ADVERTISEMENT

ಮಹಿಳಾ ಕ್ರಿಕೆಟ್‌: ಆಸ್ಟ್ರೇಲಿಯಾ ಮುಡಿಗೆ ವಿಶ್ವಕಪ್‌, ಅವಕಾಶ ಕೈಚೆಲ್ಲಿದ ಭಾರತ

ಮೂನಿ, ಹೀಲಿ ಮಿಂಚು

ಪಿಟಿಐ
Published 8 ಮಾರ್ಚ್ 2020, 20:00 IST
Last Updated 8 ಮಾರ್ಚ್ 2020, 20:00 IST
ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡದ ಸಂಭ್ರಮ
ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡದ ಸಂಭ್ರಮ   
""
""

ಮೆಲ್ಬರ್ನ್: ಆತಿಥೇಯ ಆಸ್ಟ್ರೇಲಿಯಾ ತಂಡವು ಐದನೇ ಬಾರಿ ಐಸಿಸಿ ಮಹಿಳೆಯರ ಟ್ವೆಂಟಿ–20 ವಿಶ್ಕಕಪ್ ಗೆದ್ದು ದಾಖಲೆ ಬರೆಯಿತು. ಇದೇ ಮೊದಲ ಬಾರಿ ಫೈನಲ್ ತಲುಪಿದ್ದ ಭಾರತ ತಂಡವು ಕಳಪೆ ಬ್ಯಾಟಿಂಗ್‌ನಿಂದಾಗಿ 85 ರನ್‌ಗಳಿಂದ ಸೋತಿತು.

ಭಾನುವಾರ ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆದ ಫೈನಲ್‌ನಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆರಂಭಿಕ ಜೋಡಿ ಅಲೈಸಾ ಹೀಲಿ (75; 39ಎಸೆತ, 7ಬೌಂಡರಿ, 5ಸಿಕ್ಸರ್) ಮತ್ತು ಬೆಥ್ ಮೂನಿ (ಔಟಾಗದೆ 78; 54ಎಸೆತ, 10ಬೌಂಡರಿ) ಮೊದಲ ವಿಕೆಟ್‌ ಜೊತೆಯಾಟದಲ್ಲಿ 115 ರನ್‌ಗಳ ಅಡಿಪಾಯ ಹಾಕಿದರು. ಅದರ ಮೇಲೆ ತಂಡವು 184 ರನ್‌ಗಳ ಮೊತ್ತ ದಾಖಲಿಸಿ, ಭಾರತಕ್ಕೆ ಕಠಿಣ ಸವಾಲೊಡ್ಡಿತು.

ಟೂರ್ನಿಯಲ್ಲಿ ಉತ್ತಮವಾಗಿ ಬ್ಯಾಟಿಂಗ್ ಮಾಡಿದ್ದ ಯುವಪ್ರತಿಭೆಳಾದ ಶಫಾಲಿ ವರ್ಮಾ, ಜೆಮಿಮಾ ರಾಡ್ರಿಗಸ್ ಇಲ್ಲಿ ವಿಫಲರಾದರು. ಅನುಭವಿ ಸ್ಮೃತಿ ಮಂದಾನಾ ಮತ್ತು ನಾಯಕಿ ಹರ್ಮನ್‌ಪ್ರೀತ್ ಕೌರ್ ವೈಫಲ್ಯ ಇಲ್ಲಿಯೂ ಮುಂದುವರಿಯಿತು. ಇದರಿಂದಾಗಿ ತಂಡವು 19.1 ಓವರ್‌ಗಳಲ್ಲಿ 99 ರನ್‌ ಗಳಿಸಿ ಆಲೌಟ್ ಆಯಿತು. ಮಧ್ಯಮ ಕ್ರಮಾಂಕದ ಆಟಗಾರ್ತಿ ದೀಪ್ತಿ ಶರ್ಮಾ (33; 35ಎ, 2ಬೌಂ), ವೇದಾ ಕೃಷ್ಣಮೂರ್ತಿ (19 ರನ್) ಮತ್ತು ರಿಚಾ ಘೋಷ್ (18 ರನ್) ಅವರು ಕೊನೆಯ ಹಂತದಲ್ಲಿ ಹೋರಾಟ ಮಾಡಿದ್ದರಿಂದ ಅಂತಿಮ ಓವರ್‌ನವರೆಗೂ ಇನಿಂಗ್ಸ್‌ ಬೆಳೆಯಿತು. ಆಸ್ಟ್ರೇಲಿಯಾದ ವೇಗಿ ಮೇಗನ್ ಶುಟ್ (18ಕ್ಕೆ4) ಮತ್ತು ಜೆಸ್ ಜೊನಾಸನ್ (20ಕ್ಕೆ3) ಭಾರತದ ಬ್ಯಾಟಿಂಗ್ ಬಲಕ್ಕೆ ಬಲವಾದ ಪೆಟ್ಟು ಕೊಟ್ಟರು. ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ತಾನಿಯಾ ಭಾಟಿಯಾ (2 ರನ್) ಅವರು ಗಾಯಗೊಂಡು ನಿವೃತ್ತಿಯಾದರು. ಅವರ ಬದಲಾಗಿ ರಿಚಾ ಘೋಷ್‌ ಬ್ಯಾಟಿಂಗ್‌ ಮಾಡಿದರು.

