ADVERTISEMENT

T20 World Cup 2026: ಲೀಗ್ ಹಂತದಲ್ಲಿ ಹೆಚ್ಚು ರನ್, ವಿಕೆಟ್ ಪಡೆದ ಆಟಗಾರರಿವರು..

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2026, 5:59 IST
Last Updated 21 ಫೆಬ್ರುವರಿ 2026, 5:59 IST
   

ಭಾರತ ಮತ್ತು ಶ್ರೀಲಂಕಾದ ಆತಿಥ್ಯದಲ್ಲಿ ಜರುಗುತ್ತಿರುವ ಟಿ20 ವಿಶ್ವಕಪ್‌ನ ಲೀಗ್ ಹಂತದ ಪಂದ್ಯಗಳು ಮುಗಿದಿದ್ದು, ಸೂಪರ್‌ –8 ಹಂತಕ್ಕೆ ಕ್ಷಣಗಣನೆ ಆರಂಭವಾಗಿದೆ.

ಲೀಗ್‌ ಹಂತದಲ್ಲಿ ಒಟ್ಟು 20 ತಂಡಗಳು ಭಾಗವಹಿಸಿದ್ದವು. ಅದರಲ್ಲಿ 8 ತಂಡಗಳು ಸೂಪರ್‌ –8 ಹಂತಕ್ಕೆ ಲಗ್ಗೆಯಿಟ್ಟಿದ್ದು, ಈ ಹಂತವನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ.

ಭಾರತ ತಂಡವು 'ಎ' ಗುಂಪಿನಲ್ಲಿ ಕಾಣಿಸಿಕೊಂಡಿದೆ. ಇದೇ ಗುಂಪಿನಲ್ಲಿ ಕಳೆದ ಬಾರಿಯ ರನ್ನರ್-ಅಪ್ ಆದ ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್ ಮತ್ತು ಜಿಂಬಾಬ್ವೆ ತಂಡಗಳು ಅರ್ಹತೆ ಗಿಟ್ಟಿಸಿಕೊಂಡಿವೆ.

ADVERTISEMENT

'ಬಿ' ಗುಂಪಿನಲ್ಲಿ ಜಂಟಿ ಆತಿಥ್ಯ ವಹಿಸುತ್ತಿರುವ ಶ್ರೀಲಂಕಾ ಜೊತೆಗೆ ಇಂಗ್ಲೆಂಡ್, ನ್ಯೂಜಿಲೆಂಡ್ ಹಾಗೂ ಪಾಕಿಸ್ತಾನ ತಂಡಗಳು ತೇರ್ಗಡೆ ಹೊಂದಿವೆ.

ಲೀಗ್ ಹಂತದಲ್ಲಿ ಪ್ರತಿಯೊಂದು ತಂಡವೂ ತಲಾ 4 ಪಂದ್ಯಗಳನ್ನು ಆಡಿದ್ದು, ಅದರಲ್ಲಿ ಅತಿಹೆಚ್ಚು ರನ್‌ ಗಳಿಸಿರುವ ಬ್ಯಾಟರ್‌ ಹಾಗೂ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿ ಇಲ್ಲಿದೆ.

