ADVERTISEMENT

T20 World Cup: ಸೂರ್ಯ ಪಡೆಗೆ ಸುಲಭ ಜಯದ ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2026, 0:30 IST
Last Updated 12 ಫೆಬ್ರುವರಿ 2026, 0:30 IST
<div class="paragraphs"><p>ಭಾರತ ತಂಡದ ಸಂಜು ಸ್ಯಾಮ್ಸನ್ ಮತ್ತು ರಿಂಕು ಸಿಂಗ್</p></div>

ಭಾರತ ತಂಡದ ಸಂಜು ಸ್ಯಾಮ್ಸನ್ ಮತ್ತು ರಿಂಕು ಸಿಂಗ್

   

ಪಿಟಿಐ ಚಿತ್ರ

ನವದೆಹಲಿ: ಭಾರತ ತಂಡವು ಗುರುವಾರದ ಪಂದ್ಯದಲ್ಲಿ ನಮಿಬಿಯಾ ವಿರುದ್ಧ ಆಡಲಿದೆ. ಆದರೆ ಸೂರ್ಯ ಕುಮಾರ್ ಯಾದವ್ ಬಳಗಕ್ಕೆ ನಮಿಬಿಯಾ ತಂಡದ ಬಗ್ಗೆ ಆತಂಕವಿಲ್ಲ. ಆದರೆ ಅಭಿಷೇಕ್ ಶರ್ಮಾ ಅವರ ಹೊಟ್ಟೆನೋವು ಇಡೀ ತಂಡದಲ್ಲಿ ಆತಂಕ ತರಿಸಿದೆ. 

ADVERTISEMENT

ಸ್ಫೋಟಕ ಶೈಲಿಯ ಬ್ಯಾಟರ್ ಅಭಿಷೇಕ್ ಅವರು ಎರಡು ದಿನ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆದ ನಂತರ ಬುಧವಾರ ತಂಡಕ್ಕೆ ಮರಳಿದ್ದಾರೆ. ಅವರು ನಮಿಬಿಯಾ ಎದುರು ಕಣಕ್ಕಿಳಿಯುವ ಕುರಿತು ಪಂದ್ಯದ ಆರಂಭಕ್ಕೂ ಮುನ್ನ ನಿರ್ಧರಿಸಲಾಗುವುದು ಎಂದು ಭಾರತ ತಂಡದ ಬ್ಯಾಟರ್ ತಿಲಕ್ ವರ್ಮಾ ಸುದ್ದಿಗಾರರಿಗೆ ತಿಳಿಸಿದ್ದಾರೆ. 

ಟಿ20 ವಿಶ್ವಕಪ್ ಟೂರ್ನಿಯ ಮೊದಲ ಪಂದ್ಯದಲ್ಲಿ ಅಮೆರಿಕ ಎದುರು ಅಗ್ರ ಕ್ರಮಾಂಕದ ಬ್ಯಾಟರ್‌ಗಳು ಎಡವಿದ್ದರು. ಸೂರ್ಯ ಏಕಾಂಗಿ ಹೋರಾಟದಿಂದಾಗಿ ಗೆಲುವು ಸಾಧ್ಯವಾಗಿತ್ತು.  ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಅಭಿಷೇಕ್ ಆಡದಿದ್ದರೆ ಸಂಜು ಸ್ಯಾಮ್ಸನ್ ಸ್ಥಾನ ಪಡೆಯುವುದು ಖಚಿತ.  ಆದರೆ ಇದೇ 15ರಂದು ಕೊಲಂಬೊದಲ್ಲಿ ನಡೆಯಲಿರುವ ಪಾಕಿಸ್ತಾನ ಎದುರಿನ ಪಂದ್ಯಕ್ಕೆ ಶರ್ಮಾ ಫಿಟ್ ಆಗಿ ಬರುವ ನಿರೀಕ್ಷೆ ಇದೆ. 

ಸಾಮರ್ಥ್ಯ ಮತ್ತು  ಅನುಭವದಲ್ಲಿ ನಮಿಬಿಯಾ ಮತ್ತು ಭಾರತ ತಂಡಗಳಿಗೆ ಅಜಗಜಾಂತರವಿದೆ.  ಹಾಲಿ ಚಾಂಪಿಯನ್ ಕೂಡ ಆಗಿರುವ ಆತಿಥೇಯ ಭಾರತ ತಂಡವನ್ನು ಎದುರಿ ಸುವುದು ಜೆರಾರ್ಡ್ ಎರಸ್‌ಮಸ್ ಬಳಗಕ್ಕೆ ಸುಲಭವಲ್ಲ. ಅದರಲ್ಲೂ ಭಾರತದ  ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಕಟ್ಟಿಹಾಕುವುದು ಬೌಲರ್‌ಗಳಿಗೆ ಒಂದು ಕಠಿಣ ಪರೀಕ್ಷೆಯೇ ಸರಿ.  ಅಲ್ಲದೇ ನಮಿಬಿಯಾ ಬ್ಯಾಟರ್‌ಗಳು ವಿಶ್ವಶ್ರೇಷ್ಠ ಬೌಲರ್‌ ಜಸ್‌ಪ್ರೀತ್ ಬೂಮ್ರಾ, ಅರ್ಷದೀಪ್ ಸಿಂಗ್ ಮತ್ತು ಸ್ಪಿನ್ನರ್ ವರುಣ್ ಚಕ್ರವರ್ತಿ ಅವರನ್ನು ಎದುರಿ ಸುವುದು ಕೂಡ ಸವಾಲಾಗಬಹುದು. 

