ADVERTISEMENT

ವಿಶ್ವಕಪ್ ಕ್ರಿಕೆಟ್ ಫೈನಲ್ ಫಿಕ್ಸಿಂಗ್ ಆರೋಪ: ತನಿಖೆಗೆ ಶ್ರೀಲಂಕಾ ಸರ್ಕಾರ ಆದೇಶ

ಪಿಟಿಐ
Published 19 ಜೂನ್ 2020, 16:18 IST
Last Updated 19 ಜೂನ್ 2020, 16:18 IST
2011ರಲ್ಲಿ ವಿಶ್ವಕಪ್ ಗೆದ್ದ ಸಂಭ್ರಮದಲ್ಲಿ ಭಾರತ ತಂಡ 
2011ರಲ್ಲಿ ವಿಶ್ವಕಪ್ ಗೆದ್ದ ಸಂಭ್ರಮದಲ್ಲಿ ಭಾರತ ತಂಡ    

ಕೊಲಂಬೊ: ಮುಂಬೈನಲ್ಲಿ ನಡೆದಿದ್ದ 2011ರ ಏಕದಿನ ಕ್ರಿಕೆಟ್ ವಿಶ್ವಕಪ್ ಫೈನಲ್ ಪಂದ್ಯವನ್ನು ಶ್ರೀಲಂಕಾ ‘ಮಾರಾಟ’ ಮಾಡಿತ್ತು ಎಂದು ಮಾಜಿ ಕ್ರೀಡಾ ಸಚಿವ ಮಾಡಿರುವ ಆರೋಪವನ್ನು ಲಂಕಾ ಸರ್ಕಾರವು ಗಂಭೀರವಾಗಿ ಪರಿಗಣಿಸಿದೆ. ಈ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಆದೇಶ ಹೊರಡಿಸಿದೆ.

ಶ್ರೀಲಂಕಾದ ಮಾಜಿ ಕ್ರೀಡಾ ಸಚಿವ ಮಹಿದಾನಂದ ಅಳುತಗಾಮಗೆ. ‘ಭಾರತ ಮತ್ತು ಶ್ರೀಲಂಖಾ ನಡುವಣ ನಡೆಇದ್ದ ಫೈನಲ್ ಪಂದ್ಯವು ಫಿಕ್ಸ್ ಆಗಿತ್ತು. ಆದರೆ ಆಟಗಾರರು ಭಾಗಿಯಾಗಿರಲಿಲ್ಲ. ಹೊರಗಿನ ಎರಡು ಗುಂಪುಗಳು ಶಾಮೀಲಾಗಿದ್ದವು. ಶ್ರೀಲಂಕಾ ಆ ಪಂದ್ಯವನ್ನು ಮಾರಾಟ ಮಾಡಿತ್ತು’ ಎಂದು ಸ್ಥಳೀಯ ಟಿವಿ ವಾಹಿನಿಯ ಸಂದರ್ಶನದಲ್ಲಿ ಆರೋಪಿಸಿದ್ದರು.

‘ಈ ವಿಷಯದ ಕುರಿತು ತನಿಖೆ ನಡೆಸಿ ವರದಿ ನೀಡಬೇಕು’ ಎಂದು ಕ್ರೀಡಾ ಸಚಿವಾಲಯದ ಕಾರ್ಯದರ್ಶಿ ಕೆ.ಎ.ಡಿ.ಎಸ್. ರುವಾನಚಂದ್ರ ಸೂಚಿಸಿದ್ದಾರೆ.

ADVERTISEMENT

2011ರಲ್ಲಿ ಮಹಿದಾನಂದ ಅವರು ಕ್ರೀಡಾ ಸಚಿವರಾಗಿದ್ದರು. ಅವರೂ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಪಂದ್ಯ ವೀಕ್ಷಿಸಿದ್ದರು.

ಅವರ ಆರೋಪಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದ ಆಗಿನ ಶ್ರೀಲಂಕಾ ಕ್ರಿಕೆಟ್ ತಂಡದ ನಾಯಕ ಕುಮಾರ ಸಂಗಕ್ಕಾರ ಮತ್ತು ಬ್ಯಾಟ್ಸ್‌ಮನ್ ಮಹೇಲ ಜಯವರ್ಧನೆ, ‘ಸಾಕ್ಷ್ಯಾಧಾರಗಳನ್ನು ತೋರಿಸಿ ಆರೋಪವನ್ನು ಸಾಬೀತುಪಡಿಸಿ’ ಎಂದು ಸವಾಲು ಹಾಕಿದ್ದರು.

ಈ ಹಿಂದೆಯೂ ಮಹಿದಾನಂದ ಇಂತಹ ಆರೋಪ ಮಾಡಿದ್ದರು. ಲಂಕಾ ತಂಡದ ಮಾಜಿ ನಾಯಕ ಅರ್ಜುನ ರಣತುಂಗಾ ಅವರೂ ಕೆಲವು ತಿಂಗಳುಗಳ ಹಿಂದೆ ಫೈನಲ್ ಪಂದ್ಯ ಫಿಕ್ಸಿಂಗ್ ಆಗಿತ್ತೆಂದು ಆರೋಪಿಸಿದ್ದರು.

ಮೊದಲು ಬ್ಯಾಟಿಂಗ್ ಮಾಡಿದ್ದ ಶ್ರೀಲಂಕಾ ತಂಡವು 275 ರನ್‌ಗಳ ಗುರಿಯನ್ನು ಭಾರತಕ್ಕೆ ಒಡ್ಡಿತ್ತು. ಗೌತಮ್ ಗಂಭೀರ್ (97 ರನ್) ಮತ್ತು ನಾಯಕ ಮಹೇಂದ್ರಸಿಂಗ್ ಧೋನಿ (91 ರನ್) ಅವರ ಅಮೋಘ ಬ್ಯಾಟಿಂಗ್‌ ಬಲದಿಂದ ಭಾರತವು ಗೆದ್ದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.