ಸೂರ್ಯಕುಮಾರ್ ಯಾದವ್ ಹಾಗೂ ಯಶಸ್ವಿ ಜೈಸ್ವಾಲ್
ಪಿಟಿಐ ಚಿತ್ರ
ಮುಂಬೈ: ಬಿರುಸಿನ ಬ್ಯಾಟಿಂಗ್‌ಗೆ ಹೆಸರಾಗಿರುವ ಸೂರ್ಯಕುಮಾರ್ ಯಾದವ್ ಅವರು ಮುಂಬರುವ ರಣಜಿ ಕ್ರಿಕೆಟ್ ಟೂರ್ನಿ ಹೊತ್ತಿಗೆ ಮುಂಬೈ ತೊರೆದು ಗೋವಾ ತಂಡ ಸೇರಲಿದ್ದಾರೆ ಎಂಬ ವದಂತಿ ಹರಿದಾಡುತ್ತಿವೆ. ಈ ಕುರಿತು ಮುಂಬೈ ಕ್ರಿಕೆಟ್ ಸಂಸ್ಥೆ (ಎಂಸಿಎ) ಸ್ಪಷ್ಟನೆ ನೀಡಿದೆ.
ಭಾರತ ಟಿ20 ಕ್ರಿಕೆಟ್ ತಂಡದ ನಾಯಕರೂ ಆಗಿರುವ ಸೂರ್ಯ, ರಾಜ್ಯ ತಂಡವನ್ನು (ಮುಂಬೈ) ಪ್ರತಿನಿಧಿಸಲು ಬದ್ಧವಾಗಿದ್ದಾರೆ ಎಂದು ತಿಳಿಸಿದೆ.
ಮುಂಬೈ ತಂಡದ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಅವರು ಗೋವಾ ತಂಡ ಸೇರುವುದಾಗಿ ಈಗಾಗಲೇ ಘೋಷಿಸಿದ್ದಾರೆ. ಜೈಸ್ವಾಲ್ ಮನವಿಯನ್ನು ಪುರಸ್ಕರಿಸಿರುವುದಾಗಿ ಎಂಸಿಎ ಹೇಳಿದೆ. ಆದಾಗ್ಯೂ, ಬಿಸಿಸಿಐ ಸಮ್ಮತಿಯ ನಂತರವಷ್ಟೇ, ಅವರಿಗೆ (ಜೈಸ್ವಾಲ್‌ಗೆ) ಗೋವಾ ಟಿಕೆಟ್ ಸಿಗಲಿದೆ.
ಹಿರಿಯ ಆಟಗಾರರೊಂದಿಗಿನ ಭಿನ್ನಾಭಿಪ್ರಾಯವೇ ಜೈಸ್ವಾಲ್ ನಿರ್ಧಾರಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಏತನ್ಯಧ್ಯೆ, ಸೂರ್ಯ ಸಹ ಜೈಸ್ವಾಲ್ ಹಾದಿ ಹಿಡಿಯಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
'ಸೂರ್ಯ ಕುಮಾರ್ ಯಾದವ್, ಮುಂಬೈ ತಂಡದ ಪರ ಆಡುವ ಬದಲು ಗೋವಾಗೆ ತೆರಳಲಿದ್ದಾರೆ ಎಂಬುದಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ವದಂತಿ ಹರಿದಾಡುತ್ತಿರುವುದು ಎಂಸಿಎ ಗಮನಕ್ಕೆ ಬಂದಿದೆ' ಎಂದು ಎಂಸಿಎ ಕಾರ್ಯದರ್ಶಿ ಅಭಯ್ ಹಡಪ್ ಹೇಳಿಕೆ ನೀಡಿದ್ದಾರೆ.
'ಎಂಸಿಎ ಅಧಿಕಾರಿಗಳು ಸೂರ್ಯ ಅವರೊಂದಿಗೆ ಮಾತನಾಡಿದ್ದಾರೆ. ವದಂತಿಗಳು ನಿಜವಲ್ಲ, ಸಂಪೂರ್ಣ ಆಧಾರರಹಿತವಾದವು. ಮುಂಬೈ ಪರ ಆಡುವುದನ್ನು ಸೂರ್ಯ ಹೆಮ್ಮೆ ಎಂದು ಭಾವಿಸಿದ್ದಾರೆ. ತಂಡದಲ್ಲೇ ಉಳಿಯುವ ಬದ್ಧತೆ ಹೊಂದಿದ್ದಾರೆ. ಇಂತಹ ಸುಳ್ಳು ಸುದ್ದಿಗಳನ್ನು ಹರಡದಂತೆ ಹಾಗೂ ಎಂಸಿಎಗೆ ಕೊಡುಗೆ ನೀಡುತ್ತಿರುವ ನಮ್ಮ ಆಟಗಾರರನ್ನು ಬೆಂಬಲಿಸುವಂತೆ ಪ್ರತಿಯೊಬ್ಬರಲ್ಲಿಯೂ ಮನವಿ ಮಾಡುತ್ತೇವೆ' ಎಂದು ತಿಳಿಸಿದ್ದಾರೆ.
ಸೂರ್ಯ ಅವರು, ಅಜಿಂಕ್ಯ ರಹಾನೆ ನಾಯಕರಾಗಿರುವ ಮುಂಬೈ ತಂಡವನ್ನು ತೊರೆಯಲಿದ್ದಾರೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ಬುಧವಾರ ಪ್ರಕಟವಾಗಿತ್ತು.
ಇವುಗಳನ್ನೇ ಉಲ್ಲೇಖಿಸಿ ಎಕ್ಸ್/ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿರುವ ಸೂರ್ಯ, ಪತ್ರಕರ್ತರೇ ಅಥವಾ ಕಥೆಗಾರರೇ? ನಗಬೇಕು ಎನಿಸಿದರೆ ಇನ್ನುಮುಂದೆ ಹಾಸ್ಯ ಸಿನಿಮಾಗಳನ್ನು ನೋಡುವುದನ್ನು ನಿಲ್ಲಿಸಿ, ಇಂತಹ ಲೇಖನಗಳನ್ನು ಓದಲಾರಂಭಿಸುತ್ತೇನೆ. ಈ ವರದಿಗಳು ಸಂಪೂರ್ಣ ಅಸಂಬದ್ಧವಾದವು ಎಂದು ಚಾಟಿ ಬೀಸಿದ್ದಾರೆ.
ಹೈದರಾಬಾದ್ ಪರ ಆಡುತ್ತಿರುವ ತಿಲಕ್ ವರ್ಮಾ ಅವರೂ ಗೋವಾ ಸೇರಿಕೊಳ್ಳಲಿದ್ದಾರೆ ಎಂಬ ವದಂತಿಯೂ ಹರಿದಾಡುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.