ನಮಿಬಿಯಾದ ಆಲ್‌ರೌಂಡರ್ ಜೆಜೆ ಸ್ಮಿತ್ ಅವರು 140ರ ಸ್ಟ್ರೈಕ್‌ರೇಟ್ ಹೊಂದಿದ್ದಾರೆ. ಉಳಿದ ಐವರು ಅಗ್ರಕ್ರಮಾಂಕದ ಬ್ಯಾಟರ್‌ಗಳು ಇದಕ್ಕಿಂತ ಕಡಿಮೆ ಸ್ಟ್ರೈಕ್‌ರೇಟ್ ಹೊಂದಿದ್ದಾರೆ. 

ಪ್ರಸಕ್ತ ಟೂರ್ನಿಯಲ್ಲಿ ಉಭಯ ತಂಡಗಳೂ ತಲಾ ಒಂದು ಪಂದ್ಯ ಆಡಿವೆ. ಭಾರತ ತಂಡವು ಅಮೆರಿಕ ವಿರುದ್ಧ ಜಯಿಸಿದೆ. ಆದರೆ ನಮಿಬಿಯಾ ನೆದರ್ಲೆಂಡ್ಸ್‌ ವಿರುದ್ಧ ಪರಾಭವಗೊಂಡಿತ್ತು.  ದೆಹಲಿಯಲ್ಲಿ ರಾತ್ರಿಯ ಹೊತ್ತು ಇಬ್ಬನಿ ಸುರಿಯುವ ನಿರೀಕ್ಷೆ ಇದೆ. ಆದ್ದರಿಂದ ಟಾಸ್ ಗೆದ್ದವರು ಮೊದಲು ಬೌಲಿಂಗ್ ಮಾಡುವ ಸಾಧ್ಯತೆಯೇ ಹೆಚ್ಚು.

ತಂಡಗಳು

ಭಾರತ: ಸೂರ್ಯಕುಮಾರ್ ಯಾದವ್ (ನಾಯಕ), ಅಭಿಷೇಕ್ ಶರ್ಮಾ , ಸಂಜು ಸ್ಯಾಮ್ಸನ್ (ವಿಕೆಟ್‌ಕೀಪರ್), ಇಶಾನ್ ಕಿಶನ್ (ವಿಕೆಟ್‌ಕೀಪರ್), ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಜಸ್‌ಪ್ರೀತ್ ಬೂಮ್ರಾ, ಅರ್ಷದೀಪ್ ಸಿಂಗ್, ಮೊಹಮ್ಮದ್ ಸಿರಾಜ್, ವಾಷಿಂಗ್ಟನ್ ಸುಂದರ್, ವರುಣ್ ಚಕ್ರವರ್ತಿ, ರಿಂಕು ಸಿಂಗ್. 

ನಮಿಬಿಯಾ: ಜೆರಾರ್ಡ್ ಎರಸ್‌ಮಸ್ (ನಾಯಕ), ಜ್ಯಾನ್ ಬಾಲ್ಟ್, ಝೇನ್ ಗ್ರೀನ್ (ವಿಕೆಟ್‌ಕೀಪರ್), ಮಲಾನ್ ಕ್ರುಗರ್, ಡೈಲನ್ ಲೀಚೆರ, ಲಾರೆನ್ ಸ್ಟೀನ್‌ಕ್ಯಾಂಪ್, ಜಾನ್ ಫ್ರೈಲಿಂಕ್, ಜಾನ್ ನಿಕೊಲ್, ಲಾಫ್ಟಿ ಈಟನ್, ವಿಲಿಯಮ್ ಮೈಬರ್ಗ್, ಜೆ.ಜೆ. ಸ್ಮಿತ್, ಜಾಕ್ ಬ್ರಸೆಲ್, ಮ್ಯಾಕ್ಸ್ ಹಿಂಗೊ, ಬೆನಾಡ್ ಶೋಲ್ಜ್, ಬೆನ್ ಶಿಕಾಂಗೊ, ರುಬೆನ್ ಟ್ರಂಪಲ್‌ಮ್ಯಾನ್.

‍ಪಂದ್ಯ ಆರಂಭ: ರಾತ್ರಿ 7

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.