ಕೋಲ್ಕತ್ತ ನೈಟ್ ರೈಡರ್ಸ್ ತಂಡ
ನವದೆಹಲಿ: ಇವೆರಡು ತಂಡಗಳು 2024ರ ಫೈನಲ್‌ನಲ್ಲಿ ಆಡಿದ್ದವು. ಆದರೆ ಈ ಬಾರಿ ಪ್ಲೇಆಫ್ ರೇಸ್‌ನಿಂದ ಹೊರಬಿದ್ದಿರುವ ಕೋಲ್ಕತ್ತ ನೈಟ್ ರೈಡರ್ಸ್ ಮತ್ತು ಸನ್‌ರೈಸರ್ಸ್ ತಂಡಗಳು ಭಾನುವಾರ ಇಲ್ಲಿ ಮುಖಾಮುಖಿಯಾಗಲಿವೆ. ಪಾಯಿಂಟ್ ಪಟ್ಟಿಯಲ್ಲಿ ತಮ್ಮ ಸ್ಥಾನ ಸುಧಾರಿಸಿಕೊಳ್ಳಲು ಇದು ಅವಕಾಶವಾಗಿದೆ.
ಕಳೆದ ಬಾರಿಯ ಫೈನಲ್ ಏಕಪಕ್ಷೀಯವಾಗಿದ್ದು, ಶ್ರೇಯಸ್ ಅಯ್ಯರ್ ಬಳಗ, ಪ್ಯಾಟ್ ಕಮಿನ್ಸ್ ನೇತೃತ್ವದ ತಂಡವನ್ನು ಸೋಲಿಸಿ ಚಾಂಪಿಯನ್ ಆಗಿತ್ತು. ಈ ಬಾರಿ ಗೆದ್ದ ತಂಡ ಆರನೇ ಸ್ಥಾನಕ್ಕೇರುವ ಅವಕಾಶ ಹೊಂದಿದೆ. ಶುಕ್ರವಾರ ಪ್ರಬಲ ಆರ್‌ಸಿಬಿ ತಂಡಕ್ಕೆ 42 ರನ್‌ಗಳ ಸೋಲುಣಿಸಿರುವ ಕಮಿನ್ಸ್ ಪಡೆ, ಅಜಿಂಕ್ಯ ರಹಾನೆ ನೇತೃತ್ವದ ನೈಟ್ ರೈಡರ್ಸ್ ವಿರುದ್ಧ ಫೆವರೀಟ್ ಆಗಿ ಕಾಣುತ್ತಿದೆ. ಸಾಲದ್ದಕ್ಕೆ ಕೋಲ್ಕತ್ತದ ತಂಡ ಮೇ 7ರ ನಂತರ ಯಾವುದೇ ಪಂದ್ಯ ಆಡಿಲ್ಲ.
ಸನ್‌ರೈಸರ್ಸ್ ಬ್ಯಾಟರ್‌ಗಳಾದ ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ಇಶಾನ್ ಕಿಶನ್, ಅನಿಕೇತ್ ವರ್ಮಾ ಲಯದಲ್ಲಿದ್ದು ಕೋಟ್ಲಾದ ಬ್ಯಾಟಿಂಗ್ ಪಿಚ್‌ನಲ್ಲಿ ರನ್ ಹರಿಸುವ ನಿರೀಕ್ಷೆಯಲ್ಲಿದ್ದಾರೆ.
ಕೋಲ್ಕತ್ತ ತಂಡಕ್ಕೆ ಬ್ಯಾಟರ್‌ಗಳು ಕೈಕೊಟ್ಟಿದ್ದಾರೆ. ಟಿ20ಯಲ್ಲಿ ಅಷ್ಟೇನೂ ಹೆಸರು ಮಾಡದ ಅಜಿಂಕ್ಯ ರಹಾನೆ ಅವರೇ 375 ರನ್‌ಗಳೊಡನೆ ತಂಡದ ಯಶಸ್ವಿ ಬ್ಯಾಟರ್ ಎನಿಸಿದ್ದಾರೆ. ಫಿನಿಷರ್‌ಗಳೆನಿಸಿದ್ದ ರಿಂಕು ಸಿಂಗ್, ಆ್ಯಂಡ್ರೆ ರಸೆಲ್ ವಿಫಲರಾಗಿದ್ದಾರೆ. 23.75 ಕೋಟಿ ಮೌಲ್ಯ ಪಡೆದಿದ್ದ ವೆಂಕಟೇಶ್ ಅಯ್ಯರ್ 11 ಪಂದ್ಯಗಳಿಂದ ಗಳಿಸಿದ್ದು 142 ರನ್ ಮಾತ್ರ. ಒಂದು ಅರ್ಧ ಶತಕ ಬಿಟ್ಟರೆ (60) ಬಿಟ್ಟರೆ ಉಳಿದಂತೆ ಸಪ್ಪೆಯಾಗಿದ್ದಾರೆ.
ಸುನೀಲ್ ನಾರಾಯಣ್ ಅವರೂ ನಿರೀಕ್ಷೆಗೆ ತಕ್ಕಂತೆ ಆಡಿಲ್ಲ. ಹೋದ ಸಲ ಪರಿಣಾಮಕಾರಿ ಎನಿಸಿದ್ದ ಸ್ಪಿನ್ನರ್ ವರುಣ್ ಚಕ್ರವರ್ತಿ ಈ ಸಲ ಸ್ಥಿರ ಪ್ರದರ್ಶನ ನೀಡಿಲ್ಲ.
ಪಂದ್ಯ ಆರಂಭ: ರಾತ್ರಿ 7.30.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.