ADVERTISEMENT

T20 Record: RCBಯ ಸಾಲ್ಟ್ ಶತಕ; ದ.ಆಫ್ರಿಕಾ ಎದುರು 304 ರನ್ ಗಳಿಸಿದ ಇಂಗ್ಲೆಂಡ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಸೆಪ್ಟೆಂಬರ್ 2025, 2:55 IST
Last Updated 13 ಸೆಪ್ಟೆಂಬರ್ 2025, 2:55 IST
<div class="paragraphs"><p>ಫಿಲ್‌ ಸಾಲ್ಟ್‌</p></div>

ಫಿಲ್‌ ಸಾಲ್ಟ್‌

   

ಕೃಪೆ: ರಾಯಿಟರ್ಸ್‌

ಮ್ಯಾಂಚೆಸ್ಟರ್‌: ಆರಂಭಿಕ ಬ್ಯಾಟರ್‌ಗಳಾದ ಫಿಲ್‌ ಸಾಲ್ಟ್‌ ಹಾಗೂ ಜಾಸ್‌ ಬಟ್ಲರ್‌ ಅವರ ಅಮೋಘ ಬ್ಯಾಟಿಂಗ್‌ ಬಲದಿಂದ ಇಂಗ್ಲೆಂಡ್‌ ಕ್ರಿಕೆಟ್‌ ತಂಡವು ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಪಂದ್ಯದಲ್ಲಿ ಬರೋಬ್ಬರಿ 304 ರನ್ ಕಲೆಹಾಕಿತು. ಇದರೊಂದಿಗೆ, ಈ ಪಂದ್ಯದಲ್ಲಿ ಹಲವು ದಾಖಲೆಗಳು ನಿರ್ಮಾಣವಾದವು.

ADVERTISEMENT

ಮ್ಯಾಂಚೆಸ್ಟರ್‌ನ ಎಮಿರೇಟ್ಸ್‌ ಓಲ್ಡ್‌ ಟ್ರಾಫರ್ಡ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಸೋತರೂ ಮೊದಲು ಬ್ಯಾಟಿಂಗ್‌ ಮಾಡುವ ಅವಕಾಶ ಪಡೆದ ಇಂಗ್ಲೆಂಡ್‌, ಟಿ20 ಮಾದರಿಯಲ್ಲಿ ಮೊದಲ ಬಾರಿಗೆ 300ಕ್ಕಿಂತ ಅಧಿಕ ರನ್‌ ಗಳಿಸಿತು.

ಇನಿಂಗ್ಸ್‌ ಆರಂಭಿಸಿದ ಸಾಲ್ಟ್‌ ಹಾಗೂ ಬಟ್ಲರ್‌ ಜೋಡಿ, ಮೊದಲ ವಿಕೆಟ್‌ಗೆ ಕೇವಲ 7.5 ಓವರ್‌ಗಳಲ್ಲೇ 126 ರನ್‌ ಕೂಡಿಸಿತು. ಅದರೊಂದಿಗೆ, ಎದುರಾಳಿ ತಂಡದ ನಾಯಕ ಏಡನ್‌ ಮರ್ಕ್ರಂ ಲೆಕ್ಕಾಚಾರವನ್ನು ತಲೆಕೆಳಗಾಗಿಸಿತು.

ಶುರುವಿನಿಂದಲೇ ಅಬ್ಬರಿಸಿದ ಬಟ್ಲರ್‌ 30 ಎಸೆತಗಳಲ್ಲಿ 7 ಸಿಕ್ಸರ್‌, 8 ಬೌಂಡರಿ ಸಹಿತ 83 ರನ್‌ ಗಳಿಸಿ ಔಟಾದರು. ನಂತರ, ಸಾಲ್ಟ್‌ ಆಟ ರಂಗೇರಿತು. ಕೊನೆವರೆಗೂ ಆಡಿದ ಅವರು, 60 ಎಸೆತಗಳಲ್ಲಿ 141 ರಬ್‌ ಪೇರಿಸಿ ಅಜೇಯವಾಗಿ ಉಳಿದರು. ಅವರ ಇನಿಂಗ್ಸ್‌ನಲ್ಲಿ 8 ಸಿಕ್ಸರ್‌ ಹಾಗೂ 15 ಬೌಂಡರಿಗಳಿದ್ದವು.

