ADVERTISEMENT

ವಿಶ್ವಕಪ್ ತಂಡದಿಂದ RCB ಆಟಗಾರನಿಗೆ ಕೊಕ್: SMATಯಲ್ಲಿ ಅಬ್ಬರಿಸಿದವರಿಗೆ ಅವಕಾಶ

ದಿನೇಶ ಆರ್.
Published 20 ಡಿಸೆಂಬರ್ 2025, 10:39 IST
Last Updated 20 ಡಿಸೆಂಬರ್ 2025, 10:39 IST
<div class="paragraphs"><p>ಜಿತೇಶ್ ಶರ್ಮಾ</p></div>

ಜಿತೇಶ್ ಶರ್ಮಾ

   

(ಪಿಟಿಐ ಚಿತ್ರ)

ಭಾರತ ಹಾಗೂ ಶ್ರೀಲಂಕಾ ದೇಶಗಳಲ್ಲಿ ಫೆಬ್ರವರಿ ಹಾಗೂ ಮಾರ್ಚ್ ತಿಂಗಳಿನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿಗೆ ಸೂರ್ಯಕುಮಾರ್ ಯಾದವ್ ನಾಯಕತ್ವದ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಇದರಲ್ಲಿ ಟಿ20 ತಂಡದ ಉಪನಾಯಕನಾಗಿದ್ದ ಶುಭಮನ್ ಗಿಲ್ ಅವರನ್ನು ತಂಡದಿಂದ ಕೈಬಿಡಲಾಗಿದೆ.

ADVERTISEMENT

ಸದ್ಯ, ಆಯ್ಕೆ ಮಾಡಲಾಗಿರುವ ಟಿ20 ತಂಡದಲ್ಲಿ ಇಬ್ಬರು ಆಟಗಾರರನ್ನು ಬದಲಾವಣೆ ಮಾಡಲಾಗಿದೆ. ಶುಭಮನ್ ಗಿಲ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಕೆಟ್ ಕೀಪರ್, ಬ್ಯಾಟರ್ ಜಿತೇಶ್ ಶರ್ಮಾರನ್ನು ಕೈಬಿಟ್ಟು ರಿಂಕು ಸಿಂಗ್ ಹಾಗೂ ಇತ್ತೀಚೆಗೆ ಮುಕ್ತಾಯಗೊಂಡ ಸೈಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಅಮೋಘ ಪ್ರದರ್ಶನ ನೀಡಿರುವ ಇಶಾನ್ ಕಿಶನ್ ಅವರಿಗೆ ಅವಕಾಶ ನೀಡಲಾಗಿದೆ.

ಶುಭಮನ್ ಗಿಲ್ ಅವರನ್ನು ತಂಡದಿಂದ ಕೈಬಿಟ್ಟಿರುವುದಕ್ಕೆ ಕಾರಣಗಳಿವೆ. ಅವರಿಗೆ ನಿರಂತರವಾಗಿ ಅವಕಾಶ ನೀಡಿದ ಹೊರತಾಗಿಯೂ ಅದನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ವಿಫಲವಾಗಿದ್ದರು. ಆ ಕಾರಣಕ್ಕೆ ಅವರನ್ನು ಕೈಬಿಡಲಾಗಿದೆ. ಆದರೆ, ಜಿತೇಶ್ ಶರ್ಮಾ ಅವರನ್ನು ಕೈಬಿಟ್ಟಿರುವುದಕ್ಕೆ ಕ್ರಿಕೆಟ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಜಿತೇಶ್ ಶರ್ಮಾ

ಕಳೆದ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಅಮೋಘ ಪ್ರದರ್ಶನ ತೋರಿದ ಬಳಿಕ ಅವರಿಗೆ ಟೀಂ ಇಂಡಿಯಾದಲ್ಲಿ ಸ್ಥಾನ ನೀಡಲಾಯಿತು. ಇದೀಗ ನಿನ್ನೆ (ಡಿಸೆಂಬರ್ 11) ಮುಕ್ತಾಯಗೊಂಡ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಕೂಡ ಫಿನಿಷರ್ ಸ್ಥಾನದಲ್ಲಿ ಬಂದು, ವಿಕೆಟ್ ಕೀಪಿಂಗ್ ಜೊತೆಗೆ ಉತ್ತಮ ಬ್ಯಾಟಿಂಗ್ ಮೂಲಕವೂ ಗಮನಸೆಳೆದಿದ್ದರು. ಅವರು ಕಳೆಕ್ರಮಾಂಕದಲ್ಲಿ ಬ್ಯಾಟಿಂಗ್‌ ಮಾಡುವುದರಿಂದ ತಮ್ಮ ಸಾಮರ್ಥ್ಯ ಸಾಬೀತುಪಡಿಸಲು ಹೆಚ್ಚಿನ ಅವಕಾಶ ಸಿಕ್ಕಿರಲಿಲ್ಲ. ಇದರ ಹೊರತಾಗಿಯೂ ಅವರನ್ನು ತಂಡದಿಂದ ಕೈಬಿಟ್ಟಿರುವುದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.

