ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಸ್ಪಿನ್ ಬೌಲರ್ ಶ್ರೀ ಚರಣಿ
ಚಿತ್ರ: @cricketByJB
2025ರ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಗೆದ್ದ ಭಾರತ ತಂಡದ ಭಾಗವಾಗಿದ್ದ ಯುವ ಸ್ಪಿನ್ನರ್ ಶ್ರೀ ಚರಣಿಗೆ ಆಂಧ್ರಪ್ರದೇಶ ಸರ್ಕಾರ ₹2.5 ಕೋಟಿ ನಗದು, 1,000 ಚದರ ಅಡಿ ನಿವೇಶನ ಹಾಗೂ ಗ್ರೂಪ್-1 ಉದ್ಯೋಗ ನೀಡುವ ಭರವಸೆ ನೀಡಿದೆ.
ಕಡಪ ಜಿಲ್ಲೆಯವರಾದ ಶ್ರೀ ಚರಣಿ ವಿಜಯವಾಡ ವಿಮಾನ ನಿಲ್ದಾಣಕ್ಕೆ ಬರುತ್ತಿದ್ದಂತೆ ಜನರಿಂದ ಭವ್ಯ ಸ್ವಾಗತ ದೊರೆಯಿತು. ಮಾತ್ರವಲ್ಲ, ಸ್ಥಳದಲ್ಲಿ ರಾಜ್ಯದ ಮೂವರು ಸಚಿವರು ಹಾಜರಿದ್ದರು.
ಶುಕ್ರವಾರ ಶ್ರೀ ಚರಣಿ ಅವರು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರನ್ನು ಭೇಟಿಯಾದರು. ಈ ಸಂದರ್ಭದಲ್ಲಿ ಸಚಿವ ನಾರಾ ಲೋಕೇಶ್ ಹಾಗೂ ಭಾರತ ಮಹಿಳಾ ತಂಡದ ಮಾಜಿ ನಾಯಕಿ ಮಿಥಾಲಿ ರಾಜ್ ಇದ್ದರು.
ಚಂದ್ರಬಾಬು ನಾಯ್ಡು ಅವರು ಶ್ರೀ ಚರಣಿಯವರನ್ನು ಅಭಿನಂದಿಸಿದರು. ನಂತರ, ರಾಜ್ಯ ಸರ್ಕಾರದಿಂದ ಶ್ರೀಚರಣಿಗೆ 2.5 ಕೋಟಿ ರೂಪಾಯಿ ನಗದು ಬಹುಮಾನ. ಗ್ರೂಪ್-1 ಉದ್ಯೋಗ ಹಾಗೂ ಕಡಪದಲ್ಲಿ 1000 ಚದರ ಅಡಿ ನಿವೇಶನ ನೀಡಲಾಗುವುದು ಎಂದು ಎಂದು ಘೋಷಿಸಿದರು.
ಈ ಕುರಿತು ಸಿಎಂ ಅಧಿಕೃತ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ‘2025 ರ ಐಸಿಸಿ ಮಹಿಳಾ ಕ್ರಿಕೆಟ್ ವಿಶ್ವಕಪ್‌ನಲ್ಲಿ ಶ್ರೀ ಚರಣಿ ಅವರ ಉತ್ತಮ ಪ್ರದರ್ಶನವ ಗುರುತಿಸಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ನೇತೃತ್ವದ ಆಂಧ್ರಪ್ರದೇಶ ಸರ್ಕಾರವು ₹2.5 ಕೋಟಿ ನಗದು ಬಹುಮಾನ, 1,000 ಚದರ ಅಡಿ ನಿವೇಶನ ಮತ್ತು ಗ್ರೂಪ್-I ಸರ್ಕಾರಿ ಉದ್ಯೋಗ ಘೋಷಿಸಿದೆ’ ಎಂದು ತಿಳಿಸಿದ್ದಾರೆ.
ಮಹಿಳಾ ವಿಶ್ವಕಪ್‌ನಲ್ಲಿ ಅಮೋಘ ಬೌಲಿಂಗ್ ದಾಳಿ ನಡೆಸಿದ ಶ್ರೀ ಚರಣಿ ಟೂರ್ನಮೆಂಟ್‌ನಲ್ಲಿ 14 ವಿಕೆಟ್ ಪಡೆದು ಮಿಂಚಿದ್ದಾರೆ. ಮಾತ್ರವಲ್ಲ, ದಕ್ಷಿಣ ಆಫ್ರಿಕಾ ವಿರುದ್ಧದ ಫೈನಲ್ ಪಂದ್ಯದಲ್ಲಿ ಅನ್ನೆಕೆ ಬಾಷ್ ಅವರ ಪ್ರಮುಖ ವಿಕೆಟ್ ಪಡೆದು ಭಾರತ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.