
ಭಾರತ ತಂಡದ ವೇಗದ ಬೌಲರ್‌ಗಳಾದ ಹಾರ್ದಿಕ್ ಪಾಂಡ್ಯ, ಹರ್ಷಿತ್ ರಾಣಾ ಮತ್ತು ಅರ್ಷದೀಪ್ ಸಿಂಗ್ ಸಂಭ್ರಮ –
ಪಿಟಿಐ ಚಿತ್ರ
ಮುಂಬೈ: ಟಿ20 ವಿಶ್ವಕಪ್ ಆರಂಭಕ್ಕೆ ಇನ್ನೊಂದೇ ದಿನ ಬಾಕಿ ಉಳಿದಿದೆ. ಭಾರತ ಸೇರಿದಂತೆ ಎಲ್ಲಾ ತಂಡಗಳು ಪ್ರತಿಷ್ಠಿತ ಟೂರ್ನಿಗಾಗಿ ಕಠಿಣ ಅಭ್ಯಾಸ ನಡೆಸುತ್ತಿವೆ. ಈ ನಡುವೆ ಭಾರತ ತಂಡದ ತಾರಾ ವೇಗಿ ಹರ್ಷಿತ್ ರಾಣಾ ಗಾಯಗೊಂಡಿದ್ದು, ಟೂರ್ನಿಯಿಂದಲೇ ಹೊರಗುಳಿಯಲಿದ್ದಾರೆ ಎಂದು ವರದಿಯಾಗಿದೆ.
ಬುಧವಾರ ಮುಕ್ತಾಯಗೊಂಡ ದಕ್ಷಿಣ ಆಫ್ರಿಕಾ ವಿರುದ್ಧದ ಅಭ್ಯಾಸ ಪಂದ್ಯದ ಸಮಯದಲ್ಲಿ ಹರ್ಷಿತ್ ರಾಣಾ ಗಾಯಗೊಂಡಿದ್ದರು.
ಹರ್ಷಿತ್, ದಕ್ಷಿಣ ಆಫ್ರಿಕಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಕೇವಲ 1 ಓವರ್ ಬೌಲಿಂಗ್ ಮಾಡಿ 16 ರನ್ ಬಿಟ್ಟುಕೊಟ್ಟಿದ್ದರು. ಅದೇ ವೇಳೆ ಅವರು ಮೊಣಕಾಲಿನ ಗಾಯಕ್ಕೆ ಒಳಗಾಗಿ, ಕುಂಟುತ್ತಾ ಮೈದಾನದಿಂದ ಹೊರನಡೆದಿದ್ದರು.
ವಿಶ್ವಕಪ್‌ಗೂ ಮುನ್ನ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ನಾಯಕ ಸೂರ್ಯಕುಮಾರ್ ಯಾದವ್, ಹರ್ಷಿತ್ ರಾಣಾ ಗಾಯದ ಕುರಿತು ಮಾತನಾಡಿದ್ದಾರೆ. ‘ಹರ್ಷಿತ್ ಸಂಪೂರ್ಣ ಫಿಟ್ ಆಗಿದ್ದಾರೆ ಎಂದು ಅನಿಸುತ್ತಿಲ್ಲ’ ಎಂದರು.
‘ಹರ್ಷಿತ್ ರಾಣಾ ಅವರನ್ನು ಇನ್ನೂ ತಂಡದಿಂದ ಹೊರಗಿಡಲಾಗಿಲ್ಲ. ಅವರು ವೈದ್ಯರ ಮೇಲ್ವಿಚಾರಣೆಯಲ್ಲಿದ್ದಾರೆ. ಆದರೆ, ಹರ್ಷಿತ್ ಸಂಪೂರ್ಣವಾಗಿ ಫಿಟ್ ಆಗಿದ್ದಾರೆ ಎಂದು ಅನಿಸುತ್ತಿಲ್ಲ’ ಎಂಬುದನ್ನು ಒಪ್ಪಿಕೊಂಡರು.
ಸೂರ್ಯಕುಮಾರ್ ಯಾದವ್ ಅವರು ಹರ್ಷಿತ್ ರಾಣಾ ಪಂದ್ಯಾವಳಿಯಿಂದ ಹೊರಗುಳಿಯುವ ಕುರಿತು ನೇರವಾಗಿ ತಿಳಿಸಿಲ್ಲ. ಆದರೆ, ಅವರು ಟಿ20 ವಿಶ್ವಕಪ್ ಪಂದ್ಯಾವಳಿಯ ಯಾವುದೇ ಹಂತದಲ್ಲೂ ಚೇತರಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.