ಕಳೆದ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ 4 ಪಂದ್ಯದಲ್ಲಿ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದ ಅವರು, 3 ಇನಿಂಗ್ಸ್‌ಗಳಲ್ಲಿ ಬ್ಯಾಟಿಂಗ್ ಮಾಡುವ ಅವಕಾಶ ಪಡೆದುಕೊಂಡಿದ್ದರು. ಅದರಲ್ಲಿ ಎರಡು ಪಂದ್ಯಗಳಲ್ಲಿ ಅಜೇಯರಾಗಿ ಉಳಿದಿದ್ದು, ಇನ್ನೊಂದು ಪಂದ್ಯದಲ್ಲಿ ಫಿನಿಷರ್ ಸ್ಥಾನದಲ್ಲಿ ಬಂದು ಸ್ಫೋಟಕ 27 ರನ್ ಕಲೆಹಾಕಿದ್ದರು. ಇದರ ಹೊರತಾಗಿಯೂ ಅವರನ್ನು ತಂಡದಲ್ಲಿ ಕೈಬಿಟ್ಟಿರುವುದಕ್ಕೆ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಜಿತೇಶ್ ತಂಡದಿಂದ ಕೈಬಿಡಲು ಕಾರಣ

ಶುಭಮನ್ ಗಿಲ್ ಅವರನ್ನು ತಂಡದಿಂದ ಕೈಬಿಟ್ಟಿರುವುದರಿಂದ ಟೀಂ ಇಂಡಿಯಾಗೆ ಸ್ಪೋಟಕ ಹಾಗೂ ಅಗ್ರಕ್ರಮಾಂಕದಲ್ಲಿ ಆಡಬಲ್ಲ ಆಟಗಾರನ ಅವಶ್ಯಕತೆ ಇತ್ತು. ಆ ಹಿನ್ನೆಲೆಯಲ್ಲಿ ಪಂದ್ಯವನ್ನು ಫಿನಿಷ್ ಮಾಡಬಲ್ಲ ಸಾಮರ್ಥ್ಯ ಹೊಂದಿರುವ ರಿಂಕು ಸಿಂಗ್‌ರನ್ನು ತಂಡಕ್ಕೆ ಸೇರ್ಪಡೆ ಮಾಡಲಾಗಿದೆ. ಇನ್ನೂ ಪರ್ಯಾಯ ಆರಂಭಿಕ ಆಟಗಾರನಾಗಿ ಶುಭಮನ್ ಗಿಲ್ ಜಾಗದಲ್ಲಿ ಇಶಾನ್ ಕಿಶನ್‌ರನ್ನು ಆಯ್ಕೆ ಮಾಡಲಾಗಿದೆ. ಈ ಕಾರಣಕ್ಕೆ ಜಿತೇಶ್‌ರನ್ನು ತಂಡದಿಂದ ಕೈಬಿಡಲಾಗಿದೆ.

SMATಯಲ್ಲಿ ಇಶಾನ್ ಕಿಶನ್ ಅಬ್ಬರ

ಸೈಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಅಬ್ಬರದ ಬ್ಯಾಟಿಂಗ್ ಮಾಡಿದ ಇಶಾನ್ ಕಿಶನ್ ಜಾರ್ಖಂಡ್ ತಂಡವನ್ನು ಚಾಂಪಿಯನ್ ಮಾಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಕಳೆದ 4 ಇನಿಂಗ್ಸ್‌ಗಳಲ್ಲಿ ಕ್ರಮವಾಗಿ 47, 63, 35 ಹಾಗೂ 101 ರನ್ ಗಳಿಸಿದ್ದರು. ಇದು ಇಶಾನ್ ಕಿಶನ್ ಆಯ್ಕೆಗೆ ಕಾರಣವಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.