ADVERTISEMENT

T20 WC | ಈ ವಾರ ಪಾಕಿಸ್ತಾನ, ಮುಂದಿನ ವಾರ ಭಾರತ ತವರಿಗೆ ವಾಪಸ್: ಅಖ್ತರ್ ಭವಿಷ್ಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಅಕ್ಟೋಬರ್ 2022, 13:10 IST
Last Updated 28 ಅಕ್ಟೋಬರ್ 2022, 13:10 IST
   

ನವದೆಹಲಿ: ಜಿಂಬಾಬ್ವೆ ವಿರುದ್ಧ ಸೋತು ಟಿ–20 ವಿಶ್ವಕಪ್ ಸೆಮಿಫೈನಲ್ ಹಾದಿ ಕಠಿಣವಾಗಿಸಿಕೊಂಡ ಪಾಕಿಸ್ತಾನ ತಂಡದ ಪ್ರದರ್ಶನದ ಬಗ್ಗೆ ತೀವ್ರ ಟೀಕೆ ವ್ಯಕ್ತವಾಗುತ್ತಿದೆ. ಈ ಬಗ್ಗೆ ತಮ್ಮ ಹತಾಶೆ ಹೊರ ಹಾಕಿರುವ ಪಾಕಿಸ್ತಾನದ ಮಾಜಿ ವೇಗಿ ಶೋಯಬ್‌ ಅಖ್ತರ್‌, ಮುಂದಿನ ವಾರ, ಭಾರತವೂ ಸೆಮಿಫೈನಲ್ ಹಂತದಲ್ಲಿ ಹೊರಬೀಳುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ.

ಗುರುವಾರ ಪರ್ತ್‌ನಲ್ಲಿ ನಡೆದ ಟಿ–20 ಕ್ರಿಕೆಟ್ ವಿಶ್ವಕಪ್ ಟೂರ್ನಿಯ 'ಸೂಪರ್‌ 12' ಹಂತದ ಪಂದ್ಯದಲ್ಲಿ ಜಿಂಬಾಬ್ವೆ ತಂಡ ಬಲಿಷ್ಠ ಪಾಕಿಸ್ತಾನ ಎದುರು ಒಂದು ರನ್‌ ಅಂತರದ ರೋಚಕ ಜಯ ದಾಖಲಿಸಿತ್ತು.

ಈ ಮೂಲಕ, ಪಾಕಿಸ್ತಾನ 'ಸೂಪರ್‌ 12' ಹಂತದಲ್ಲಿ ಆಡಿರುವ ಎರಡೂ ಪಂದ್ಯಗಳಲ್ಲಿ ಸೋಲು ಕಂಡಿದೆ. ಅಕ್ಟೋಬರ್‌ 23ರಂದು ಭಾರತ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ 4 ವಿಕೆಟ್ ಅಂತರದಿಂದ ಸೋಲು ಕಂಡಿತ್ತು. ಹೀಗಾಗಿ ಪಾಕಿಸ್ತಾನದ ಸೆಮಿಫೈನಲ್‌ ಹಾದಿ ಕಠಿಣವೆನಿಸಿದೆ. ಉಳಿದ ತಂಡಗಳ ಪಂದ್ಯಗಳ ಫಲಿತಾಂಶವು ಪಾಕ್‌ ಪಡೆಯ ಭವಿಷ್ಯವನ್ನು ನಿರ್ಧರಿಸಲಿವೆ.

ADVERTISEMENT

ಪಾಕಿಸ್ತಾನ ಮುಂದಿನ ಮೂರು ಪಂದ್ಯಗಳನ್ನು ಕ್ರಮವಾಗಿ ನೆದರ್‌ಲೆಂಡ್ಸ್‌ (ಅಕ್ಟೋಬರ್‌ 30), ದಕ್ಷಿಣ ಆಫ್ರಿಕಾ (ನವೆಂಬರ್ 3) ಹಾಗೂ ಬಾಂಗ್ಲಾದೇಶ (ನವೆಂಬರ್ 6) ವಿರುದ್ಧ ಆಡಲಿದೆ. ಆದರೆ, ಭಾರತ ಮತ್ತು ದಕ್ಷಿಣ ಆಫ್ರಿಕಾ ಈ ಹಂತದಲ್ಲಿರುವ ಬಲಿಷ್ಠ ತಂಡಗಳಾಗಿದ್ದು, ಪಾಕಿಸ್ತಾನದ ಹಾದಿ ಕಠಿಣವೆನಿಸಿದೆ.

