ADVERTISEMENT

ಐಪಿಎಲ್ ಬಳಿಕ ವಿಶ್ರಾಂತಿ: ಟಿ20 ವಿಶ್ವಕಪ್ ಅಭ್ಯಾಸ ಪಂದ್ಯದಿಂದ ಹೊರಗುಳಿದ ಕೊಹ್ಲಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ಮೇ 2024, 9:45 IST
Last Updated 26 ಮೇ 2024, 9:45 IST
<div class="paragraphs"><p>ವಿರಾಟ್‌ ಕೊಹ್ಲಿ</p></div>

ವಿರಾಟ್‌ ಕೊಹ್ಲಿ

   

ಪಿಟಿಐ ಚಿತ್ರ

ಮುಂಬೈ: ಭಾರತ ಕ್ರಿಕೆಟ್‌ ತಂಡದ 'ರನ್‌ ಯಂತ್ರ' ಖ್ಯಾತಿಯ ವಿರಾಟ್‌ ಕೊಹ್ಲಿ ಅವರು ಟಿ20 ವಿಶ್ವಕಪ್‌ ಟೂರ್ನಿ ಆರಂಭಕ್ಕೂ ಮುನ್ನ ನಡೆಯುವ ಅಭ್ಯಾಸ ಪಂದ್ಯದಿಂದ ಹೊರಗುಳಿಯಲಿದ್ದಾರೆ. ಐಪಿಎಲ್‌ನಲ್ಲಿ ಸತತ 15 ಪಂದ್ಯಗಳಲ್ಲಿ ಆಡಿರುವ ಅವರು ನ್ಯೂಯಾರ್ಕ್‌ನಲ್ಲಿ ಜೂನ್‌ 1ರಂದು ಬಾಂಗ್ಲಾದೇಶ ವಿರುದ್ಧ ನಡೆಯುವ ಅಭ್ಯಾಸ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ.

ADVERTISEMENT

ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿಗೆ (ಬಿಸಿಸಿಐ) ಮೂಲಗಳ ಪ್ರಕಾರ, 'ತಡವಾಗಿ ತಂಡ ಕೂಡಿಕೊಳ್ಳುವುದಾಗಿ ಕೊಹ್ಲಿ ತಿಳಿಸಿದ್ದಾರೆ. ಅವರ ಮನವಿಗೆ ಬಿಸಿಸಿಐ ಸಮ್ಮತಿಸಿದೆ. ಅದಕ್ಕಾಗಿಯೇ ಅವರ ವೀಸಾ ಸಂಬಂಧಿತ ಪ್ರಕ್ರಿಯೆಯನ್ನು ಕಾಯ್ದಿರಿಸಲಾಗಿದೆ' ಎಂದು ವರದಿಯಾಗಿದೆ.

ಕೊಹ್ಲಿ, ಮೇ 30ರಂದು ನ್ಯೂಯಾರ್ಕ್‌ಗೆ ಪ್ರಯಾಣ ಬೆಳೆಸುವ ಸಾಧ್ಯತೆ ಇದೆ ಎನ್ನಲಾಗಿದೆ.

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡದ ಸ್ಟಾರ್‌ ಬ್ಯಾಟರ್‌ ವಿರಾಟ್‌, ಐಪಿಎಲ್‌ನಲ್ಲಿ ಆಡಿದ 15 ಪಂದ್ಯಗಳಿಂದ 51.75ರ ಸರಾಸರಿ ಹಾಗೂ 154.70ರ ಸ್ಟ್ರೈಕ್‌ರೇಟ್‌ನಲ್ಲಿ 741 ರನ್‌ ಗಳಿಸಿದ್ದಾರೆ. ಆ ಮೂಲಕ ಈ ಆವೃತ್ತಿಯಲ್ಲಿ ಅತಿಹೆಚ್ಚು ರನ್‌ ಗಳಿಸಿದ ಬ್ಯಾಟರ್‌ ಎನಿಸಿಕೊಂಡಿದ್ದಾರೆ.

ಆರ್‌ಸಿಬಿ ತಂಡ ರಾಜಸ್ಥಾನ ರಾಯಲ್ಸ್‌ ವಿರುದ್ಧ ಮೇ 22ರಂದು ನಡೆದ ಎಲಿಮಿನೇಟರ್‌ ಪಂದ್ಯದಲ್ಲಿ 4 ವಿಕೆಟ್‌ ಅಂತರದ ಸೋಲು ಕಂಡಿದೆ. ರಾಜಸ್ಥಾನ ಸಹ, ಎರಡನೇ ಕ್ವಾಲಿಫೈಯರ್‌ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್ ಎದುರು ಸೋತು ಪ್ರಶಸ್ತಿ ರೇಸ್‌ನಿಂದ ಹೊರಬಿದ್ದಿದೆ.

