ADVERTISEMENT

ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯ; ಜೋ ರೂಟ್ ದ್ವಿಶತಕದ ಸೊಬಗು

ಏಜೆನ್ಸೀಸ್
Published 16 ಜನವರಿ 2021, 14:56 IST
Last Updated 16 ಜನವರಿ 2021, 14:56 IST
ಜೋ ರೂಟ್‌– ಪಿಟಿಐ ಚಿತ್ರ
ಜೋ ರೂಟ್‌– ಪಿಟಿಐ ಚಿತ್ರ   

ಗಾಲ್‌: ವೃತ್ತಿಜೀವನದ ನಾಲ್ಕನೇ ದ್ವಿಶತಕ ಸಿಡಿಸಿದ ನಾಯಕ ಜೋ ರೂಟ್ (228) ಇಂಗ್ಲೆಂಡ್ ತಂಡವು ಉತ್ತಮ ಮೊತ್ತ ಪೇರಿಸುವಲ್ಲಿ ನೆರವಾದರು. ಶ್ರೀಲಂಕಾ ವಿರುದ್ಧ ಇಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಮೂರನೇ ದಿನದಾಟವಾದ ಶನಿವಾರ ಪ್ರವಾಸಿ ತಂಡ ಮೊದಲ ಇನಿಂಗ್ಸ್‌ನಲ್ಲಿ 421 ರನ್‌ ಗಳಿಸಿತು. ಇದಕ್ಕುತ್ತರವಾಗಿ ಬ್ಯಾಟಿಂಗ್ ಆರಂಭಿಸಿರುವ ಆತಿಥೇಯ ಶ್ರೀಲಂಕಾ ತಂಡಕ್ಕೆ ಲಾಹಿರು ತಿರಿಮನ್ನೆ ಆಸರೆಯಾಗಿದ್ದಾರೆ.

ದಿನದಾಟದ ಅಂತ್ಯಕ್ಕೆ ಶ್ರೀಲಂಕಾ ತಂಡ ಮೊದಲ ಇನಿಂಗ್ಸ್‌ನಲ್ಲಿ 2 ವಿಕೆಟ್‌ಗೆ 156 ರನ್ ಗಳಿಸಿದೆ. ತಿರಿಮನ್ನೆ (ಬ್ಯಾಟಿಂಗ್‌ 76) ಹಾಗೂ ಕುಶಾಲ್ ಪೆರೇರಾ (62) ಮೊದಲ ವಿಕೆಟ್ ಜೊತೆಯಾಟದಲ್ಲಿ 101 ರನ್ ಸೇರಿಸಿದರು.

168 ರನ್‌ಗಳೊಂದಿಗೆ ಶನಿವಾರ ಬ್ಯಾಟಿಂಗ್ ಮುಂದುವರಿಸಿದ ರೂಟ್‌ ಲಂಕಾ ಬೌಲರ್‌ಗಳಿಗೆ ಸವಾಲಾದರು. 321 ಎಸೆತಗಳನ್ನು ಎದುರಿಸಿದ ಅವರ ಇನಿಂಗ್ಸ್‌ನಲ್ಲಿ 18 ಬೌಂಡರಿ, ಒಂದು ಸಿಕ್ಸರ್‌ ಇದ್ದವು. 2016ರಲ್ಲಿ ಓಲ್ಡ್‌ ಟ್ರಾಫರ್ಡ್‌ನಲ್ಲಿ ಪಾಕಿಸ್ತಾನ ವಿರುದ್ಧವೇ ನಡೆದ ಟೆಸ್ಟ್‌ನಲ್ಲಿ ರೂಟ್‌ ವೃತ್ತಿಜೀವನದ ಗರಿಷ್ಠ ಮೊತ್ತ (254) ದಾಖಲಿಸಿದ್ದರು.

ADVERTISEMENT

ಜೋಸ್ ಬಟ್ಲರ್‌ (30) ದೊಡ್ಡ ಮೊತ್ತ ಗಳಿಸುವಲ್ಲಿ ವಿಫಲರಾದರು.

ದಿಲ್ರುವಾನ್ ಪೆರೇರಾ (109ಕ್ಕೆ 4) ಲಂಕಾ ಪರ ಉತ್ತಮ ಬೌಲಿಂಗ್ ಸಂಘಟಿಸಿದರು.

ಮೊದಲ ಇನಿಂಗ್ಸ್‌ನಲ್ಲಿ ಶ್ರೀಲಂಕಾ 135 ರನ್‌ ಗಳಿಸಿ ಸರ್ವಪತನವಾಗಿತ್ತು.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಶ್ರೀಲಂಕಾ: 46.1 ಓವರ್‌ಗಳಲ್ಲಿ 135: ಇಂಗ್ಲೆಂಡ್‌: 117 ಓವರ್‌ಗಳಲ್ಲಿ 421 (ಜೋ ರೂಟ್ 228, ಜೋಸ್ ಬಟ್ಲರ್ 30, ಡ್ಯಾನ್ ಲಾರೆನ್ಸ್ 73; ಲಸಿತ್ ಎಂಬುಲ್ದೇನಿಯ 176ಕ್ಕೆ 3, ಅಸಿತಾ ಫರ್ನಾಂಡೊ 44ಕ್ಕೆ 2, ದಿಲ್ರುವಾನ್ ಪೆರೇರಾ 109ಕ್ಕೆ 4). ಎರಡನೇ ಇನಿಂಗ್ಸ್: ಶ್ರೀಲಂಕಾ: 61 ಓವರ್‌ಗಳಲ್ಲಿ 2 ವಿಕೆಟ್‌ಗೆ 156 (ಕುಶಾಲ್ ಪೆರೇರಾ 62, ಲಾಹಿರು ತಿರಿಮನ್ನೆ ಬ್ಯಾಟಿಂಗ್ 76; ಸ್ಯಾಮ್ ಕರನ್‌ 25ಕ್ಕೆ 1).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.