ADVERTISEMENT

T20 WC: ನೆದರ್ಲೆಂಡ್ಸ್ 44 ರನ್ನಿಗೆ ಆಲೌಟ್; ಲಂಕಾಗೆ 'ಹ್ಯಾಟ್ರಿಕ್' ಗೆಲುವು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಅಕ್ಟೋಬರ್ 2021, 16:09 IST
Last Updated 22 ಅಕ್ಟೋಬರ್ 2021, 16:09 IST
ಶ್ರೀಲಂಕಾ ಆಟಗಾರರ ಸಂಭ್ರಮ
ಶ್ರೀಲಂಕಾ ಆಟಗಾರರ ಸಂಭ್ರಮ   

ಶಾರ್ಜಾ: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ನೆದರ್ಲೆಂಡ್ಸ್ ವಿರುದ್ಧ ಶ್ರೀಲಂಕಾ ಎಂಟು ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ.

ಈ ಮೂಲಕ ಸತತ ಮೂರನೇ ಗೆಲುವು ದಾಖಲಿಸಿರುವ ಲಂಕಾ, 'ಎ' ಗುಂಪಿನ ಅಗ್ರಸ್ಥಾನಿಯಾಗಿ 'ಸೂಪರ್-12' ಹಂತಕ್ಕೆ ಲಗ್ಗೆಯಿಟ್ಟಿದೆ.

ಲಾಹಿರು ಕುಮಾರ (7ಕ್ಕೆ 3 ವಿಕೆಟ್), ವನಿಂದು ಹಸರಂಗ (9ಕ್ಕೆ 3 ವಿಕೆಟ್), ಹಾಗೂ ಮಹೀಶ್‌ ತೀಕ್ಷನ (3ಕ್ಕೆ 2 ವಿಕೆಟ್) ದಾಳಿಗೆ ತತ್ತರಿಸಿದ ನೆದರ್ಲೆಂಡ್ಸ್ 10 ಓವರ್‌ಗಳಲ್ಲಿ ಕೇವಲ 44 ರನ್ನಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು. ಕಾಲಿನ್ ಆ್ಯಕರ್‌ಮಾನ್ 11 ರನ್ ಗಳಿಸಿರುವುದನ್ನು ಹೊರತುಪಡಿಸಿದರೆ ಇತರೆ ಯಾವ ಬ್ಯಾಟರ್‌ಗಳು ಎರಡಂಕಿಯನ್ನು ತಲುಪಲಿಲ್ಲ.

ಬಳಿಕ ಗುರಿ ಬೆನ್ನತ್ತಿದ ಲಂಕಾ 7.1 ಓವರ್‌ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. ಕುಶಲ್ ಪೆರೇರ (33*) ತಂಡದ ಗೆಲುವನ್ನು ಸುಲಭಗೊಳಿಸಿದರು.

ಇಲ್ಲಿ ಗಮನಾರ್ಹ ಸಂಗತಿಯೆಂದರೆ 2014ರ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಶ್ರೀಲಂಕಾ ವಿರುದ್ಧವೇ ನೆದರ್ಲೆಂಡ್ಸ್ ಕೇವಲ 39 ರನ್ನಿಗೆ ಆಲೌಟ್ ಆಗಿತ್ತು.

'ಎ' ಗುಂಪಿನಲ್ಲಿ ನಡೆದ ಮಗದೊಂದು ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ ಗೆಲುವು ದಾಖಲಿಸಿರುವ ನಮೀಬಿಯಾ ಕೂಡ ಸೂಪರ್-12 ಹಂತಕ್ಕೆ ಪ್ರವೇಶಿಸಿದೆ.

'ಎ' ಗುಂಪಿನಿಂದ ಸೂಪರ್-12 ಹಂತಕ್ಕೆ ಪ್ರವೇಶಿಸಿದ ತಂಡಗಳು:
ಶ್ರೀಲಂಕಾ ಹಾಗೂ ನಮೀಬಿಯಾ

'ಎ' ಗುಂಪಿನಿಂದ ನಿರ್ಗಮಿಸಿದ ತಂಡಗಳು:
ಐರ್ಲೆಂಡ್ ಹಾಗೂ ನೆದರ್ಲೆಂಡ್ಸ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.