
ಕೋಲ್ಕತ್ತ: ಹಾಲಿ ರನ್ನರ್ಸ್ ಅಪ್ ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್ ತಂಡಗಳು ಬುಧವಾರ ಈಡನ್ ಗಾರ್ಡನ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿಯ ಮೊದಲ ಸೆಮಿಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ.
ದಕ್ಷಿಣ ಆಫ್ರಿಕಾ ತಂಡದ ನಾಯಕ, ಸ್ಫೋಟಕ ಶೈಲಿಯ ಬ್ಯಾಟರ್ ಏಡನ್ ಮರ್ಕರಂ ಮತ್ತು ಕಿವೀಸ್ ತಂಡದ ನಾಯಕ, ಸ್ಪಿನ್ನರ್ ಮಿಚೆಲ್ ಸ್ಯಾಂಟನರ್ ಅವರ ನಡುವಿನ ಹಣಾಹಣಿಯೆಂದೇ ಈ ಪಂದ್ಯ ಬಿಂಬಿತವಾಗಿದೆ.
ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್ ತಂಡಗಳ ನಡುವಿನ ಪೈಪೋಟಿಯು 2015ರ ಏಕದಿನ ವಿಶ್ವಕಪ್ ಸೆಮಿಫೈನಲ್ ನಿಂದಲೂ ತಾರಕಕ್ಕೇರಿದೆ. ಆ ರೋಚಕ ಪಂದ್ಯದಲ್ಲಿ ‘ಬ್ಲ್ಯಾಕ್ ಕ್ಯಾಪ್ಸ್’ ಬಳಗವು ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸಿತ್ತು. ಅದರಿಂದಾಗಿ ವೇಗಿ ಡೇಲ್ ಸ್ಟೇಯ್ನ್ ಮತ್ತು ಬ್ಯಾಟರ್ ಎಬಿ ಡಿವಿಲಿಯರ್ಸ್ ಅವರು ಹತಾಶರಾಗಿದ್ದರು.
ಈಗ ಕೋಚ್ ಶುಕ್ರಿ ಕೊನ್ರಾಡ್ ಅವರ ಮಾರ್ಗದರ್ಶನದಲ್ಲಿ ತಂಡವು ಉತ್ತಮವಾಗಿ ಬೆಳೆದಿದೆ. ಹೋದ ವರ್ಷ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ (ಡಬ್ಲ್ಯುಟಿಸಿ) ಗೆದ್ದಿತ್ತು. ಆದರೆ ಶ್ವೇತ ಚೆಂಡಿನ ಕ್ರಿಕೆಟ್‌ನಲ್ಲಿ ಐಸಿಸಿ ಟ್ರೋಫಿಗಳನ್ನು ಗೆಲ್ಲುವಲ್ಲಿ ಇನ್ನೂ ಯಶಸ್ವಿಯಾಗಿಲ್ಲ. ಅದರಿಂದಾಗಿ ಸೀಮಿತ ಓವರ್‌ಗಳಲ್ಲಿ ಅವರಿಗೆ ಇನ್ನೂ ‘ಚೋಕರ್ಸ್’ ಪಟ್ಟ ಇದೆ.
ಉಭಯ ತಂಡಗಳ ನಾಯಕರು ಪ್ರತಿಭಾನ್ವಿತರು ಅಲ್ಲದೇ ತಂತ್ರಗಾರಿಕೆಯಲ್ಲಿ ನಿಪುಣರೂ ಆಗಿದ್ದಾರೆ. ಮರ್ಕರಂ ಅವರು 175ರ ಸ್ಟ್ರೈಕ್‌ರೇಟ್‌ನಲ್ಲಿ 268 ರನ್ ಸೇರಿಸಿದ್ದಾರೆ. ಅದರಿಂದಾಗಿ ಬೌಲರ್‌ಗಳಿಗೆ ಕಠಿಣ ಸವಾಲೊಡ್ಡಬಲ್ಲ ಬ್ಯಾಟರ್ ಆವರಾಗಿದ್ದಾರೆ.
ಸ್ಯಾಂಟನರ್ ಅವರು 6.35ರ ಎಕಾನಮಿಯಲ್ಲಿ ಬೌಲಿಂಗ್ ಮಾಡುತ್ತಿದ್ದಾರೆ. ಅದರಲ್ಲೂ ಪವರ್‌ಪ್ಲೇನಲ್ಲಿ ಬ್ಯಾಟರ್‌ಗಳನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ದಕ್ಷಿಣ ಆಫ್ರಿಕಾ ತಂಡದಲ್ಲಿ ಮರ್ಕರಂ ಅಷ್ಟೇ ಅಲ್ಲ; ಕ್ವಿಂಟನ್ ಡಿ ಕಾಕ್, ಡೆವಾಲ್ಡ್ ಬ್ರೆವಿಸ್, ರಿಯಾನ್ ರಿಕೆಲ್ಟನ್, ಟ್ರಿಸ್ಟನ್ ಸ್ಟಬ್ಸ್, ಡೇವಿಡ್ ಮಿಲ್ಲರ್ ಮತ್ತು ಮಾರ್ಕೊ ಯಾನ್ಸೆನ್ ಅವರು ಬೀಸಾಟಕ್ಕೆ ಹೆಸರಾದವರು. ಬೌಲರ್‌ಗಳ ನಿದ್ದೆಗೆಡಿಸಬಲ್ಲ ಬಲಾಢ್ಯರು.
