ADVERTISEMENT

ಕ್ರಿಕೆಟ್‌ ಬೆಟ್ಟಿಂಗ್‌: ಪೊಲೀಸರಿಂದ 18 ಬುಕ್ಕಿಗಳ ಬಂಧನ

ಅದಿತ್ಯ ಕೆ.ಎ.
Published 28 ಅಕ್ಟೋಬರ್ 2022, 21:45 IST
Last Updated 28 ಅಕ್ಟೋಬರ್ 2022, 21:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟ್ವೆಂಟಿ–20 ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯ ಕಾವು ಪಂದ್ಯದಿಂದ ಪಂದ್ಯಕ್ಕೆ ಜೋರಾಗುತ್ತಿದ್ದು, ಅದರ ಜೊತೆಗೆ ರಾಜ್ಯದಲ್ಲಿ ಬೆಟ್ಟಿಂಗ್‌ ಭರಾಟೆಯೂ ಸದ್ದು ಮಾಡುತ್ತಿದೆ.

ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ನಡೆಯುತ್ತಿರುವ ಬೆಟ್ಟಿಂಗ್‌ನಲ್ಲಿ ಲಕ್ಷದಿಂದ ಕೋಟಿಯ ತನಕ ಹಣ ಬದಲಾವಣೆ ಆಗುತ್ತಿದೆ. ಪಂದ್ಯಗಳು ರೋಚಕವಾದಷ್ಟೂ ದೊಡ್ಡ ಮೊತ್ತದ ಹಣವು ವರ್ಗಾವಣೆ ಆಗುತ್ತಿರುವುದು ಪೊಲೀಸ್‌ ತನಿಖೆಯಿಂದ ತಿಳಿದುಬಂದಿದೆ.

ಭಾರತ, ಪಾಕಿಸ್ತಾನದ ನಡುವೆ ನಡೆದ ಪಂದ್ಯದ ವೇಳೆ ಕೋಟ್ಯಂತರ ರೂಪಾಯಿ ಬೆಟ್ಟಿಂಗ್ ನಡೆದಿರುವುದು ಬೆಳಕಿಗೆ ಬಂದಿದೆ. ಪಾಕಿಸ್ತಾನ ತಂಡಕ್ಕೆ ಜಿಂಬಾಬ್ವೆ ತಂಡವು ಆಘಾತ ನೀಡಿದ್ದು, ಪಂದ್ಯವು ಕೊನೆಯ ಬಾಲ್‌ ತನಕ ರೋಚಕತೆ ಉಳಿಸಿಕೊಂಡಿತ್ತು. ಈ ಪಂದ್ಯದಲ್ಲೂ ದೊಡ್ಡಮಟ್ಟದಲ್ಲಿ ಬೆಟ್ಟಿಂಗ್ ನಡೆದಿದೆ. ಪೊಲೀಸರು ಬೆಟ್ಟಿಂಗ್‌ ದಂಧೆ ನಡೆಸುವವರ ಬೆನ್ನುಹತ್ತಿದ್ದಾರೆ.

ADVERTISEMENT

ರಾಜಧಾನಿ ಬೆಂಗಳೂರಿನ ಪಶ್ಚಿಮ ವಿಭಾಗದಲ್ಲಿ ಹೆಚ್ಚು ಬೆಟ್ಟಿಂಗ್‌ ಪ್ರಕರಣಗಳು ಪತ್ತೆಯಾಗಿವೆ. ಬೆಟ್ಟಿಂಗ್ ಅಡ್ಡೆಗಳ ಮೇಲೆ ದಾಳಿ ನಡೆಸಿರುವ ಪೊಲೀಸರು, 18 ಆರೋಪಿಗಳನ್ನು ಬಂಧಿಸಿದ್ಧಾರೆ. ಅವರಿಂದ ₹ 4.68 ಲಕ್ಷ ವಶ ಪಡಿಸಿಕೊಂಡಿದ್ದಾರೆ.

‘ಬಸವೇಶ್ವರ ನಗರ, ಬ್ಯಾಟರಾಯನಪುರ, ಚಂದ್ರಾಲೇಔಟ್‌, ಸಿಟಿ ಮಾರುಕಟ್ಟೆ, ಗೋವಿಂದರಾಜ ನಗರ, ಕಾಮಾಕ್ಷಿಪಾಳ್ಯ, ಮಾಗಡಿ, ರಾಜರಾಜೇಶ್ವರಿ ನಗರ, ಉಪ್ಪಾರಪೇಟೆ, ವಿಜಯನಗರ ವ್ಯಾಪ್ತಿಯ ಅಡ್ಡೆಗಳಲ್ಲಿ ಬೆಟ್ಟಿಂಗ್‌ ನಡೆಸುತ್ತಿದ್ದ ಬುಕ್ಕಿಗಳನ್ನು ಬಂಧಿಸಲಾಗಿದೆ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ವಸತಿ ಗೃಹಗಳ ಮೇಲೆ ಪೊಲೀಸ್‌ ಕಣ್ಣು: ಪಂದ್ಯಗಳು ನಡೆಯುವ ಸಮಯದಲ್ಲಿ ಲಾಡ್ಜ್‌ಗಳಲ್ಲಿ ಬುಕ್ಕಿಗಳು ಉಳಿದುಕೊಂಡು ಬೆಟ್ಟಿಂಗ್ ನಡೆಸುತ್ತಾರೆ. ಇಂತಹ ಲಾಡ್ಜ್‌ಗಳ ಮೇಲೆ ಪೊಲೀಸರು ಕಣ್ಣಿಟ್ಟಿದ್ದು ದಿಢೀರ್ ದಾಳಿ ನಡೆಸುತ್ತಿದ್ದಾರೆ.

