
ಧರ್ಮಶಾಲ: ಇಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಭಾರತ ತಂಡ ಸುಲಭವಾಗಿ ಗೆಲುವು ಸಾಧಿಸಿದೆ. ಆದರೆ, ನಾಯಕ ಸೂರ್ಯಕುಮಾರ್ ಯಾದವ್ ಅವರ ಬ್ಯಾಟಿಂಗ್ ವೈಫಲ್ಯ ಮುಂದುವರೆದಿದೆ. ಇದು ಟೀಂ ಇಂಡಿಯಾದ ಚಿಂತೆಗೆ ಕಾರಣವಾಗಿದೆ. ಈ ನಡುವೆ ಪಂದ್ಯದ ಬಳಿಕ ಮಾತನಾಡಿದ ನಾಯಕ ಸೂರ್ಯಕುಮಾರ್, ನಾನು ಫಾರ್ಮ್ ಕಳೆದುಕೊಂಡಿಲ್ಲ. ಆದರೆ, ರನ್ಸ್ ಬರುತ್ತಿಲ್ಲ ಎಂದು ಒಪ್ಪಿಕೊಂಡರು.
ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಮೂರನೇ ಟಿ20 ಪಂದ್ಯದಲ್ಲಿ ಭಾರತ 7 ವಿಕೆಟ್‌ಗಳ ಸುಲಭ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ನಾಯಕ ಸೂರ್ಯಕುಮಾರ್ ಯಾದವ್ 11 ಎಸೆತಗಳಲ್ಲಿ 12 ರನ್ ಗಳಿಸಿ ಲುಂಗಿ ಎನ್‌ಗಿಡಿ ಬೌಲಿಂಗ್‌ನಲ್ಲಿ ಔಟಾದರು.
ಸೂರ್ಯಕುಮಾರ್ ಯಾದವ್ ಕಳೆದ 21 ಇನಿಂಗ್ಸ್‌ಗಳಿಂದ ಅಕ್ಟೋಬರ್ 24ರಂದು ಬಾಂಗ್ಲಾದೇಶ ವಿರುದ್ಧ 75 ರನ್ ಹಾಗೂ ಏಷ್ಯಾ ಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ಅಜೇಯ 47 ರನ್ ಗಳಿಸಿರುವುದು ಹೊರತುಪಡಿಸಿ ಅವರು ದೊಡ್ಡ ಮೊತ್ತದ ರನ್ ಕಲೆಹಾಕುವಲ್ಲಿ ವಿಫಲರಾಗುತ್ತಿದ್ದಾರೆ.
ಪಂದ್ಯದ ಬಳಿಕ ಮಾತನಾಡಿದ ಸೂರ್ಯಕುಮಾರ್, ‘ನಾನು ನೆಟ್ಸ್‌ನಲ್ಲಿ ಚೆನ್ನಾಗಿಯೇ ಬ್ಯಾಟಿಂಗ್ ಮಾಡುತ್ತಿದ್ದೇನೆ. ರನ್‌ಗಳು ಬರಬೇಕಾದಾಗ ಬರುತ್ತವೆ. ನಾನು ಫಾರ್ಮ್‌ನಲ್ಲಿ ಇಲ್ಲ ಎಂದು ಹೇಳಲಾಗುವುದಿಲ್ಲ. ಆದರೆ, ಖಂಡಿತ ರನ್‌ಗಳು ಬರುತ್ತಿಲ್ಲ’ ಎಂದು ಒಪ್ಪಿಕೊಂಡರು.
2025ರಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸದ ಎರಡು ಪಂದ್ಯಗಳು ಮಾತ್ರ ಬಾಕಿ ಉಳಿದಿವೆ. ಈ ನಡುವೆ ಸೂರ್ಯಕುಮಾರ್ ಯಾದವ್ ಅವರ ಈ ವರ್ಷದ ಬ್ಯಾಟಿಂಗ್ ಸರಾಸರಿ 14.20ಗೆ ಕುಸಿದಿದೆ. ಟಿ20 ವಿಶ್ವಕಪ್‌ಗೆ ಕೆಲವೇ ದಿನಗಳು ಬಾಕಿ ಉಳಿದಿದ್ದು, ನಾಯಕ ಸೂರ್ಯಕುಮಾರ್ ಯಾದವ್ ಅವರ ಈ ಕಳಪೆ ಬ್ಯಾಟಿಂಗ್ ಪ್ರದರ್ಶನ ತರಬೇತುದಾರ ಗೌತಮ್ ಗಂಭೀರ್ ಅವರ ಚಿಂತೆಗೆ ಕಾರಣವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.