ADVERTISEMENT

T20WC | ಸೂಪರ್ ಎಂಟಕ್ಕೆ ನ್ಯೂಜಿಲೆಂಡ್: ಗಮನ ಸೆಳೆದ ಕೆನಡಾದ ಯುವರಾಜ್ ಸಮ್ರಾ ಶತಕ

ಏಜೆನ್ಸೀಸ್
Published 17 ಫೆಬ್ರುವರಿ 2026, 14:07 IST
Last Updated 17 ಫೆಬ್ರುವರಿ 2026, 14:07 IST
<div class="paragraphs"><p>ಯುವರಾಜ್ ಸಮ್ರಾ</p></div>

ಯುವರಾಜ್ ಸಮ್ರಾ

   

ಚೆನ್ನೈ: ನಿರೀಕ್ಷೆಯಂತೆ ನ್ಯೂಜಿಲೆಂಡ್ ತಂಡ ಟಿ20 ವಿಶ್ವಕಪ್ ಟೂರ್ನಿಯ ಸೂಪರ್ ಎಂಟರ ಹಂತ ತಲುಪಿತು. ಗ್ಲೆನ್‌ ಫಿಲಿಪ್ಸ್‌ (ಔಟಾಗದೇ 76) ಮತ್ತು ರಚಿನ್ ರವೀಂದ್ರ (ಔಟಾಗದೇ 59) ಅವರ ಅರ್ಧ ಶತಕಗಳ ನೆರವಿನಿಂದ ಮಿಚೆಲ್ ಸ್ಯಾಂಟ್ನರ್ ಪಡೆ  ಮಂಗಳವಾರ ಎಂಟು ವಿಕೆಟ್‌ಗಳಿಂದ ಕೆನಡಾ ತಂಡವನ್ನು ಸೋಲಿಸಿತು.

ಡಿ ಗುಂಪಿನಲ್ಲಿ ದಕ್ಷಿಣ ಆಫ್ರಿಕಾ ಮೊದಲ ಸ್ಥಾನ ಗಳಿಸಿದರೆ, ನ್ಯೂಜಿಲೆಂಡ್ ಎರಡನೇ ಸ್ಥಾನ ಗಳಿಸಿತು. 2024ರ ಆವೃತ್ತಿಯಲ್ಲಿ ಸೆಮಿಫೈನಲ್ ತಲುಪಿದ್ದ ಅಫ್ಗಾನಿಸ್ತಾನ ಹೊರಬಿತ್ತು. ಗೆಲುವಿಗೆ 174 ರನ್‌ಗಳ ಗುರಿಯನ್ನು ಎದುರಿಸಿದ ನ್ಯೂಜಿಲೆಂಡ್ 4.5 ಓವರುಗಳಿರುವಂತೆ 2 ವಿಕೆಟ್‌ಗೆ 176 ರನ್ ಹೊಡೆಯಿತು. 

ADVERTISEMENT

ಕೆನಡಾ ಆಡಿದ ಮೂರೂ ಪಂದ್ಯ ಸೋತರೂ, 19 ವರ್ಷ ವಯಸ್ಸಿನ ಆರಂಭ ಆಟಗಾರ ಯುವರಾಜ್ ಸಮ್ರಾ ಗಮನ ಸೆಳೆದರು. ಅವರು ಟಿ20 ವಿಶ್ವಕಪ್‌ನಲ್ಲಿ ಶತಕ ಹೊಡೆದ ಅತಿ ಕಿರಿಯ ಆಟಗಾರ ಎನಿಸಿದರು.

65 ಎಸೆತಗಳಲ್ಲಿ 11 ಬೌಂಡರಿ, ಅರ್ಧ ಡಜನ್ ಸಿಕ್ಸರ್ ಬಾರಿಸಿ 110 ರನ್ ಗಳಿಸಿದ ಯುವರಾಜ್ ತಮ್ಮ ತಂಡ 4 ವಿಕೆಟ್‌ಗೆ 110 ರನ್‌ಗಳ ಗೌರವಾರ್ಹ ಮೊತ್ತ ಗಳಿಸಲು ನೆರವಾದರು. ಕೆನಡಾ ನಾಯಕ ದಿಲ್‌ಪ್ರೀತ್ ಸಿಂಗ್ ಬಾಜ್ವಾ ಟಾಸ್‌ ಗೆದ್ದು ಬ್ಯಾಟ್ ಮಾಡಲು ನಿರ್ಧರಿಸಿದ್ದರು.

ಸಮ್ರಾ ಮತ್ತು ದಿಲ್‌ಪ್ರೀತ್ ಬಾಜ್ವಾ (36, 39ಎ) ಮೊದಲ ವಿಕೆಟ್‌ಗೆ 14 ಓವರುಗಳಲ್ಲಿ 116 ರನ್ ಗಳಿಸಿದ್ದು ಗಮನಾರ್ಹ. ಬಾಜ್ವಾ ಅವರು ಜೇಮಿಸನ್ ಬೌಲಿಂಗ್‌ನಲ್ಲಿ ಫಿಲಿಪ್ಸ್ ಅವರಿಗೆ ಕ್ಯಾಚ್ ಆಗುವ ಮೂಲಕ ಜೊತೆಯಾಟ ಮುರಿಯಿತು. ಆದರೆ ಸಮ್ರಾ ಆಕ್ರಮಣಕಾರಿ ಆಟ ಮುಂದುವರಿಸಿದರು. 58 ಎಸೆತಗಳಲ್ಲಿ ಶತಕ ದಾಟಿದ ಅವರು ಹಾಲಿ ವಿಶ್ವಕಪ್‌ನ ಅತ್ಯಧಿಕ ಮೊತ್ತ ದಾಖಲಿಸಿದರು. ಅವರು ಇನಿಂಗ್ಸ್‌ ಅಂತಿಮ ಓವರಿನಲ್ಲಿ (ಬೌಲರ್‌: ಜೇಕಬ್ ಡಫಿ) ಭರ್ಜರಿ ಹೊಡೆತಕ್ಕೆ ಯತ್ನಿಸಿ ಲಾಂಗ್‌ಲೆಗ್‌ನಲ್ಲಿ ಕ್ಯಾಚಿತ್ತರು.

ಸಂಕ್ಷಿಪ್ತ ಸ್ಕೋರು: ಕೆನಡಾ: 20 ಓವರುಗಳಲ್ಲಿ 4 ವಿಕೆಟ್‌ಗೆ 173 (ಯುವರಾಜ್ ಸಮ್ರಾ 110, ದಿಲ್‌ಪ್ರೀತ್ ಬಾಜ್ವಾ 36); ನ್ಯೂಜಿಲೆಂಡ್‌: 15.1 ಓವರುಗಳಲ್ಲಿ 2 ವಿಕೆಟ್‌ಗೆ 176 (ರಚಿನ್ ರವೀಂದ್ರ ಔಟಾಗದೇ 59, ಗ್ಲೆನ್ ಫಿಲಿಪ್ಸ್‌ ಔಟಾಗದೇ 76); ಪಂದ್ಯದ ಆಟಗಾರ: ಗ್ಲೆನ್ ಫಿಲಿಪ್ಸ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.