‘ಇದು ನಿಜವಾಗಿಯೂ ಹತಾಶೆಯ ಪ್ರದರ್ಶನವಾಗಿದೆ. ಈ ವಾರ ಪಾಕಿಸ್ತಾನ ತವರಿಗೆ ವಾಪಸ್ ಆಗಲಿದೆ ಎಂದು ನಾನು ಈ ಹಿಂದೆಯೇ ಹೇಳಿದ್ದೆ. ಭಾರತವೂ ಸಹ ಸೆಮಿಫೈನಲ್ ಆಡಿದ ಬಳಿಕ ತವರಿಗೆ ವಾಪಸ್ ಆಗಲಿದೆ. ಆ ತಂಡವೂ ಹೇಳಿಕೊಳ್ಳುವಷ್ಟು ಉತ್ತಮವಾಗಿಲ್ಲ’ಎಂದು ಯೂಟ್ಯೂಬ್ ವಿಡಿಯೊದಲ್ಲಿ ಅಖ್ತರ್ ಹೇಳಿದ್ದಾರೆ.

ಆಸ್ಟ್ರೇಲಿಯಾದಲ್ಲಿ ತಂಡದ ಕಳಪೆ ಪ್ರದರ್ಶನಕ್ಕೆ ನಾಯಕ ಬಾಬರ್ ಅಜಂ ಸೇರಿದಂತೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ, ಉತ್ತಮ ಆಟಗಾರರನ್ನು ಆಯ್ಕೆ ಮಾಡುವಲ್ಲಿ ವಿಫಲವಾದ ಆಯ್ಕೆ ಸಮಿತಿಯನ್ನು ಅಖ್ತರ್ ಟೀಕಿಸಿದ್ದಾರೆ.

'ಇದರಿಂದ ವೈಯಕ್ತಿಕವಾಗಿ ನನಗೇನೊ ಆಗುತ್ತಿದೆ ಎಂದು ಈ ಮಾತನ್ನು ಹೇಳುತ್ತಿಲ್ಲ. ದೇಶಕ್ಕೆ ನಷ್ಟವಾಗುತ್ತಿದೆ ಎಂದು ಯೋಚಿಸುತ್ತಿದ್ದೇನೆ. ನೀವು ಶಿಸ್ತುಬದ್ಧ ಮತ್ತು ಕೌಶಲ್ಯಪೂರ್ಣ ಆಟಗಾರರಿಗೆ ಅವಕಾಶ ನೀಡುತ್ತಿಲ್ಲ. ಎಲ್ಲವನ್ನೂ ಹಾಳುಮಾಡಿದ್ದೀರಿ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಿಂಬಾಬ್ವೆ ವಿರುದ್ಧದ ಸೋಲು ಪಾಕಿಸ್ತಾನತಂಡದ ಸೆಮಿಫೈನಲ್ ಪ್ರವೇಶದ ಬಗ್ಗೆ ಅನುಮಾನ ಮೂಡಿಸಿದೆ. ಗ್ರೂಪ್–2ನಲ್ಲಿ 5ನೇ ಸ್ಥಾನಕ್ಕೆ ಕುಸಿದಿದೆ. ಪಾಕಿಸ್ತಾನ ಇನ್ನೂ ಮೂರು ಪಂದ್ಯಗಳನ್ನು ಆಡಲಿದ್ದು, ಈವರೆಗೆ ಒಂದೂ ಗೆಲುವನ್ನು ಕಂಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.