ಹೆಚ್ಚು ರನ್‌ ಗಳಿಸಿದ ಬ್ಯಾಟರ್: ‌

ಲೀಗ್ ಹಂತದ ಪಂದ್ಯದಲ್ಲಿ ಅತಿಹೆಚ್ಚು ರನ್‌ ಗಳಿಸಿರುವ ಬ್ಯಾಟರ್‌ಗಳ ಪಟ್ಟಿಯಲ್ಲಿ ಪಾಕಿಸ್ತಾನದ ಸಾಹಿಬ್‌ಜಾದಾ ಫರ್ಹಾನ್ ಅಗ್ರಸ್ಥಾನದಲ್ಲಿದ್ದು, 4 ಪಂದ್ಯಗಳಲ್ಲಿ 164.18 ಸ್ಟ್ರೈಕ್‌ರೇಟ್‌ನಲ್ಲಿ 220 ರನ್‌ ಗಳಿಸಿದ್ದಾರೆ. 2ನೇ ಸ್ಥಾನದಲ್ಲಿರುವ ಪಥುಮ್ ನಿಸಾಂಕ ಅವರು ಒಂದು ಶತಕ ಸೇರಿದಂತೆ 199 ರನ್‌ ಬಾರಿಸಿದ್ದಾರೆ. ಭಾರತದ ಆರಂಭಿಕ ಬ್ಯಾಟರ್ ಇಶಾನ್ ಕಿಶನ್ ಅವರು 4 ಪಂದ್ಯಗಳಲ್ಲಿ 202.30 ಸ್ಟ್ರೈಕ್‌ರೇಟ್‌ನಲ್ಲಿ 176 ರನ್‌ ಗಳಿಸಿದ್ದು, ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದಾರೆ.

ಕೆನಡಾದ ಯುವರಾಜ್ ಸಾಮ್ರಾ ಅವರು 110 ರನ್‌ ಗಳಿಸಿರುವುದು ಈ ಟೂರ್ನಿಯಲ್ಲಿ ಇನಿಂಗ್ಸ್ ಒಂದರಲ್ಲಿ ಬ್ಯಾಟರ್‌ ಒಬ್ಬರು ಗಳಿಸಿರುವ ಗರಿಷ್ಠ ರನ್ ಆಗಿದೆ.

ಹೆಚ್ಚು ವಿಕೆಟ್ ಪಡೆದ ಬೌಲರ್‌:

ಈ ಟೂರ್ನಿಯ ಲೀಗ್ ಪಂದ್ಯಗಳಲ್ಲಿ ಅಮೆರಿಕದ ಶ್ಯಾಡ್ಲಿ ವ್ಯಾನ್ ಶಾಲ್ಕ್‌ವಿಕ್ ಅವರು 4 ಪಂದ್ಯಗಳಲ್ಲಿ 13 ವಿಕೆಟ್‌ ಪಡೆಯುವ ಮೂಲಕ ಯಶಸ್ವಿ ಬೌಲರ್ ಆಗಿದ್ದಾರೆ. ಭಾರತದ ಸ್ಪಿನ್ ಬೌಲರ್ ವರುಣ್ ಚಕ್ರವರ್ತಿ, 4 ಪಂದ್ಯಗಳಲ್ಲಿ 9 ವಿಕೆಟ್ ಕಬಳಿಸುವ ಮೂಲಕ 2ನೇ ಸ್ಥಾನದಲ್ಲಿದ್ದಾರೆ. ವಿವಾದಾತ್ಮಕ ಬೌಲಿಂಗ್ ಶೈಲಿಯಿಂದ ಸುದ್ದಿಯಲ್ಲಿರುವ ಪಾಕ್ ಬೌಲರ್ ಉಸ್ಮಾನ್ ತಾರೀಕ್, 3 ಪಂದ್ಯಗಳಲ್ಲಿ 8 ವಿಕೆಟ್ ಪಡೆದಿದ್ದಾರೆ.

ವೆಸ್ಟ್‌ ಇಂಡೀಸ್‌ನ ರೊಮಾರಿಯೋ ಶೆಫರ್ಡ್, ಸ್ಕಾಟ್ಲೆಂಡ್ ವಿರುದ್ಧ ಹಾಗೂ ಯುಎಇ ತಂಡದ ಬೌಲರ್ ಜುನೈದ್ ಸಿದ್ದಿಕ್ ಅವರು ಕೆನಡಾ ವಿರುದ್ಧ 5 ವಿಕೆಟ್ ಗೊಂಚಲು ಪಡೆದಿದ್ದಾರೆ.

ಇಂದಿನಿಂದ ಸೂಪರ್‌ –8 ಪಂದ್ಯಗಳು ಆರಂಭವಾಗಲಿವೆ. ಮಾರ್ಚ್‌ 8ರಂದು ಫೈನಲ್‌ ಪಂದ್ಯ ಜರುಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.