ADVERTISEMENT

ಕರುಣ್ ಬಳಗದಲ್ಲಿ ‘ಹೊಸ’ ಕನಸು

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕರ್ನಾಟಕ ತಂಡದ ಅಭ್ಯಾಸ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2020, 20:34 IST
Last Updated 31 ಡಿಸೆಂಬರ್ 2020, 20:34 IST
ಅಭ್ಯಾಸದ ನಡುವೆ ದೇವದತ್ತ ಪಡಿಕ್ಕಲ್ ಹಾಗೂ ಕೃಷ್ಣಪ್ಪ ಗೌತಮ್‌ ಹೀಗೆ ಕಂಡುಬಂದರು –ಪ್ರಜಾವಾಣಿ ಚಿತ್ರ/ಕೃಷ್ಣಕುಮಾರ್ ಪಿ.ಎಸ್.
ಅಭ್ಯಾಸದ ನಡುವೆ ದೇವದತ್ತ ಪಡಿಕ್ಕಲ್ ಹಾಗೂ ಕೃಷ್ಣಪ್ಪ ಗೌತಮ್‌ ಹೀಗೆ ಕಂಡುಬಂದರು –ಪ್ರಜಾವಾಣಿ ಚಿತ್ರ/ಕೃಷ್ಣಕುಮಾರ್ ಪಿ.ಎಸ್.   

ಬೆಂಗಳೂರು: ಹೊಸ ವರ್ಷದಲ್ಲಿ ಹೊಸ ಸಾಧನೆಗಳ ನಿರೀಕ್ಷೆಯಲ್ಲಿರುವ ಕರ್ನಾಟಕ ಕ್ರಿಕೆಟ್ ತಂಡದ ಆಟಗಾರರ ಲವಲವಿಕೆಯು ಗುರುವಾರ ಚಿನ್ನಸ್ವಾಮಿ ಕ್ರೀಡಾಂಗಣದ ಸೊಬಗನ್ನು ಇಮ್ಮಡಿಗೊಳಿಸಿತ್ತು.

ಜನವರಿ 10ರಿಂದ ಆರಂಭವಾಗುವ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಆಡಲು ಸಿದ್ಧತೆ ನಡೆಸಿದ ಕರುಣ್ ನಾಯರ್ ಬಳಗದಲ್ಲಿ ನವೋಲ್ಲಾಸವಿತ್ತು. 2020ರ ಕೊರೊನಾ ಕರಾಳತೆಯನ್ನು ಮರೆಯುವ ಭಾವ ಅವರಲ್ಲಿ ಎದ್ದು ಕಾಣುತ್ತಿತ್ತು. ವಿಳಂಬವಾಗಿ ಆರಂಭವಾಗುತ್ತಿರುವ ದೇಶಿ ಕ್ರಿಕೆಟ್ ಟೂರ್ನಿಯಲ್ಲಿ ಆಡುವ ಉತ್ಸಾಹ ಅವರಲ್ಲಿತ್ತು.

ಆಟಗಾರರು, ಸಿಬ್ಬಂದಿ ಥರ್ಮಲ್ ಸ್ಕ್ರೀನಿಂಗ್ ಮಾಡಿಸಿಕೊಂಡು, ಸ್ಯಾನಿಟೈಸರ್‌ನಲ್ಲಿ ಕೈಗಳನ್ನು ಶುಭ್ರಗೊಳಿಸಿಕೊಂಡು ಕ್ರೀಡಾಂಗಣಕ್ಕೆ ಕಾಲಿಟ್ಟರು. ಆದರೆ, ಎರಡು–ಮೂರು ತಿಂಗಳ ಹಿಂದೆ ಇದ್ದ ಆತಂಕದ ಛಾಯೆ ಮತ್ತು ಪರಸ್ಪರ ಅಂತರ ಇರಲಿಲ್ಲ.