ಸನ್‌ರೈಸರ್ಸ್‌ ಹಾಗೂ ಕೋಲ್ಕತ್ತ ನೈಟ್‌ರೈಡರ್ಸ್‌ ತಂಡಗಳು ಇಂದು (ಮೇ 26) ನಡೆಯುವ ಫೈನಲ್‌ನಲ್ಲಿ ಸೆಣಸಾಡಲಿವೆ.

ಕೊಹ್ಲಿ ಮಾತ್ರವಲ್ಲದೆ, ರಾಜಸ್ಥಾನ ತಂಡದ ನಾಯಕ ಸಂಜು ಸ್ಯಾಮ್ಸನ್‌ ಹಾಗೂ ಮುಂಬೈ ಇಂಡಿಯನ್ಸ್‌ ನಾಯಕ ಹಾರ್ದಿಕ್‌ ಪಾಂಡ್ಯ ಅವರೂ ತಡವಾಗಿ ಟೀಂ ಇಂಡಿಯಾ ಸೇರಿಕೊಳ್ಳಲಿದ್ದಾರೆ. ದುಬೈನಲ್ಲಿ ವೈಯಕ್ತಿಕ ಕೆಲಸಗಳಿವೆ ಎಂದು ಸ್ಯಾಮ್ಸನ್‌ ಬಿಸಿಸಿಐಗೆ ಮಾಹಿತಿ ನೀಡಿದ್ದಾರೆ.

ಸ್ಯಾಮ್ಸನ್‌, ಪಾಂಡ್ಯ ಅವರಿಗೂ ಬಿಸಿಸಿಐ ಅನುಮತಿ ನೀಡಿದೆ.

ಶನಿವಾರವೇ ಹೊರಟ ಮೊದಲ ತಂಡ
ಈ ಬಾರಿಯ ಟಿ20 ವಿಶ್ವಕಪ್‌ ಟೂರ್ನಿಯು ಅಮೆರಿಕ ಹಾಗೂ ವೆಸ್ಟ್‌ ಇಂಡೀಸ್‌ನಲ್ಲಿ ನಡೆಯಲಿದೆ. ಜೂನ್‌ 1ರಂದು ನಡೆಯುವ ಮೊದಲ ಪಂದ್ಯದಲ್ಲಿ ಯುಎಸ್‌ ಹಾಗೂ ಕೆನಡಾ ಮುಖಾಮುಖಿಯಾಗಲಿವೆ.

ವಿಶ್ವಕಪ್‌ನಲ್ಲಿ ಪಾಲ್ಗೊಳ್ಳಲಿರುವ ಭಾರತ ಆಟಗಾರರ ಮೊದಲ ತಂಡ ಶನಿವಾರವೇ ಅಮೆರಿಕಕ್ಕೆ ತೆರಳಿದೆ. ನಾಯಕ ರೋಹಿತ್‌ ಶರ್ಮಾ, ಜಸ್‌ಪ್ರಿತ್‌ ಬೂಮ್ರಾ, ರವೀಂದ್ರ ಜಡೇಜ, ಶಿವಂ ದುಬೆ, ಕುಲದೀಪ್‌ ಯಾದವ್‌, ಶುಭಮನ್‌ ಗಿಲ್‌, ಮೊಹಮ್ಮದ್‌ ಸಿರಾಜ್‌, ಅಕ್ಷರ್‌ ಪಟೇಲ್‌, ಸೂರ್ಯಕುಮಾರ್‌ ಯಾದವ್‌, ರಿಷಭ್‌ ಪಂತ್ ಹಾಗೂ ಸಹಾಯಕ ಸಿಬ್ಬಂದಿ ಮುಂಬೈನಿಂದ ವಿಮಾನ ಏರಿದ್ದಾರೆ.

ಎ ಗುಂಪಿನಲ್ಲಿ ಭಾರತ, ಪಾಕಿಸ್ತಾನ
ಟೂರ್ನಿಯಲ್ಲಿ ಒಟ್ಟು 16 ತಂಡಗಳು 4 ಗುಂಪುಗಳಲ್ಲಿ ಕಣಕ್ಕಿಳಿಯುತ್ತಿವೆ. ಭಾರತ, ಪಾಕಿಸ್ತಾನ, ಐರ್ಲೆಂಡ್‌, ಕೆನಡಾ ಹಾಗೂ ಯುಎಸ್‌ ತಂಡಗಳೂ ಟೂರ್ನಿಯ 'ಎ' ಗುಂಪಿನಲ್ಲಿ ಸ್ಥಾನ ಪಡೆದಿವೆ.

ರೋಹಿತ್‌ ಶರ್ಮಾ ಬಳಗ ತನ್ನ ಮೊದಲ ಪಂದ್ಯದಲ್ಲಿ (ಜೂನ್‌ 5ರಂದು) ಐರ್ಲೆಂಡ್‌ ವಿರುದ್ಧ ಸೆಣಸಾಟ ನಡೆಸಲಿದೆ. ಜೂನ್‌ 9ರಂದು ಪಾಕ್‌ ವಿರುದ್ಧ ಆಡಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.