ಸಾಲ್ಟ್‌ಗೆ ಸಾಥ್‌ ನೀಡಿದ ಜಾಕೊಬ್‌ ಬೆಥೆಲ್‌ (14 ಎಸೆತ, 26 ರನ್‌) ಹಾಗೂ ನಾಯಕ ಹ್ಯಾರಿ ಬ್ರೂಕ್‌ (21 ಎಸೆತ, ಅಜೇಯ 41 ರನ್‌) ಕೂಡ ಗುಡುಗಿದರು. ಹೀಗಾಗಿ, ದಾಖಲೆಯ ಮೊತ್ತ ಕಲೆಹಾಕಲು ಸಾಧ್ಯವಾಯಿತು.

ಬೃಹತ್‌ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ, 158 ರನ್‌ ಗಳಿಸುವಷ್ಟರಲ್ಲೇ ಸರ್ವಪತನ ಕಂಡಿತು. ಮರ್ಕ್ರಂ (20 ಎಸೆತ, 40 ರನ್‌) ಹೊರತುಪಡಿಸಿ ಉಳಿದವರು ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಹೀಗಾಗಿ, 146 ರನ್‌ ಅಂತರದ ಬಾರಿ ಸೋಲು ಅನುಭವಿಸುವಂತಾಯಿತು. ಇದು ರನ್‌ ಅಂತರದಲ್ಲಿ ಇಂಗ್ಲೆಂಡ್‌ಗೆ ದೊಡ್ಡ ಜಯವಾದರೆ, ಹರಿಣಗಳಿಗೆ ಬೃಹತ್‌ ಸೋಲು.

ಇಂಗ್ಲೆಂಡ್‌ ಪರ ವೇಗಿ ಜೋಫ್ರಾ ಆರ್ಚರ್‌ ಮೂರು ವಿಕೆಟ್‌ ಪಡೆದರೆ, ಸ್ಯಾಮ್‌ ಕರನ್‌, ಲಿಯಾಮ್‌ ಡಾಸನ್‌, ವಿಲ್‌ ಜಾಕ್ಸ್‌ ತಲಾ ಎರಡು ವಿಕೆಟ್‌ ಕಿತ್ತರು. ಇನ್ನೊಂದು ವಿಕೆಟ್‌ ಆದಿಲ್‌ ರಶೀದ್‌ ಪಾಲಾಯಿತು.

ಮೂರು ಪಂದ್ಯಗಳ ಸರಣಿಯ ಅಂತಿಮ ಪಂದ್ಯವು ನಾಟಿಂಗ್‌ಹ್ಯಾಮ್‌ನಲ್ಲಿ ನಾಳೆ (ಸೆ.14) ನಡೆಯಲಿದೆ. ಮೊದಲ ಪಂದ್ಯವನ್ನು ದಕ್ಷಿಣ ಆಫ್ರಿಕಾ ಗೆದ್ದಿತ್ತು. ಹೀಗಾಗಿ, ಅಂತಿಮ ಪಂದ್ಯವು ಮಹತ್ವ ಪಡೆದುಕೊಂಡಿದೆ.

ಇಂಗ್ಲೆಂಡ್‌ ಇನಿಂಗ್ಸ್‌ ಸಾಗಿದ್ದು...

  • 5 ಓವರ್‌: 88 ರನ್‌

  • 10 ಓವರ್‌: 160 ರನ್‌

  • 15 ಓವರ್‌: 230 ರನ್‌

  • 20 ಓವರ್‌: 304 ರನ್‌

ಟಿ20ಯಲ್ಲಿ ಮೂರನೇ ಮುನ್ನೂರು
ಅಂತರರಾಷ್ಟ್ರೀಯ ಟಿ20 ಮಾದರಿಯಲ್ಲಿ ಈವರೆಗೆ ಮೂರು ಬಾರಿಯಷ್ಟೇ ಇನಿಂಗ್ಸ್‌ವೊಂದರಲ್ಲಿ 300ಕ್ಕಿಂತ ಅಧಿಕ ಮೊತ್ತ ದಾಖಲಾಗಿದೆ.

ಆದರೆ, ಐಸಿಸಿಯ ಪೂರ್ಣ ಸದಸ್ಯ ರಾಷ್ಟ್ರದ ಎದುರು 300ಕ್ಕಿಂತ ಅಧಿಕ ಮೊತ್ತ ಕಲೆಹಾಕಿದ ಮೊದಲ ತಂಡ ಎಂಬ ಶ್ರೇಯ ಇಂಗ್ಲೆಂಡ್‌ನದ್ದಾಯಿತು.

ನೇಪಾಳ ತಂಡ 2023ರಲ್ಲಿ ಮಂಗೋಲಿಯಾ ಎದುರು 314 ರನ್ ಕಲೆಹಾಕಿತ್ತು.