ADVERTISEMENT

ಆರನೇ ಫೈನಲ್, ಐದನೇ ಪ್ರಶಸ್ತಿ: ಆಸ್ಟ್ರೇಲಿಯಾ ತಂಡಕ್ಕೆ ‘ಎ’ ಗುಂಪಿನ ಆರಂಭಿಕ ಪಂದ್ಯದಲ್ಲಿಯೇ ಭಾರತ ತಂಡವು ಸೋಲಿನ ಕಹಿ ಉಣಿಸಿತ್ತು.ಭಾರತದ ಸ್ಪಿನ್‌ ಬೌಲರ್‌ಗಳ ಎಸೆತಗಳ ಎದುರು ತತ್ತರಿಸಿತ್ತು. ಆದರೂ ನಂತರದ ಪಂದ್ಯಗಳಲ್ಲಿ ಅಧಿಕಾರಯುತ ಜಯ ಸಾಧಿಸಿದ್ದ ಆಸ್ಟ್ರೇಲಿಯಾ ತಂಡವು ಸೆಮಿಫೈನಲ್‌ ಪ್ರವೇಶಿಸಿತ್ತು. ಅದರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಗೆದ್ದು ಫೈನಲ್‌ಗೆ ಅರ್ಹತೆ ಗಿಟ್ಟಿಸಿತ್ತು. ಇದುವರೆಗೆ ಆಗಿರುವ ಏಳು ಟೂರ್ನಿಗಳಲ್ಲಿ ಆಸ್ಟ್ರೇಲಿಯಾ ಆರು ಬಾರಿ ಫೈನಲ್‌ನಲ್ಲಿ ಆಡಿದೆ. 2016ರಲ್ಲಿ ವೆಸ್ಟ್ ಇಂಡೀಸ್ ಎದುರು ಸೋತಿದ್ದ ಆಸ್ಟ್ರೇಲಿಯಾ ರನ್ನರ್ ಅಪ್ ಆಗಿತ್ತು.

