ADVERTISEMENT

T20 WC| ಭಾರತ ವಿರುದ್ಧವೇ ಮಿಂಚಿನ ಪ್ರದರ್ಶನ ನೀಡಿದ ಕನ್ನಡಿಗ: ಏನಿವರ ಹಿನ್ನೆಲೆ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಫೆಬ್ರುವರಿ 2026, 2:40 IST
Last Updated 9 ಫೆಬ್ರುವರಿ 2026, 2:40 IST
<div class="paragraphs"><p>ಅಮೆರಿಕ ಬ್ಯಾಟರ್ ಮಿಲಿಂದ–ಸಂಜಯ್ ಕೃಷ್ಣಮೂರ್ತಿ</p></div>

ಅಮೆರಿಕ ಬ್ಯಾಟರ್ ಮಿಲಿಂದ–ಸಂಜಯ್ ಕೃಷ್ಣಮೂರ್ತಿ

   

ಚಿತ್ರ: @Tejashyyyyy

ಭಾರತ ಹಾಗೂ ಶ್ರೀಲಂಕಾದಲ್ಲಿ ಟಿ20 ವಿಶ್ವಕಪ್ ಆರಂಭವಾಗಿದೆ. ದುರ್ಬಲ ತಂಡಗಳೆಂದು ಭಾವಿಸಿದ್ದವರು ಬಲಿಷ್ಠ ತಂಡಗಳಿಗೆ ಉತ್ತಮ ಪೈಪೋಟಿ ನೀಡುತ್ತಿವೆ. ವಿಶೇಷವಾಗಿ ಎ ಗುಂಪಿನ ಮೊದಲ ಪಂದ್ಯದಲ್ಲಿ ಭಾರತ ಹಾಗೂ ಅಮೆರಿಕ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಕ್ರಿಕೆಟ್ ಶಿಶು ಅಮೆರಿಕ ಬಲಿಷ್ಠ ಭಾರತ ತಂಡದ ವಿರುದ್ಧ ದಿಟ್ಟ ಪ್ರದರ್ಶನ ವಿರೋಚಿತ ಸೋಲು ಅನುಭವಿಸಿತು.

ADVERTISEMENT

ಆರಂಭದಲ್ಲಿ ಮೇಲುಗೈ ಸಾಧಿಸಿದ ಅಮೆರಿಕ ತಂಡ, 77 ರನ್ ಆಗುವಷ್ಟರಲ್ಲಿ ಭಾರತದ ಪ್ರಮುಖ 6 ಬ್ಯಾಟರ್‌ಗಳನ್ನು ಪೆವಿಲಿಯನ್‌ಗೆ ಕಳಿಸುವಲ್ಲಿ ಯಶಸ್ವಿಯಾಗಿತ್ತು. ಆದರೆ, ನಾಯಕ ಸೂರ್ಯಕುಮಾರ್ ಯಾದವ್ ಅವರ ಆಕರ್ಷಕ ಅರ್ಧಶತಕ (ಅಜೇಯ 84)ದ ನೆರವಿನಿಂದ ಭಾರತ ತಂಡ ಸ್ಪರ್ಧಾತ್ಮಕ ಗುರಿ ಕಲೆಹಾಕಿ, ಪಂದ್ಯವನ್ನು 29 ರನ್‌ಗಳಿಂದ ಗೆಲುವು ಸಾಧಿಸಿತು.

ಸಂಜಯ್ ಕೃಷ್ಣಮೂರ್ತಿ ಅಮೋಘ ಪ್ರದರ್ಶನ

ಪಂದ್ಯದ ಎರಡನೇ ಓವರ್‌ನಲ್ಲಿ ಅಲಿ ಖಾನ್ ಎಸೆದ ಚೆಂಡನ್ನು ಭಾರತದ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ ಬಲವಾಗಿ ಬಾರಿಸಿದರು. ಬೌಂಡರಿ ಲೈನ್‌ನಲ್ಲಿ ಕ್ಷೇತ್ರ ರಕ್ಷಣೆ ಮಾಡುತ್ತಿದ್ದ ಸಂಜಯ್ ಕೃಷ್ಣಮೂರ್ತಿ ಅದ್ಭುತವಾಗಿ ಕ್ಯಾಚ್ ಹಿಡಿದರು. ಆ ಮೂಲಕ ಅಭಿಷೇಕ್ ಶೂನ್ಯಕ್ಕೆ ನಿರ್ಗಮಿಸಬೇಕಾಯಿತು.

