ADVERTISEMENT

ಏಷ್ಯಾ ಕಪ್‌ನಿಂದ ಬಂದ ಹಣ ಪಹಲ್ಗಾಮ್‌ ಸಂತ್ರಸ್ತರಿಗೆ ನೀಡಲು ಸೂರ್ಯಕುಮಾರ್ ನಿರ್ಧಾರ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 29 ಸೆಪ್ಟೆಂಬರ್ 2025, 5:32 IST
Last Updated 29 ಸೆಪ್ಟೆಂಬರ್ 2025, 5:32 IST
<div class="paragraphs"><p>ಸೂರ್ಯಕುಮಾರ್ ಯಾದವ್</p></div>

ಸೂರ್ಯಕುಮಾರ್ ಯಾದವ್

   

ನವದೆಹಲಿ: ಏಷ್ಯಾ ಕಪ್‌ ಟೂರ್ನಿಯ ‍ಪಂದ್ಯ ಶುಲ್ಕವನ್ನು ಸಶಸ್ತ್ರ ಪಡೆಗಳು ಮತ್ತು ಪಹಲ್ಗಾಮ್ ದಾಳಿಯ ಸಂತ್ರಸ್ತರಿಗೆ ನೀಡಲು ನಿರ್ಧರಿಸಿರುವುದಾಗಿ ಭಾರತ ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್ ಹೇಳಿದ್ದಾರೆ.

‘ನಮ್ಮ ಸಶಸ್ತ್ರ ಪಡೆಗಳು ಮತ್ತು ಪಹಲ್ಗಾಮ್‌ನಲ್ಲಿ ಭಯೋತ್ಪಾದಕ ದಾಳಿಗೆ ಒಳಗಾದ ಕುಟುಂಬಗಳಿಗೆ ಬೆಂಬಲ ನೀಡುವ ಸಲುವಾಗಿ ಈ ಟೂರ್ನಿಯ ಪಂದ್ಯ ಶುಲ್ಕವನ್ನು ದೇಣಿಗೆಯಾಗಿ ನೀಡಲು ನಾನು ನಿರ್ಧರಿಸಿದ್ದೇನೆ. ನಿಮ್ಮೊಂದಿಗೆ ನಾನು ಸದಾ ನಿಲ್ಲುತ್ತೇನೆ. ಜೈ ಹಿಂದ್‌’ ಎಂದು ಸೂರ್ಯ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ADVERTISEMENT

ಭಾನುವಾರ ದುಬೈನ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಸೂರ್ಯ ಪಡೆ ರೋಚಕ ಜಯ ಸಾಧಿಸಿತ್ತು.

ಪ್ರತಿ ಟಿ20 ಪಂದ್ಯಕ್ಕೆ ಭಾರತ ಆಟಗಾರರು ₹4 ಲಕ್ಷ ಗಳಿಸುತ್ತಾರೆ. ಒಟ್ಟು ಏಳು ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಅವರು ₹28 ಲಕ್ಷ ಗಳಿಸಿದ್ದಾರೆ. ಈ ಮೊತ್ತವನ್ನು ಅವರು ಸಶಸ್ತ್ರ ಪಡೆಗಳು ಮತ್ತು ಪಹಲ್ಗಾಮ್‌ ಸಂತ್ರಸ್ತರಿಗೆ ದೇಣಿಗೆಯಾಗಿ ನೀಡಲಿದ್ದಾರೆ.

ಪಾಕ್‌ ಆಟಗಾರರೊಂದಿಗೆ ಹಸ್ತಲಾಘವ ಮಾಡದಿರುವುದರಿಂದ ಹಿಡಿದು ಪಾಕ್‌ ಸಚಿವ ಮೊಹಸೀನ್ ನಖ್ವಿ ಕೈಯಿಂದ ಪ್ರಶಸ್ತಿ ಸ್ವೀಕರಿಸಲು ನಿರಾಕರಿಸುವವರೆಗೆ ಹಲವು ಘಟನೆಗಳಿಗೆ ಈ ಟೂರ್ನಿ ಸಾಕ್ಷಿಯಾಗಿತ್ತು. ಪಾಕ್‌ ಜತೆಗಿನ ಮೊದಲ ಗೆಲುವನ್ನು ಸಶಸ್ತ್ರ ಪಡೆಗಳು ಮತ್ತು ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಮಡಿದವರ ಕುಟುಂಬಗಳಿಗೆ ಅರ್ಪಿಸುವ ಮೂಲಕ ಸೂರ್ಯ ದಂಡನೆಗೂ ಗುರಿಯಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.