ಪೂನಂ ಯಾದವ್, ರಾಧಾ ಯಾದವ್, ರಾಜೇಶ್ವರಿ ಗಾಯಕವಾಡ್ ಅವರ ಸ್ಪಿನ್ ಎಸೆತಗಳನ್ನು ಎದುರಿಸಲು ತಕ್ಕ ಸಿದ್ಧತೆ ಮಾಡಿಕೊಂಡು ಕಣಕ್ಕಿಳಿದ್ದಿ ತಂಡವು ಯಾವುದೇ ಹಂತದಲ್ಲಿಯೂ ಜಗ್ಗಲಿಲ್ಲ. ಅಲೈಸಾ ಹೀಲಿಯ ಬ್ಯಾಟಿಂಗ್ ಅನ್ನು ಅವರ ಪತಿ ಮಿಚೆಲ್ ಸ್ಟ್ರಾರ್ಕ್ (ಆಸ್ಟ್ರೇಲಿಯಾ ತಂಡದ ವೇಗದ ಬೌಲರ್) ವೀಕ್ಷಿಸಿದರು. ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿದ್ದ ಮಿಚೆಲ್, ಪತ್ನಿಯ ಆಟ ನೋಡಲು ಶನಿವಾರ ತವರಿಗೆ ಮರಳಿದ್ದರು. ದಕ್ಷಿಣ ಅಫ್ರಿಕಾ ಎದುರಿನ ಕೊನೆಯ ಏಕದಿನ ಪಂದ್ಯದಿಂದ ‘ರಜೆ’ ಪಡೆದಿದ್ದರು. ಅವರಿಗೆ ನಿರಾಶೆಯಾಗಲಿಲ್ಲ. ಅಲೈಸಾ ಪಂದ್ಯಶ್ರೇಷ್ಠ ಗೌರವ ಗಳಿಸಿದರು. 12ನೇ ಓವರ್‌ನಲ್ಲಿ ಅಲೈಸಾ ವಿಕೆಟ್ ಗಳಿಸುವಲ್ಲಿ ರಾಧಾ ಯಾದವ್ ಯಶಸ್ವಿಯಾದರು. ಅವರೊಂದಿಗೆ ಇನಿಂಗ್ಸ್‌ ಆರಂಭಿಸಿದ ಮೂನಿ ಕೂಡ ಭಾರತದ ಬೌಲರ್‌ಗಳನ್ನು ಕಾಡಿದರು. ಆದರೆ ಮೆಗ್‌ಲ್ಯಾನಿಂಗ್ ಮತ್ತು ಗಾರ್ಡನರ್ ಅವರು ಹೆಚ್ಚು ಹೊತ್ತು ಆಡದಂತೆ ದೀಪ್ತಿ ಶರ್ಮಾ ನೋಡಿಕೊಂಡರು.

ರಚೆಲ್ ಹೇನ್ಸ್‌ ವಿಕೆಟ್ ಗಳಿಸಿದ ಪೂನಮ್ ಯಾದವ್ ಸಂಭ್ರಮಿಸಿದರು. ಇದರಿಂದಾಗಿ ಆಸ್ಟ್ರೇಲಿಯಾ ತಂಡವು 200 ರನ್‌ಗಳ ಮೊತ್ತ ಗಳಿಸಲು ಸಾಧ್ಯವಾಗಲಿಲ್ಲ.

ಸೋಲಿನ ದುಃಖದಲ್ಲಿ ಭಾರತದ ಆಟಗಾರ್ತಿಯರು –ಎಪಿ ಚಿತ್ರ

ಪಂದ್ಯ ವೀಕ್ಷಿಸಿದ 86 ಸಾವಿರ ಜನ
ಭಾನುವಾರ ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆದ ಮಹಿಳೆಯರ ಟಿ20 ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯವನ್ನು 86,174 ಜನರು ವೀಕ್ಷಿಸಿದರು.

ಮಹಿಳಾ ಕ್ರಿಕೆಟ್‌ ಇತಿಹಾಸದಲ್ಲಿಯೇ ಇದು ವಿಶ್ವದಾಖಲೆಯಾಗಿದೆ. 2009ರಲ್ಲಿ ಸಿಡ್ನಿಯಲ್ಲಿ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್‌ ನಡುವೆ ನಡೆದಿದ್ದ ಪಂದ್ಯವನ್ನು 12,717 ಜನರು ವೀಕ್ಷಿಸಿದ್ದರು.ಇದಲ್ಲದೇ ಐಸಿಸಿಯ ಡಿಜಿಟಲ್ ಮಾಧ್ಯಮಗಳಲ್ಲಿಯೂ ಪಂದ್ಯ ವೀಕ್ಷಿಸಿದವರ ಸಂಖ್ಯೆಯು 70 ಕೋಟಿ ದಾಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.