
ಗಂಭೀರ್ ಹಾಗೂ ಸೂರ್ಯಕುಮಾರ್ ಯಾದವ್
ನವದೆಹಲಿ: ನಾಯಕ ಸೂರ್ಯಕುಮಾರ್ ಯಾದವ್ ಅವರ ಕಳಪೆ ಫಾರ್ಮ್ ಬಗ್ಗೆ ಭಾರತ ತಂಡದ ಹೆಡ್ ಕೋಚ್ ಗೌತಮ್ ಗಂಭೀರ್ ಹೆಚ್ಚು ತಲೆಕೆಡಿಸಿಕೊಂಡಿಲ್ಲ. ತಂಡ ಹೆಚ್ಚು ಆಕ್ರಮಣಕಾರಿ ಬ್ರ್ಯಾಂಡ್‌ನ ಕ್ರಿಕೆಟ್ ಆಡುವಾಗ ಈ ರೀತಿಯ ‘ವೈಫಲ್ಯಗಳು ಆಗೇ ಆಗುತ್ತವೆ’ ಎನ್ನುವುದು ಅವರ ಅಭಿಪ್ರಾಯ.
ಸೂರ್ಯ ಅವರ ನಾಯಕತ್ವದಲ್ಲಿ ಭಾರತ ತಂಡವು ಹೋದ ತಿಂಗಳು ಯುಎಇಯಲ್ಲಿ ಏಷ್ಯಾ ಕಪ್ ಟೂರ್ನಿಯನ್ನು ಗೆದ್ದುಕೊಂಡಿತ್ತು. ಆದರೆ ಅವರೇ ಸತತವಾಗಿ ವಿಫಲರಾಗಿದ್ದರು. ಏಳು ಇನಿಂಗ್ಸ್‌ಗಳಿಂದ 72 ರನ್‌ಗಳನ್ನಷ್ಟೇ ಗಳಿಸಿದ್ದರು. ಈಗ ಅವರಿಗೆ ಕೋಚ್ ಬೆಂಬಲವಾಗಿ ನಿಂತಿದ್ದಾರೆ.
‘ಸೂರ್ಯ ಅವರ ಬ್ಯಾಟಿಂಗ್ ಲಯ ನನಗೇನೂ ಕಳವಳ ಮೂಡಿಸಿಲ್ಲ. ನಾವು ‘ಅಲ್ಟ್ರಾ ಅಗ್ರೆಸ್ಸಿವ್’ ಮಾದರಿಯಲ್ಲಿ ಆಡಲು ಬದ್ಧರಾಗಿದ್ದೇವೆ. ಇಂಥ ತತ್ತ್ವಕ್ಕೆ ಜೋತುಬಿದ್ದಾಗ ವೈಫಲ್ಯಗಳು ಆಗುವುದು ಸಹಜ’ ಎಂದು ಗಂಭೀರ್ ಅವರು ಜಿಯೊಸ್ಟಾರ್‌ನಲ್ಲಿ ಸಂವಾದದ ವೇಳೆ ಅಭಿಪ್ರಾಯಪಟ್ಟರು.
ಒಂದು ಕಡೆ ನಾಯಕ ವಿಫಲರಾದರೂ, ಇನ್ನೊಂದು ಕಡೆ ಅಭಿಷೇಕ್ ಶರ್ಮಾ ಮತ್ತು ತಿಲಕ್ ವರ್ಮಾ ಅವರ ತಮ್ಮ ಆಕ್ರಮಣಕಾರಿ ಬ್ಯಾಟಿಂಗ್ ಮೂಲಕ ಟೂರ್ನಿಗೆ ರಂಗೇರಿಸಿದ್ದರು.
‘ನಮ್ಮ ಗಮನ ಆಟಗಾರರ ವೈಯಕ್ತಿಕ ಆಟಕ್ಕಿಂತ ಇಡಿಯಾಗಿ ತಂಡದ ಆಟದತ್ತ ಇರುತ್ತದೆ’ ಎಂದಿದ್ದಾರೆ ಗಂಭೀರ್.
‘ನಿರ್ಭೀತ ಸಂಸ್ಕೃತಿಯನ್ನು ತಂಡದಲ್ಲಿ ಬೆಳೆಸುವುದು ನಮ್ಮ ದೃಷ್ಟಿಕೋನವಾಗಿದೆ’ ಎಂದು ಅವರು ಹೇಳಿದರು. ‘ನಾವು ಸೋಲಿಗೆ ಹೆದರುವುದಿಲ್ಲ. ನಾನು ಅತ್ಯಂತ ಯಶಸ್ವಿ ಕೋಚ್ ಆಗುವ ಗುರಿಹೊಂದಿಲ್ಲ. ಅತ್ಯಂತ ನಿರ್ಭೀತ ತಂಡ ಹೊಂದುವುದಷ್ಟೇ ನನ್ನ ಬಯಕೆ ಎಂದು ನನ್ನ ಮತ್ತು ಸೂರ್ಯ ಜೊತೆಗಿನ ಮೊದಲ ಚರ್ಚೆಯಲ್ಲೇ ಒಪ್ಪಿಕೊಂಡಿದ್ದೆವು’ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.