ADVERTISEMENT

ಕ್ರಿಕೆಟ್ ಪ್ರೇಮಿಗಳ ಹೃದಯ ಗೆದ್ದ ಭಾರತ-ಪಾಕ್ ಆಟಗಾರರ ಒಡನಾಟ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಅಕ್ಟೋಬರ್ 2021, 11:47 IST
Last Updated 25 ಅಕ್ಟೋಬರ್ 2021, 11:47 IST
ಕ್ರೀಡಾಸ್ಫೂರ್ತಿ ಮೆರೆದ ಭಾರತ-ಪಾಕ್ ಆಟಗಾರರು
ಕ್ರೀಡಾಸ್ಫೂರ್ತಿ ಮೆರೆದ ಭಾರತ-ಪಾಕ್ ಆಟಗಾರರು   

ದುಬೈ: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಣ ಪಂದ್ಯದ ಬಳಿಕ ಉಭಯ ತಂಡದ ಆಟಗಾರರು ಪರಸ್ಪರ ಸೌಹಾರ್ದಯುತ ಒಡನಾಟದಲ್ಲಿ ಭಾಗಿಯಾಗಿರುವುದು ಕ್ರಿಕೆಟ್ ಪ್ರೇಮಿಗಳ ಹೃದಯ ಗೆಲ್ಲುವಲ್ಲಿ ಕಾರಣವಾಗಿದೆ.

ಪಾಕಿಸ್ತಾನ ವಿರುದ್ಧ ನಡೆದ ಪಂದ್ಯದಲ್ಲಿ ಭಾರತ 10 ವಿಕೆಟ್ ಅಂತರದ ಹೀನಾಯ ಸೋಲಿಗೆ ಶರಣಾಗಿತ್ತು. ಆದರೆ ಪಂದ್ಯದ ಬಳಿಕ ಪ್ರಬುದ್ಧತೆ ಮೆರೆದಿರುವ ನಾಯಕ ವಿರಾಟ್ ಕೊಹ್ಲಿ, ಪಾಕಿಸ್ತಾನ ಆಟಗಾರರನ್ನು ಪ್ರಶಂಸಿಸಲು ಮರೆಯಲಿಲ್ಲ.

ಎದುರಾಳಿ ತಂಡವು ತಮಗಿಂತಲೂ ಉತ್ತಮ ಕ್ರಿಕೆಟ್ ಆಡಿರುವುವನ್ನು ವಿರಾಟ್ ಕೊಹ್ಲಿ ಒಪ್ಪಿಕೊಂಡಿದ್ದಾರೆ. ಅಲ್ಲದೆ ಇದು ಕೇವಲ ಆರಂಭವಷ್ಟೇ, ತಪ್ಪನ್ನು ತಿದ್ದಿಕೊಂಡು ಇನ್ನಷ್ಟು ಬಲಿಷ್ಠರಾಗಿ ಬರುವುದಾಗಿ ತಿಳಿಸಿದ್ದಾರೆ.

ಅಮೋಘ ಆಟವಾಡಿದ ಪಾಕಿಸ್ತಾನ ನಾಯಕ ಬಾಬರ್ ಆಜಂ ಹಾಗೂ ಮೊಹಮ್ಮದ್ ರಿಜ್ವಾನ್ ಅವರನ್ನು ಪಂದ್ಯದ ಬಳಿಕ ಕೊಹ್ಲಿ ಅಭಿನಂದಿಸಿದರು. ಈ ಪೈಕಿ ರಿಜ್ವಾನ್ ಅವರನ್ನು ಅಪ್ಪಿಕೊಂಡು 'ಭಲೇ ಭೇಷ್' ಎಂದರು. ಬಳಿಕ ಪಾಕ್ ನಾಯಕರೊಂದಿಗೂ ಪಂದ್ಯದ ಬಗ್ಗೆ ಸಮಾಲೋಚನೆ ನಡೆಸಿದರು.

ಇನ್ನೊಂದೆಡೆ ಟೀಮ್ ಇಂಡಿಯಾ ಮಾರ್ಗದರ್ಶಕ ಮಹೇಂದ್ರ ಸಿಂಗ್ ಧೋನಿ, ಪಾಕ್ ನಾಯಕ ಬಾಬರ್ ಆಜಂ ಹಾಗೂ ಶೋಯಬ್ ಮಲಿಕ್ ಜೊತೆಗೆ ಮಾತುಕತೆ ನಡೆಸಿದರು. ಈ ವೇಳೆ ಪಾಕಿಸ್ತಾನದ ಯುವ ಆಟಗಾರರು ಮಹಿ ಜೊತೆ ಸೆಲ್ಫಿ ಕ್ಲಿಕ್ಕಿಸಿದ್ದರು.

ಎರಡೂ ತಂಡಗಳಆಟಗಾರರ ಒಡನಾಟವು ಕ್ರಿಕೆಟ್ ಪ್ರೇಮಿಗಳ ಹೃದಯವನ್ನು ಗೆದ್ದಿದೆ. ಅಲ್ಲದೆ ಉಭಯ ತಂಡಗಳ ನಡುವೆ ಇನ್ನಷ್ಟು ಹೆಚ್ಚಿನ ಪಂದ್ಯಗಳು ನಡೆಯಬೇಕು ಎಂದು ವಿನಂತಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.