ADVERTISEMENT

ನಗುನಗುತ್ತ ಬ್ಯಾಟಿಂಗ್,ಬೌಲಿಂಗ್ ಮತ್ತು ಫೀಲ್ಡಿಂಗ್‌ನಲ್ಲಿ ತೊಡಗಿಕೊಂಡ ಆಟಗಾರರು, ಪರಸ್ಪರ ಕೈಕುಲುಕುತ್ತ, ಒಬ್ಬರಿನ್ನೊಬ್ಬರ ಹೆಗಲ ಮೇಲೆ ತೋಳು ಬಳಸಿಕೊಂಡು ಓಡಾಡುವುದು ಸಾಮಾನ್ಯವಾಗಿತ್ತು.

ಜೊತೆಗೆ ಹಾಸ್ಯ ಚಟಾಕಿಗಳನ್ನು ಹಾರಿಸುತ್ತ ಎಲ್ಲರನ್ನೂ ನಗಿಸುವ ಕೃಷ್ಣಪ್ಪ ಗೌತಮ್ ತಮ್ಮಕಾರ್ಯ ವನ್ನು ಅಚ್ಚುಕಟ್ಟಾಗಿ ಮಾಡುತ್ತಿದ್ದರು!

‘ಕೆಎಸ್‌ಸಿಎ ಟ್ವೆಂಟಿ–20 ಟೂರ್ನಿ ಮತ್ತು ವೈಎಸ್‌ಆರ್ ಟೂರ್ನಿಯಲ್ಲಿ ಆಡಿದ ಅನುಭವದಿಂದ ಜೀವ ಸುರಕ್ಷಾ ವಾತಾವರಣಕ್ಕೆ ಒಗ್ಗಿಕೊಂಡಿದ್ದಾರೆ. ಅದರಲ್ಲೂ ಕೆಲವು ಆಟಗಾರರು ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಆಡಿ ಬಂದಿರುವ ಅನುಭವಿಗಳು. ಅಲ್ಲಿಯ ಬಯೋ ಬಬಲ್‌ ಅನುಭವ ಅವರಿಗೆ ಚೆನ್ನಾಗಿದೆ. ಆದ್ದರಿಂದ ಆತ್ಮವಿಶ್ವಾಸದಿಂದ ಇದ್ದಾರೆ‘ ಎಂದು ತಂಡದ ಮೂಲಗಳು ’ಪ್ರಜಾವಾಣಿ‘ಗೆ ತಿಳಿಸಿದವು.

ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಪದಾರ್ಪಣೆ ಮಾಡಿ, ಗಮನ ಸೆಳೆದಿದ್ದ ಎಡಗೈ ಬ್ಯಾಟ್ಸ್‌ಮನ್ ದೇವದತ್ತ ಪಡಿಕ್ಕಲ್ ತಂಡದ ಕೇಂದ್ರಬಿಂದುವಾಗಿದ್ದರು. ನಾಯಕ ಕರುಣ್, ಉಪನಾಯಕ ಪವನ್ ದೇಶಪಾಂಡೆ, ಅನುಭವಿ ಬೌಲರ್ ಅಭಿಮನ್ಯು ಮಿಥುನ್, ಪ್ರಸಿದ್ಧ ಕೃಷ್ಣ, ಆಲ್‌ರೌಂಡರ್ ಶ್ರೇಯಸ್ ಅಯ್ಯರ್, ವಿಕೆಟ್‌ಕೀಪರ್ ಕೆ.ಎಲ್. ಶ್ರೀಜಿತ್ , ರೋನಿತ್ ಮೋರೆ ಮತ್ತಿತರರು ಅಭ್ಯಾಸ ನಡೆಸಿದರು. ಕೋಚ್ ಯರೇ ಗೌಡ, ಬೌಲಿಂಗ್ ಕೋಚ್ ಎಸ್. ಅರವಿಂದ್ ಮತ್ತು ನೆರವು ಸಿಬ್ಬಂದಿ ಮಾರ್ಗದರ್ಶನ ನೀಡಿದರು. ಶನಿವಾರ ಎ ಗುಂಪಿನಲ್ಲಿ ಆಡುವ ಎಲ್ಲ ತಂಡಗಳು ಬೆಂಗಳೂರಿಗೆ ಬಂದು ಸೇರಲಿವೆ. ಆಲೂರಿನ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಜ10 ರಿಂದ ಲೀಗ್ ಪಂದ್ಯಗಳು ಆರಂಭವಾಗಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.