ADVERTISEMENT

IPL 2021: ಭರತ್ ಸಿಕ್ಸರ್; ಐಪಿಎಲ್ ಇತಿಹಾಸದಲ್ಲಿ ಆರ್‌ಸಿಬಿ ಗೆಲುವಿನ 'ಸೆಂಚುರಿ'

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಅಕ್ಟೋಬರ್ 2021, 5:16 IST
Last Updated 9 ಅಕ್ಟೋಬರ್ 2021, 5:16 IST
ಶ್ರೀಕರ್ ಭರತ್ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್
ಶ್ರೀಕರ್ ಭರತ್ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್   

ದುಬೈ: ಶುಕ್ರವಾರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದ ಐಪಿಎಲ್ ಪಂದ್ಯದ ಕೊನೆಯ ಎಸೆತದಲ್ಲಿ ಸಿಕ್ಸರ್ ಬಾರಿಸಿದ ಶ್ರೀಕರ್ ಭರತ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ರೋಚಕ ಗೆಲುವು ಒದಗಿಸಿಕೊಡುವಲ್ಲಿ ನೆರವಾಗಿದ್ದಾರೆ.

ಇದು ಐಪಿಎಲ್ ಇತಿಹಾಸದಲ್ಲಿ ಆರ್‌ಸಿಬಿಗೆ ಒಲಿದ 100ನೇ ಗೆಲುವಾಗಿದೆ. ಈ ಮೂಲಕ ನೂತನ ಮೈಲಿಗಲ್ಲು ತಲುಪಿದೆ.

165 ರನ್ ಗುರಿ ಬೆನ್ನತ್ತಿದ ಆರ್‌ಸಿಬಿಗೆ ಶ್ರೀಕರ್ ಭರತ್ (ಅಜೇಯ 78) ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ (ಅಜೇಯ 51) ಬಿರುಸಿನ ಅರ್ಧಶತಕ ಗಳಿಸುವ ಮೂಲಕ ಏಳು ವಿಕೆಟ್ ಅಂತರದ ಗೆಲುವು ದಾಖಲಿಸಲು ಸಾಧ್ಯವಾಯಿತು.

ಚೊಚ್ಚಲ ಐಪಿಎಲ್ ಕಿರೀಟ ಎದುರು ನೋಡುತ್ತಿರುವ ಆರ್‌ಸಿಬಿ ತಂಡವೀಗ ಅಕ್ಟೋಬರ್ 11, ಸೋಮವಾರ ನಡೆಯಲಿರುವ ಎಲಿಮಿನೇಟರ್ ಹಣಾಹಣಿಯಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ಸವಾಲನ್ನು ಎದುರಿಸಲಿದೆ.

ಈ ಹಿಂದೆ ಮೂರು ಬಾರಿ 'ರನ್ನರ್-ಅಪ್' ಪ್ರಶಸ್ತಿ ಗೆದ್ದಿರುವುದು ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿಯ ಶ್ರೇಷ್ಠ ಸಾಧನೆಯಾಗಿದೆ. 2009, 2011 ಹಾಗೂ 2016ರಲ್ಲಿ ರನ್ನರ್-ಅಪ್ ಪ್ರಶಸ್ತಿ ಗೆದ್ದಿತ್ತು.

ಪ್ರಸಕ್ತ ಸಾಲಿನಲ್ಲಿ ಲೀಗ್ ಹಂತದಲ್ಲಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಡೆಲ್ಲಿ ವಿರುದ್ಧ ಎರಡು ಬಾರಿಯೂ ಆರ್‌ಸಿಬಿ ಗೆದ್ದ ಸಾಧನೆ ಮಾಡಿದೆ. ಭಾರತದಲ್ಲಿ ನಡೆದ ಟೂರ್ನಿಯ ಮೊದಲ ಹಂತದಲ್ಲಿ ಅಹಮದಾಬಾದ್‌ನಲ್ಲಿ ಒಂದು ರನ್ ಅಂತರದ ರೋಚಕ ಗೆಲುವು ದಾಖಲಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.