ಆ್ಯನ್ರಿಚ್ ನಾಕಿಯಾ (28ಕ್ಕೆ2) ಮತ್ತು ಜಾರ್ಜ್ ಲಿಂಡೆ (17ಕ್ಕೆ1) ಅವರೂ ಪರಿಣಾಮಕಾರಿ ಎನಿಸಿದರು. 

ಎರಡು ಜೀವದಾನ ಪಡೆದ ಯುವ ಅಟಗಾರ ಅಲಿಶಾನ್ ಶರಾಫು 38 ಎಸೆತಗಳಲ್ಲಿ 45 ರನ್ (4x5, 6x1) ಗಳಿಸಿದ್ದರಿಂದ ಯುಎಇ ಮೊತ್ತ 100 ದಾಟಿತು.

ಕಾರ್ಬಿನ್ ಬಾಷ್‌ ಪಂದ್ಯದ ಆಟಗಾರನಾದರು.

ದಕ್ಷಿಣ ಆಫ್ರಿಕಾ ಈ ಪಂದ್ಯಕ್ಕೆ ಪ್ರಮುಖ ಆಟಗಾರರಾದ ಮಾರ್ಕೊ ಯಾನ್ಸೆನ್‌, ಲುಂಗಿ ಎನ್‌ಗಿಡಿ ಮತ್ತು ಸ್ಪಿನ್ನರ್ ಕೇಶವ ಮಹಾರಾಜ್ ಅವರಿಗೆ ವಿಶ್ರಾಂತಿ ನೀಡಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.