ಒಟ್ಟಾರೆ, ಈ ಮಾದರಿಯಲ್ಲಿ ಅತಿಹೆಚ್ಚು ರನ್ ಗಳಿಸಿದ ದಾಖಲೆ ಜಿಂಬಾಬ್ವೆ ಹೆಸರಿನಲ್ಲಿದೆ. ಆ ತಂಡ, ಐಸಿಸಿಯ ಪೂರ್ಣ ಸದಸ್ಯ ರಾಷ್ಟ್ರವಲ್ಲದ ಜಾಂಬಿಯಾ ವಿರುದ್ಧ 2024ರಲ್ಲಿ 4 ವಿಕೆಟ್‌ಗೆ 344 ರನ್‌ ಗಳಿಸಿತ್ತು. 

ಪೂರ್ಣ ಸದಸ್ಯ ರಾಷ್ಟ್ರದ ಎದುರು ಅತಿಹೆಚ್ಚು ರನ್ ಗಳಿಸಿದ ದಾಖಲೆ ಈವರೆಗೆ ಭಾರತದ ಹೆಸರಿನಲ್ಲಿತ್ತು. ಟೀಂ ಇಂಡಿಯಾ,  2024ರಲ್ಲಿ ಬಾಂಗ್ಲಾದೇಶ ವಿರುದ್ಧ 297 ರನ್‌ ಕಲೆಹಾಕಿತ್ತು.

ಸಾಲ್ಟ್‌ ದಾಖಲೆ
ಟಿ20 ಕ್ರಿಕೆಟ್‌ನಲ್ಲಿ ಈವರೆಗೆ 42 ಪಂದ್ಯಗಳಲ್ಲಿ ಆಡಿರುವ ಸಾಲ್ಟ್‌ 4ನೇ ಶತಕದ ಸಂಭ್ರಮ ಆಚರಿಸಿದರು. ಅದರೊಂದಿಗೆ, ಈ ಮಾದರಿಯಲ್ಲಿ ಹೆಚ್ಚು ಶತಕ ಗಳಿಸಿದ ಬ್ಯಾಟರ್‌ಗಳ ಸಾಲಿನಲ್ಲಿ ಜಂಟಿ 2ನೇ ಸ್ಥಾನಕ್ಕೇರಿದರು.

ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ (ಐಪಿಎಲ್‌) ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ಪರ ಆಡುವ ಸಾಲ್ಟ್‌ 39 ಎಸೆತಗಳಲ್ಲೇ ಮೂರಂಕಿ ದಾಟಿದರು. ಅದರೊಂದಿಗೆ, ಇಂಗ್ಲೆಂಡ್‌ ಪರ ವೇಗವಾಗಿ ಶತಕ ಗಳಿಸಿದ ಬ್ಯಾಟರ್‌ ಎನಿಸಿದರು.

ಔಟಾಗದೆ ಇನಿಂಗ್ಸ್‌ ಪೂರ್ತಿ ಆಡಿದ ಅವರು ಒಟ್ಟು 60 ಎಸೆತಗಳನ್ನು ಎದುರಿಸಿ 141 ರಬ್‌ ಕಲೆಹಾಕಿದರು. ಇದು, ಆಂಗ್ಲರ ತಂಡದ ಪರ ಇದು ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ.

ಟಿ20ಯಲ್ಲಿ ಹೆಚ್ಚು ಶತಕ ಗಳಿಸಿದವರು

  • ಗ್ಲೆನ್‌ ಮ್ಯಾಕ್ಸ್‌ವೆಲ್‌ (ಆಸ್ಟ್ರೇಲಿಯಾ): 114 ಇನಿಂಗ್ಸ್‌ಗಳಲ್ಲಿ 5 ಶತಕ

  • ರೋಹಿತ್‌ ಶರ್ಮಾ (ಭಾರತ): 114 ಇನಿಂಗ್ಸ್‌ಗಳಲ್ಲಿ 5 ಶತಕ

  • ಸೂರ್ಯಕುಮಾರ್‌ ಯಾದವ್‌ (ಭಾರತ): 80 ಇನಿಂಗ್ಸ್‌ಗಳಲ್ಲಿ 4 ಶತಕ

  • ಫಿಲ್‌ ಸಾಲ್ಟ್‌ (ಇಂಗ್ಲೆಂಡ್‌): 42 ಇನಿಂಗ್ಸ್‌ಗಳಲ್ಲಿ 4 ಶತಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.