ADVERTISEMENT

WC: ನ್ಯೂಜಿಲೆಂಡ್‌ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಇಶಾನ್‌ಗೆ ಸಿಗುವುದೇ ಸ್ಥಾನ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 31 ಅಕ್ಟೋಬರ್ 2021, 8:11 IST
Last Updated 31 ಅಕ್ಟೋಬರ್ 2021, 8:11 IST
ಇಶಾನ್‌ ಕಿಶನ್‌
ಇಶಾನ್‌ ಕಿಶನ್‌   

ನವದೆಹಲಿ: ಟಿ–20 ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್‌ ವಿರುದ್ಧ ಇಂದು (ಭಾನುವಾರ) ನಡೆಯಲಿರುವ ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ಆಡುವ ಹನ್ನೊಂದರ ಬಳಗದಲ್ಲಿ ಇಶಾನ್‌ ಕಿಶನ್‌ಗೆ ಸ್ಥಾನ ಸಿಗುವ ಸಾಧ್ಯತೆ ಇದೆ.

ಇಂದಿನ ಪಂದ್ಯ ಎರಡೂ ತಂಡಗಳಿಗೆ ಹೆಚ್ಚು ಮಹತ್ವದ್ದಾಗಿದೆ. ವಿಶ್ವಕಪ್ ಟೂರ್ನಿಯ ಆತಿಥೇಯ ತಂಡವಾಗಿರುವ ಭಾರತಕ್ಕೆ ಸೆಮಿಫೈನಲ್‌ ಪ್ರವೇಶದ ಕನಸು ಜೀವಂತವಾಗಿ ಉಳಿಯಬೇಕಾದರೆ ನ್ಯೂಜಿಲೆಂಡ್ ಎದುರು ಜಯ ಸಾಧಿಸಲೇಬೇಕಿದೆ. ಇತ್ತ ಕಿವೀಸ್ ಬಳಗಕ್ಕೂ ಇದು ನಿರ್ಣಾಯಕ ಪಂದ್ಯವೇ ಆಗಿದೆ. ಸೋತವರಿಗೆ ನಾಲ್ಕರ ಘಟ್ಟದ ಬಾಗಿಲು ಮುಚ್ಚುವ ಸಾಧ್ಯತೆ ಹೆಚ್ಚು.

ಅ.24ರಂದು ನಡೆದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅರ್ಧಶತಕ ಹೊಡೆದಿದ್ದರು. ಆದರೆ, ಆರಂಭಿಕ ಜೋಡಿ ರೋಹಿತ್ ಶರ್ಮಾ ಮತ್ತು ಕೆ.ಎಲ್‌. ರಾಹುಲ್ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದರು. ಆದ್ದರಿಂದ ಇಶಾನ್‌ ಕಿಶನ್‌ಗೆ ಸ್ಥಾನ ಸಿಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ADVERTISEMENT

ಫಾರ್ಮ್‌ಗೆ ಮರಳಲು ಪರದಾಡುತ್ತಿರುವ ಹಾರ್ದಿಕ್ ಪಾಂಡ್ಯ ಅವರನ್ನು ಕೈಬಿಟ್ಟು ಶಾರ್ದೂಲ್ ಠಾಕೂರ್ ಅಥವಾ ಅನುಭವಿ ಆರ್. ಅಶ್ವಿನ್ ಅವರನ್ನು ಕಣಕ್ಕಿಳಿಸಬಹುದು. ಆರನೇ ಬೌಲರ್‌ ಅವಶ್ಯಕತೆಯೂ ಇರುವುದರಿಂದ ಈ ಸಾಧ್ಯತೆ ಹೆಚ್ಚಿದೆ. ಪಾಕ್ ಎದುರು ಆಡಿದ ಬೌಲರ್‌ಗಳು ಒಂದೇ ಒಂದು ವಿಕೆಟ್ ಕೂಡ ಗಳಿಸಿರಲಿಲ್ಲ.

ನ್ಯೂಜಿಲೆಂಡ್‌ ತಂಡವೂ ಒತ್ತಡದಲ್ಲಿದೆ. ಪಾಕ್ ಎದುರು ಬ್ಯಾಟಿಂಗ್‌ ಪಡೆಯು ತಡಬಡಾಯಿಸಿತ್ತು. ಆದ್ದರಿಂದ ಭಾರತದ ಬೌಲಿಂಗ್ ಎದುರಿಸಲು ಇನ್ನಷ್ಟು ಸಿದ್ಧತೆ ಮಾಡಿಕೊಂಡು ಕಣಕ್ಕಿಳಿಯುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.