ADVERTISEMENT

ಕೆಕೆಆರ್ ವಿರುದ್ಧ ಸೋತರೂ ಸದ್ದು ಮಾಡಿದ ಸನ್‌ರೈಸರ್ಸ್ ಯುವ ವೇಗಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 4 ಅಕ್ಟೋಬರ್ 2021, 11:33 IST
Last Updated 4 ಅಕ್ಟೋಬರ್ 2021, 11:33 IST
ಉಮ್ರಾನ್ ಮಲಿಕ್
ಉಮ್ರಾನ್ ಮಲಿಕ್   

ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್ 2021ನೇ ಸಾಲಿನ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಗಂಟೆಗೆ 150 ಕಿ.ಮೀ.ಗೂ ಹೆಚ್ಚು ವೇಗದಲ್ಲಿ ಬೌಲಿಂಗ್ಮಾಡುವ ಮೂಲಕ ಸನ್‌ರೈಸರ್ಸ್ ಹೈದರಾಬಾದ್ ತಂಡದ ಯುವ ಬಲಗೈ ವೇಗದ ಬೌಲರ್ ಉಮ್ರಾನ್ ಮಲಿಕ್ ಸದ್ದು ಮಾಡಿದ್ದಾರೆ.

ಸನ್‌ರೈಸರ್ಸ್ ವಿರುದ್ಧದ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ಆರು ವಿಕೆಟ್ ಅಂತರದ ಗೆಲುವು ದಾಖಲಿಸಿತ್ತು. ಆದರೆ 21ರ ಹರೆಯದ ಜಮ್ಮು ಮತ್ತು ಕಾಶ್ಮೀರದ ಯುವ ವೇಗಿ ಉಮ್ರಾನ್ ಮಲಿಕ್, ತಮ್ಮ ಚೊಚ್ಚಲ ಐಪಿಎಲ್ ಪಂದ್ಯದಲ್ಲೇ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಅಲ್ಲದೆ ಐಪಿಎಲ್‌ನಲ್ಲಿ ಆಡಿದ ಜಮ್ಮು ಮತ್ತು ಕಾಶ್ಮೀರದ ನಾಲ್ಕನೇ ಆಟಗಾರ ಎನಿಸಿದ್ದಾರೆ.

ಗಂಟೆಗೆ 151.03 ಕಿ.ಮೀ. ವೇಗದಲ್ಲಿ ದಾಳಿ ಮಾಡಿದ ಉಮ್ರಾನ್, ತಮ್ಮ ಸಾಮರ್ಥ್ಯವನ್ನು ಸಾಬೀತು ಮಾಡಿದರು. ಇದು ಪ್ರಸಕ್ತ ಸಾಲಿನ ಐಪಿಎಲ್‌ನಲ್ಲಿ ಭಾರತೀಯ ವೇಗಿಯಿಂದ ದಾಖಲಾದ ಅತಿ ವೇಗದ ಎಸೆತವಾಗಿದೆ. ಇನ್ನು ವಿದೇಶಿಯರ ಪೈಕಿ ಕೆಕೆಆರ್ ತಂಡದ ಲಾಕಿ ಫರ್ಗ್ಯುಸನ್ ಗಂಟೆಗೆ 152.75 ಕಿ.ಮೀ. ವೇಗದಲ್ಲಿ ಚೆಂಡು ಎಸೆದಿದ್ದರು.

ಉಮ್ರಾನ್ ಮಲಿಕ್, ಗಂಟೆಗೆ 143 ಕಿ.ಮೀ.ಗೂ ಹೆಚ್ಚು ಸರಾಸರಿ ವೇಗವನ್ನು ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಆದರೂ ತಮ್ಮ ನಾಲ್ಕು ಓವರ್‌ಗಳ ಕೋಟಾದಲ್ಲಿ 27 ರನ್ ತೆತ್ತು ವಿಕೆಟ್ ಗಳಿಸಲು ಸಾಧ್ಯವಾಗಲಿಲ್ಲ.

ನೆಟ್ ಬೌಲರ್ ಆಗಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ಜೊತೆಗೆ ಯುಎಇ ಪಯಣ ಬೆಳೆಸಿದ್ದ ಉಮ್ರಾನ್ ಮಲಿಕ್ ಅವರು ಕೋವಿಡ್‌ಗೆ ತುತ್ತಾಗಿದ್ದ ಟಿ. ನಟರಾಜನ್ ಸ್ಥಾನವನ್ನು ತುಂಬಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.