ಉತ್ತಮ ಕ್ಷೇತ್ರ ರಕ್ಷಣೆಯ ಮೂಲಕ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದ್ದ ಅವರು, ಬ್ಯಾಟಿಂಗ್‌ನಲ್ಲೂ ಸಂಕಷ್ಟದಲ್ಲಿದ್ದ ಅಮೆರಿಕ ತಂಡಕ್ಕೆ ಆಸರೆಯಾದರು. 13 ರನ್‌ಗಳಿಗೆ ಪ್ರಮುಖ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ನೆರವಾದ ಅವರು 31 ಎಸೆತಗಳಲ್ಲಿ 1 ಬೌಂಡರಿ, 2 ಸಿಕ್ಸರ್ ಸಹಿತ 37 ರನ್ ಕಲೆಹಾಕಿದರು. ಆ ಮೂಲಕ ಅಮೆರಿಕದ ಸೋಲಿನ ಅಂತರವನ್ನು ತಗ್ಗಿಸಿದರು.

ಯಾರು ಈ ಸಂಜಯ್ ಕೃಷ್ಣಮೂರ್ತಿ?

ಸಂಜಯ್ ಕೃಷ್ಣಮೂರ್ತಿ ಅವರ ತಂದೆ ಕರ್ನಾಟಕ ಮೂಲದವರಾಗಿದ್ದು, ಸಂಜಯ್ ಅಮೆರಿಕದಲ್ಲಿ ಜನಿಸಿದ್ದಾರೆ. ಆದರೂ, ಅವರು ತಮ್ಮ ಬಾಲ್ಯದ ಹೆಚ್ಚಿನ ಸಮಯವನ್ನು ಬೆಂಗಳೂರಿನಲ್ಲಿ ಕಳೆದಿದ್ದಾರೆ. ಇಲ್ಲಿಯೇ ತಮ್ಮ ಶಾಲಾ ಶಿಕ್ಷಣವನ್ನು ಮುಗಿಸಿ, ಕ್ರಿಕೆಟ್ ತರಬೇತಿಯನ್ನೂ ಪಡೆದಿದ್ದಾರೆ.

ಸ್ಪಿನ್ ಬೌಲರ್ ಹಾಗೂ ಬಲಗೈ ಬ್ಯಾಟರ್ ಆಗಿರುವ ಸಂಜಯ್ ಕೃಷ್ಣಮೂರ್ತಿ, ಕರ್ನಾಟಕದ ಪರ 16 ವರ್ಷದೊಳಗಿನವರ ತಂಡದಲ್ಲಿ ಆಡಿದ್ದಾರೆ. ಸದ್ಯ, ಕರ್ನಾಟಕದ ಪರ ಮಿಂಚುತ್ತಿರುವ ಸ್ಮರಣ್ ರವಿಚಂದ್ರನ್ ಅವರ ಜೊತೆ ಆಡಿ ಬೆಳೆದಿದ್ದಾರೆ. ಇದಾದ ಬಳಿಕ ಅಮೆರಿಕಗೆ ಮರಳಿದ ಸಂಜಯ್, ಭಾರತದ ವಿರುದ್ಧ ಕಣಕ್ಕಿಳಿಯುವ ಮೂಲಕ ಎಲ್ಲರ ಗಮನಸೆಳೆದಿದ್ದಾರೆ.

ಸಂಜಯ್ ಕೃಷ್ಣಮೂರ್ತಿ

ಅಗ್ರ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಅವರು ಪವರ್ ಹಿಟ್ಟಿಂಗ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಮಾತ್ರವಲ್ಲ, ಎಡಗೈ ಸ್ಪಿನ್‌ ಕೂಡ ಮಾಡುವ ಸಾಮರ್ಥ್ಯ ಹೊಂದಿದ್ದಾರೆ.

ಕೃಷ್ಣಮೂರ್ತಿ ಒಸಿಐ ಕಾರ್ಡ್ ಹೊಂದಿರುವವರಾಗಿದ್ದು, ಕರ್ನಾಟಕವು ಒಸಿಐ ಕಾರ್ಡ್ ಹೊಂದಿರುವವರು ರಾಜ್ಯದ ಪರ ಆಡುವಂತಿಲ್ಲ ಎಂಬ ನಿಯಮ ಜಾರಿಗೆ ತಂದಿತು. ಇದರರ್ಥ ಅವರು ಭಾರತಕ್ಕಾಗಿ ಆಡಲು ತಮ್ಮ ಅಮೆರಿಕದ ಪೌರತ್ವವನ್ನು ಸಂಪೂರ್ಣವಾಗಿ ತ್ಯಜಿಸಬೇಕಾಯಿತು. ಇದು ದೀರ್ಘ ಪ್ರಕ್ರಿಯೆ ಎಂದು ಅರಿತ ಅವರು ಅಮೆರಿಕದಲ್ಲಿ ತಮ್ಮ ಕ್ರಿಕೆಟ್ ವೃತ್ತಿ ಜೀವ ಆರಂಭಿಸಲು ಚಿಂತನೆ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.