ADVERTISEMENT

T20 WC | ಹಾರ್ದಿಕ್‌ ಪಾಂಡ್ಯ ಭುಜಕ್ಕೆ ಗಾಯ: ಬಿಸಿಸಿಐನಿಂದ ಕಾದುನೋಡುವ ತಂತ್ರ

ಪಿಟಿಐ
Published 26 ಅಕ್ಟೋಬರ್ 2021, 11:45 IST
Last Updated 26 ಅಕ್ಟೋಬರ್ 2021, 11:45 IST
ಹಾರ್ದಿಕ್‌ ಪಾಂಡ್ಯ
ಹಾರ್ದಿಕ್‌ ಪಾಂಡ್ಯ   

ದುಬೈ: ‘ಟಿ–20 ವಿಶ್ವಕಪ್‌ನಲ್ಲಿ ಭಾನುವಾರ ಪಾಕಿಸ್ತಾನದ ವಿರುದ್ಧ ನಡೆದ ಪಂದ್ಯದಲ್ಲಿ ಟೀಮ್‌ ಇಂಡಿಯಾದ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಅವರ ಭುಜಕ್ಕೆ ಗಾಯವಾಗಿದ್ದು, ಸದ್ಯ ಅವರು ಚೇತರಿಸಿಕೊಳ್ಳುತ್ತಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

ಅಕ್ಟೋಬರ್‌ 31ರಂದು ನ್ಯೂಜಿಲೆಂಡ್‌ ವಿರುದ್ಧ ನಡೆಯಲಿರುವ ಎರಡನೇ ಪಂದ್ಯದಲ್ಲಿ ಹಾರ್ದಿಕ್‌ ಆಡುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ಐಪಿಎಲ್‌ ಸೇರಿದಂತೆ ಟಿ–20 ವಿಶ್ವಕಪ್‌ನ ಅಭ್ಯಾಸ ಪಂದ್ಯಗಳಲ್ಲಿ ಹಾರ್ದಿಕ್‌ ಪಾಂಡ್ಯ ಬೌಲಿಂಗ್ ಮಾಡಿರಲಿಲ್ಲ. ಅಲ್ಲದೆ ಪಾಕ್ ವಿರುದ್ಧದ ಪಂದ್ಯದಲ್ಲಿ ಕೇವಲ ಬ್ಯಾಟ್ಸ್‌ಮನ್ ಆಗಿ ಕಣಕ್ಕಿಳಿದಿದ್ದು, 8 ಎಸೆತಗಳಲ್ಲಿ 11 ರನ್‌ ಗಳಿಸಿದ್ದರು.

ADVERTISEMENT

‘ಹಾರ್ದಿಕ್ ಅವರ ವೈದ್ಯಕೀಯ ವರದಿಗಳು ಕೈಸೇರಿದ್ದು, ಅವರಿಗೆ ಗಂಭೀರ ಗಾಯವಾಗಿಲ್ಲ ಎಂಬುದು ತಿಳಿದು ಬಂದಿದೆ. ಎರಡನೇ ಪಂದ್ಯಕ್ಕೆ 6 ದಿನ ಬಾಕಿ ಇರುವುದರಿಂದ ಅವರಿಗೆ ಚೇತರಿಸಿಕೊಳ್ಳಲು ಸಾಕಷ್ಟು ಸಮಯ ನೀಡಲಾಗುತ್ತದೆ’ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ‘ಪಿಟಿಐ’ಗೆ ತಿಳಿಸಿದ್ದಾರೆ.

‘ನಾಕೌಟ್ ಹಂತದಲ್ಲಿ ಬೌಲಿಂಗ್ ಮಾಡುವುದಾಗಿ ಪಾಂಡ್ಯ ಇತ್ತೀಚೆಗೆ ಹೇಳಿದ್ದರು. ಆದರೆ, ಮೊದಲ ಪಂದ್ಯದಲ್ಲಿ ಅವರು ಬೌಲಿಂಗ್‌ ಮಾಡಿರಲಿಲ್ಲ. ನ್ಯೂಜಿಲೆಂಡ್‌ ವಿರುದ್ಧ ಬೌಲಿಂಗ್ ಮಾಡಲಿದ್ದಾರಾ ಎಂಬುದರ ಬಗ್ಗೆ ಬಿಸಿಸಿಐ ಕಾದುನೋಡುವ ತಂತ್ರ ಅನುಸರಿಸುತ್ತಿದೆ’ ಎನ್ನಲಾಗಿದೆ.

ಸ್ಕಾಟ್ಲೆಂಡ್, ನಮೀಬಿಯಾ ಮತ್ತು ಅಫ್ಗಾನಿಸ್ತಾನ ವಿರುದ್ಧದ ಪಂದ್ಯಗಳಲ್ಲಿ ಭಾರತ, ಪಾಕಿಸ್ತಾನ ಮತ್ತು ನ್ಯೂಜಿಲೆಂಡ್‌ ತಂಡಗಳು ಸುಲಭ ಜಯಗಳಿಸುವ ನಿರೀಕ್ಷೆಯಲ್ಲಿವೆ. ಒಂದು ವೇಳೆ ನ್ಯೂಜಿಲೆಂಡ್‌ ವಿರುದ್ಧ ಭಾರತ ಸೋತರೆ ಗುಂಪಿನಲ್ಲಿ ಅಗ್ರ ಎರಡನೇ ಸ್ಥಾನ ಪಡೆಯುವ ಸಾಧ್ಯತೆ ಕಡಿಮೆ ಎಂದು ವಿಶ್ಲೇಷಿಸಲಾಗಿದೆ.

ಸದ್ಯದ ಸನ್ನಿವೇಶದಲ್ಲಿ ಪಾಂಡ್ಯ ಅವರ ಫಿಟ್ನೆಸ್ ಸಮಸ್ಯೆ ಟೀಮ್ ಇಂಡಿಯಾಗೆ ನುಂಗಲಾರದ ತುತ್ತಾಗಿದೆ.

ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಭಾನುವಾರ ದುಬೈಯಲ್ಲಿ ಸೂಪರ್-12 ಹಂತದ ಎರಡನೇ ಗುಂಪಿನ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಭಾರತ 10 ವಿಕೆಟ್ ಅಂತರದ ಹೀನಾಯ ಸೋಲಿಗೆ ಶರಣಾಗಿತ್ತು.

ಇದರೊಂದಿಗೆ ಐಸಿಸಿ ವಿಶ್ವಕಪ್‌ ಇತಿಹಾಸದಲ್ಲಿ (ಏಕದಿನ ಹಾಗೂ ಟ್ವೆಂಟಿ-20 ಸೇರಿದಂತೆ) ಭಾರತ ಇದೇ ಮೊದಲ ಬಾರಿಗೆ ಪಾಕಿಸ್ತಾನ ವಿರುದ್ಧ ಸೋಲಿನ ಮುಖಭಂಗಕ್ಕೊಳಗಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.