ಕಿವೀಸ್ ಬಳಗದಲ್ಲಿ ಸ್ಯಾಂಟನರ್ ಅವರಿಗೆ ರಚಿನ್ ರವೀಂದ್ರ (9 ವಿಕೆಟ್), ಆಲ್‌ರೌಂಡರ್ ಗ್ಲೆನ್ ಫಿಲಿಪ್ಸ್, ಕೋಲಿ ಮೆಕೆಕಾಂಚಿ ಅವರ ಬಲವಿದೆ. ಇವರು ಮರ್ಕರಂ ಅವರಿಗೆ ಸ್ಪಿನ್ ಪರೀಕ್ಷೆಗೆ ಒಡ್ಡಬಲ್ಲರು.
ಒಂದೊಮ್ಮೆ ಕಿವೀಸ್ ತಂಡವು ಮೊದಲು ಬ್ಯಾಟಿಂಗ್ ಮಾಡುವ ಪ್ರಮೇಯ ಬಂದರೆ ಫಿನ್ ಅಲೆನ್, ಟಿಮ್ ಸೀಫರ್ಟ್, ಗ್ಲೆನ್ ಫಿಲಿಪ್ಸ್ ಮತ್ತು ಡ್ಯಾರಿಲ್ ಮಿಚೆಲ್ ಅವರ ಹೊಣೆ ಹೆಚ್ಚಲಿದೆ. 200ಕ್ಕಿಂತ ಹೆಚ್ಚು ರನ್‌ಗಳ ಮೊತ್ತದ ಸವಾಲನ್ನು ಮರ್ಕರಂ ಪಡೆಗೆ ನೀಡಲೇಬೇಕು. ವೇಗಿ ಲುಂಗಿ ಎನ್‌ಗಿಡಿ ಅವರ ಸ್ಲೋವರ್, ಯಾರ್ಕರ್ ಮತ್ತು ಲೆಗ್ ಕಟರ್‌ಗಳನ್ನು ಎದುರಿಸಿ ನಿಂತರೆ ಇದು ಸಾಧ್ಯವಾಗಲಿದೆ. ನ್ಯೂಜಿಲೆಂಡ್ ತಂಡಕ್ಕೆ ಲಾಕಿ ಫರ್ಗ್ಯುಸನ್ ಅವರ ಮೊದಲ ಸ್ಪೆಲ್ ಯಾವ ರೀತಿ ಪರಿಣಾಮ ಬೀರಲಿದೆ ಎಂಬುದು ಕೂಡ ಇಲ್ಲಿ ಮುಖ್ಯವಾಗಲಿದೆ.
ಒಟ್ಟಾರೆ ‘ಹೋಳಿ ಹಬ್ಬ’ದ ಋತುವಿನಲ್ಲಿ ರೋಚಕತೆ ರಂಗು ಚೆಲ್ಲುವ ಎಲ್ಲ ನಿರೀಕ್ಷೆಗಳೂ ಈ ಪಂದ್ಯದ ಸುತ್ತ ಇವೆ.
ತಂಡಗಳು
ನ್ಯೂಜಿಲೆಂಡ್: ಮಿಚೆಲ್ ಸ್ಯಾಂಟನರ್ (ನಾಯಕ) ಫಿನ್ ಅಲೆನ್ ಟಿಮ್ ಸೀಫರ್ಟ್ ರಚಿನ್ ರವೀಂದ್ರ ಡೆವೊನ್ ಕಾನ್ವೆ ಕೈಲ್ ಜೆಮಿಸನ್ ಜೇಕಬ್ ಡಫಿ ಗ್ಲೆನ್ ಫಿಲಿಪ್ಸ್ ಡ್ಯಾರಿಲ್ ಮಿಚೆಲ್ ಲಾಕಿ ಫರ್ಗ್ಯುಸನ್ ಮಾರ್ಕ್ ಚಾಪ್ಮನ್ ಮ್ಯಾಟ್ ಹೆನ್ರಿ ಈಶ್ ಸೋಧಿ ಕೊಲೆ ಮೆಕಾಂಚಿ ಜೇಮ್ಸ್ ನಿಶಾಮ್.
ದಕ್ಷಿಣ ಆಫ್ರಿಕಾ: ಏಡನ್ ಮರ್ಕರಂ (ನಾಯಕ) ಕ್ವಿಂಟನ್ ಡಿ ಕಾಕ್ ರಿಯಾನ್ ರಿಕೆಲ್ಟನ್ ಡೆವಾಲ್ಡ್ ಬ್ರೆವಿಸ್ ಡೇವಿಡ್ ಮಿಲ್ಲರ್ ಟ್ರಿಸ್ಟನ್ ಸ್ಟಬ್ಸ್ ಮಾರ್ಕೊ ಯಾನ್ಸೆನ್ ಕಾರ್ಬಿನ್ ಬಾಷ್ ಕಗಿಸೊ ರಬಾಡ ಕೇಶವ್ ಮಹಾರಾಜ್ ಲುಂಗಿ ಎನ್‌ಗಿಡಿ ಜಾರ್ಜ್ ಲಿಂಡೆ ಕೆವೆನಾ ಮಫಾಕಾ ಎನ್ರಿಚ್ ನಾಕಿಯಾ ಜೇಸನ್ ಸ್ಮಿತ್.
ಪಂದ್ಯ ಆರಂಭ: ರಾತ್ರಿ 7 ನೇರಪ್ರಸಾರ; ಸ್ಟಾರ್ ಸ್ಪೋರ್ಟ್ಸ್ ಜಿಯೊ ಹಾಟ್‌ಸ್ಟಾರ್ ಆ್ಯಪ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.