ADVERTISEMENT

ಜೋಶ್ ಲಿಟ್ಲ್ ಹ್ಯಾಟ್ರಿಕ್ ವ್ಯರ್ಥ; ಕಿವೀಸ್‌ಗೆ ಗೆಲುವು, ಸೆಮಿಫೈನಲ್ ಹಾದಿ ಸುಗಮ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 4 ನವೆಂಬರ್ 2022, 10:23 IST
Last Updated 4 ನವೆಂಬರ್ 2022, 10:23 IST
ಕೇನ್ ವಿಲಿಯಮ್ಸನ್
ಕೇನ್ ವಿಲಿಯಮ್ಸನ್   

ಅಡಿಲೇಡ್: ಐಸಿಸಿ ಟ್ವೆಂಟಿ-20 ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಶುಕ್ರವಾರ ಐರ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ 35 ರನ್ ಅಂತರದ ರೋಚಕ ಗೆಲುವು ದಾಖಲಿಸಿರುವ ನ್ಯೂಜಿಲೆಂಡ್ ತಂಡದ ಸೆಮಿಫೈನಲ್ ಹಾದಿ ಸುಗಮವೆನಿಸಿದೆ.

ಮತ್ತೊಂದೆಡೆ ಐರ್ಲೆಂಡ್ ಬೌಲರ್ ಜೋಶ್ ಲಿಟ್ಲ್ ಹ್ಯಾಟ್ರಿಕ್ ವಿಕೆಟ್ ಸಾಧನೆ ವ್ಯರ್ಥವಾಗಿದೆ.

ನ್ಯೂಜಿಲೆಂಡ್ ಐದು ಪಂದ್ಯಗಳಲ್ಲಿ ಮೂರು ಗೆಲುವಿನೊಂದಿಗೆ ಒಟ್ಟು ಏಳು ಅಂಕ ಕಲೆ ಹಾಕಿದೆ. ಅಲ್ಲದೆ +2.113 ರನ್ ರೇಟ್‌ನೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ.

ADVERTISEMENT

ಅತ್ತ ತಲಾ ಐದು ಅಂಕಗಳನ್ನು ಹೊಂದಿರುವ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ತಂಡಗಳಿಗೆ ಇನ್ನೊಂದು ಪಂದ್ಯ ಮಾತ್ರ ಬಾಕಿ ಉಳಿದಿದೆ. ಇತ್ತಂಡಗಳು ತಮ್ಮ ತಮ್ಮ ಕೊನೆಯ ಪಂದ್ಯಗಳಲ್ಲಿ ಗೆಲುವು ದಾಖಲಿಸಿದರೂ ಏಳು ಅಂಕವನ್ನಷ್ಟೇ ಗಳಿಸಲಿದೆ. ಅಲ್ಲದೆ ನ್ಯೂಜಿಲೆಂಡ್ ತಂಡದ ರನ್‌ರೇಟ್ ಮೀರಿಸುವುದು ಕಠಿಣವೆನಿಸಿದೆ. ಸದ್ಯ ಇಂಗ್ಲೆಂಡ್ +0.547 ಮತ್ತು ಆಸ್ಟ್ರೇಲಿಯಾ -0.304 ರನ್ ರೇಟ್ ಹೊಂದಿವೆ.

ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಅರ್ಧಶತಕದ (61) ಬಲದೊಂದಿಗೆ ಆರು ವಿಕೆಟ್ ನಷ್ಟಕ್ಕೆ 185 ರನ್ ಗಳಿಸಿತ್ತು.

ಇನ್ನಿಂಗ್ಸ್‌ನ 19ನೇ ಓವರ್‌ನಲ್ಲಿ ಜೋಶ್ ಲಿಟ್ಲ್ ಹ್ಯಾಟ್ರಿಕ್ ಸಾಧನೆ ಮಾಡಿದರು.

ಬಳಿಕ ಗುರಿ ಬೆನ್ನಟ್ಟಿದ ಐರ್ಲೆಂಡ್ ಒಂಬತ್ತು ವಿಕೆಟ್ ನಷ್ಟಕ್ಕೆ 150 ರನ್ ಗಳಿಸಲಷ್ಟೇ ಶಕ್ತವಾಯಿತು. ಕಿವೀಸ್ ಪರ ಲೂಕಿ ಫರ್ಗ್ಯೂಸನ್ ಮೂರು ಮತ್ತು ಟಿಮ್ ಸೌಥಿ, ಮಿಚೆಲ್ ಸ್ಯಾಂಟ್ನರ್ ಹಾಗೂ ಇಶ್ ಸೋಧಿ ತಲಾ ಎರಡು ವಿಕೆಟ್ ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.