ಬೆಟ್ಟಿಂಗ್‌ ಕಟ್ಟುವ ಕ್ರಿಕೆಟ್‌ ಪ್ರೇಮಿಗಳನ್ನು ಆ್ಯಪ್‌, ವಾಟ್ಸ್‌ಆ್ಯಪ್‌, ಮೊಬೈಲ್‌ ಮೂಲಕ ಸಂಪರ್ಕಿಸಿ ಗೂಗಲ್‌ ಪೇ, ಫೋನ್‌ ಪೇ ಮೂಲಕ ಬುಕ್ಕಿಗಳು ಹಣ ಪಡೆಯುತ್ತಿದ್ದಾರೆ. ಈ ಹಣವು ಒಬ್ಬರಿಂದ ಮತ್ತೊಬ್ಬರಿಗೆ ಬದಲಾವಣೆ ಆಗುತ್ತಿದೆ. ಗಾಂಧಿನಗರ, ಶಿವಾಜಿನಗರ, ಉ‍ಪ್ಪಾರಪೇಟೆ, ಚಿಕ್ಕಪೇಟೆ ವ್ಯಾಪ್ತಿಯ ವಸತಿಗೃಹಗಳ ಮೇಲೆ ಪೊಲೀಸರು ದಾಳಿ ನಡೆಸುತ್ತಿದ್ದು, ದಂಧೆಕೋರರು ಸಿಕ್ಕಿಬಿದ್ದಿದ್ದಾರೆ. ಸಿಕ್ಕಿಬಿದ್ದವರಲ್ಲಿ ಯುವಕರೇ ಹೆಚ್ಚು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಆರ್ಥಿಕ ಸಂಕಷ್ಟ: ಮನೆಯಲ್ಲಿದ್ದ ಚಿನ್ನಾಭರಣ ಮಾರಾಟ ಮಾಡಿ, ಕ್ರಿಕೆಟ್‌ ಪ್ರೇಮಿಗಳು ಬೆಟ್ಟಿಂಗ್‌ ಆಡುತ್ತಿದ್ದಾರೆ. ಸ್ನೇಹಿತರಿಂದ ಸಾಲ ಪಡೆದು ಬೆಟ್ಟಿಂಗ್‌ಗೆ ಹಣ ವಿನಿಯೋಗಿಸಿದ್ದಾರೆ. ಇದರಿಂದ ಯುವಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವುದು ವಿಚಾರಣೆಯ ವೇಳೆ ಬೆಳಕಿಗೆ ಬಂದಿದೆ. ಬೆಟ್ಟಿಂಗ್‌ ಗೀಳಿನ ಯುವಕರ ಕುಟುಂಬಗಳೂ ಸಂಕಷ್ಟಕ್ಕೆ ಸಿಲುಕುತ್ತಿವೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

‘ಪಂದ್ಯದ ಗೆಲುವು, ಸೋಲಿನ ಮೇಲೆ ಮಾತ್ರವಲ್ಲದೇ ಪ್ರತಿ ಬಾಲಿನ ಮೇಲೆ ಬೆಟ್ಟಿಂಗ್‌ ಕಟ್ಟಲಾಗುತ್ತಿದೆ. ಅಟಗಾರನ ವೈಯಕ್ತಿಕ ಸ್ಕೋರ್‌, ವಿಕೆಟ್‌, ಸಿಕ್ಸರ್ ಹಾಗೂ ಬೌಂಡರಿಗಳ ಮೇಲೂ ಬೆಟ್ಟಿಂಗ್‌ ನಡೆಯುತ್ತಿದೆ. ಗೆದ್ದವರಿಗೆ ದುಪ್ಪಟ್ಟು ಹಣ ಸಿಗುತ್ತಿದೆ’ ಎಂದು ಮೂಲಗಳು ಹೇಳಿವೆ.

ಬಂಧಿತ ಆರೋಪಿಗಳು

ಸುರೇಶ್‌ (34), ಸಿ.ಆರ್‌.ರಾಜೇಶ್‌ (28), ಮಹಮ್ಮದ್‌ ಸಲ್ಲಾವುದ್ದೀನ್‌ (46), ಯೋಗೇಶ್ (28), ಅಮರನಾಥ್‌ (42), ಮಹೇಂದ್ರ (30), ಸುನಿಲ್ ಕುಮಾರ್‌ (30), ಮಂಜುನಾಥ್‌ (30), ರಂಜಿತ್‌ (27), ಎಸ್‌. ಹೇಮಂತ್‌ (40), ಮಾದಪ್ಪ (30) ವಿನೋದ್‌ 25), ವಸೀಂ ಅಕ್ರಂ (26) ಹಾಗೂ ಗಂಗಾಧರ್ ಬಂಧಿತರು.

****
ಕ್ರಿಕೆಟ್‌ ಬೆಟ್ಟಿಂಗ್ ನಡೆಸುವ ಅಡ್ಡೆಗಳ ಮೇಲೆ ವಿಶೇಷ ತಂಡಗಳಿಂದ ದಾಳಿ ಮುಂದುವರಿಸಲಾಗಿದೆ. ಬುಕ್ಕಿಗಳಿಂದ 17 ಮೊಬೈಲ್‌ ವಶಕ್ಕೆ ಪಡೆಯಲಾಗಿದೆ.

-ಲಕ್ಷ್ಮಣ ನಿಂಬರಗಿ, ಡಿಸಿಪಿ, ಪಶ್ಚಿಮ ವಿಭಾಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.