
ಬಿರುಸಿನ ಹೊಡೆತವಾಡಿದ ಸ್ಕಾಟ್ಲೆಂಡ್ ಆಟಗಾರ ಜಾರ್ಜ್ ಮುನ್ಸಿ
ಪಿಟಿಐ ಚಿತ್ರ
ಕೋಲ್ಕತ್ತ: ಆರಂಭ ಆಟಗಾರ ಜಾರ್ಜ್ ಮುನ್ಸಿ ಅವರ ಆಕ್ರಮಣಕಾರಿ ಅರ್ಧ ಶತಕದ ನೆರವಿನಿಂದ ಸ್ಕಾಟ್ಲೆಂಡ್ ತಂಡ, ಟಿ20 ವಿಶ್ವಕಪ್‌ಗೆ ಪದಾರ್ಪಣೆ ಮಾಡಿದ ಇಟಲಿ ತಂಡವನ್ನು ಸೋಮವಾರ ನಡೆದ ಪಂದ್ಯದಲ್ಲಿ ಹೆಚ್ಚಿನ ಪ್ರಯಾಸವಿಲ್ಲದೇ ಸೋಲಿಸಿತು.
ಮುನ್ಸಿ 54 ಎಸೆತಗಳಲ್ಲಿ 84 ರನ್ ಸಿಡಿಸಿದರು. ಮೊದಲ ವಿಕೆಟ್‌ಗೆ ಮೈಕೆಲ್ ಜೋನ್ಸ್ (37, 30ಎ) ಜೊತೆ 126 ರನ್ ಸೇರಿಸಿ ಭದ್ರ ಬುನಾದಿ ಒದಗಿಸಿಕೊಟ್ಟರು. ಸ್ಕಾಟ್ಲೆಂಡ್ 4 ವಿಕೆಟ್‌ಗೆ 207 ರನ್‌ಗಳ ದೊಡ್ಡ ಮೊತ್ತ ಗಳಿಸಿತು.
ಉತ್ತರವಾಗಿ ಇಟಲಿ ತಂಡ ಆರಂಭದಲ್ಲಿ ಹೋರಾಟ ತೋರಿದರೂ ನಂತರ ಕುಸಿಯಿತು. ಒಂದು ಹಂತದಲ್ಲಿ 12 ಓವರುಗಳಲ್ಲಿ 3 ವಿಕೆಟ್‌ಗೆ 113 ರನ್ ಗಳಿಸಿತ್ತು. ಬೆನ್ ಮುನೆಂಟಿ ಮತ್ತು ಅವರ ಸಹೋದರ ಹ್ಯಾರಿ ಸೇರಿಕೊಂಡು ನಾಲ್ಕನೇ ವಿಕೆಟ್‌ಗೆ 73 ರನ್ ಸೇರಿಸಿದ್ದರು. ಆದರೆ ಅನನುಭವ ಕಾಡಿತು. 21 ರನ್ ಅಂತರದಲ್ಲಿ ಆರು ವಿಕೆಟ್‌ಗಳನ್ನು ಕಳೆದುಕೊಂಡಿಡು 134 ರನ್‌ಗಳಿಗೆ (16.4 ಓವರುಗಳಲ್ಲಿ) ಸವಾಲು ಮುಗಿಸಿತು.
ಸ್ಕಾಟ್ಲೆಂಡ್‌ನ ಆಫ್ ಸ್ಪಿನ್ನರ್ ಮೈಕೆಲ್ ಲೀಸ್ಕ್ 17 ರನ್ನಿಗೆ 4 ವಿಕೆಟ್ ಪಡೆದು ಇಟಲಿ ಕುಸಿತಕ್ಕೆ ಕಾರಣರಾದರು.
ಇಟಲಿ ತಂಡ ಈ ಪಂದ್ಯದಲ್ಲಿ ಆಘಾತವನ್ನೂ ಕಂಡಿತು. ನಾಯಕ ವೇಯ್ನ್ ಮಾಡ್ಸೆನ್ ಅವರು ಸ್ಕಾಟ್ಲೆಂಡ್ ಇನಿಂಗ್ಸ್‌ನ ನಾಲ್ಕನೇ ಓವರಿನಲ್ಲಿ ಚೆಂಡನ್ನು ಡೈವ್ ಮಾಡಿ ತಡೆಯುವ ಯತ್ನದಲ್ಲಿ ಎಡಭುಜಕ್ಕೆ ಪೆಟ್ಟುಮಾಡಿಕೊಂಡರು. ನೋವಿನಿಂದ ತಕ್ಷಣ ಕ್ರೀಡಾಂಗಣ ತೊರೆದರು.
42 ವರ್ಷ ವಯಸ್ಸಿನ ಮಾಡ್ಸೆನ್ ಅವರು ದಕ್ಷಿಣ ಆಫ್ರಿಕಾ ಪರ ಅಂತರರಾಷ್ಟ್ರೀಯ ಹಾಕಿ ಪಂದ್ಯಗಳನ್ನೂ ಆಡಿದ್ದು, ಕ್ರಿಕೆಟ್‌ನಲ್ಲಿ ಡರ್ಬಿಶೈರ್ ಕೌಂಟಿಗೆ ಆಡಿದ್ದರು.
ಸ್ಕಾಟ್ಲೆಂಡ್: 20 ಓವರುಗಳಲ್ಲಿ 4 ವಿಕೆಟ್‌ಗೆ 207 (ಜಾರ್ಜ್ ಮುನ್ಸಿ 84, ಮೈಕೆಲ್ ಜೋನ್ಸ್ 37, ಬ್ರಾಂಡನ್ ಮ್ಯಾಕ್‌ಮುಲೆನ್ ಔಟಾಗದೇ 41; ಗ್ರಾಂಟ್ ಸ್ಟೀವರ್ಟ್ 21ಕ್ಕೆ1, ಜೆ.ಜೆ.ಸ್ಮಟ್ಸ್ 38ಕ್ಕೆ1);
ಇಟಲಿ: 16.4 ಓವರುಗಳಲ್ಲಿ 134 (ಬೆನ್ ಮುನೆಂಟಿ 62; ಮೈಕೆಲ್ ಲೀಸ್ಕ್ 17ಕ್ಕೆ4, ಮಾರ್ಕ್ ವಾಟ್ 24ಕ್ಕೆ2).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.