ADVERTISEMENT

T20I Rankings: ಅಗ್ರಸ್ಥಾನದೊಂದಿಗೆ 931 ರೇಟಿಂಗ್ ಅಂಕ; ದಾಖಲೆ ಬರೆದ ಅಭಿಷೇಕ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಅಕ್ಟೋಬರ್ 2025, 6:56 IST
Last Updated 2 ಅಕ್ಟೋಬರ್ 2025, 6:56 IST
<div class="paragraphs"><p>ಅಭಿಷೇಕ್ ಶರ್ಮಾ</p></div>

ಅಭಿಷೇಕ್ ಶರ್ಮಾ

   

(ಚಿತ್ರ ಕೃಪೆ: ಐಸಿಸಿ)

ದುಬೈ: ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಬಿಡುಗಡೆ ಮಾಡಿರುವ ಬ್ಯಾಟರ್‌ಗಳ ನೂತನ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಟೀಮ್ ಇಂಡಿಯಾದ ಸ್ಫೋಟಕ ಎಡಗೈ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ, ಅಗ್ರಸ್ಥಾನದೊಂದಿಗೆ 931 ರೇಟಿಂಗ್ ಅಂಕ ಗಳಿಸಿ ನೂತನ ದಾಖಲೆ ಬರೆದಿದ್ದಾರೆ.

ADVERTISEMENT

ಇದರೊಂದಿಗೆ ಟ್ವೆಂಟಿ-20 ಕ್ರಿಕೆಟ್ ಇತಿಹಾಸದಲ್ಲೇ ಗರಿಷ್ಠ ರೇಟಿಂಗ್ ಪಾಯಿಂಟ್ ಗಳಿಸಿದ ಬ್ಯಾಟರ್ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.

ಐದು ವರ್ಷದಷ್ಟು ಹಳೆಯ ದಾಖಲೆಯನ್ನು ಅಭಿಷೇಕ್ ಮುರಿದಿದ್ದಾರೆ. 2020ರಲ್ಲಿ ಇಂಗ್ಲೆಂಡ್‌ನ ಡೇವಿಡ್ ಮಲಾನ್ 919 ರೇಟಿಂಗ್ ಅಂಕ ಗಳಿಸಿದ್ದರು.

ಅಲ್ಲದೆ ಭಾರತದ ಪರ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರೇಟಿಂಗ್ ಗಳಿಸಿದ ಬ್ಯಾಟರ್ ಎನಿಸಿದ್ದಾರೆ. ಈ ಹಿಂದೆ ಸೂರ್ಯಕುಮಾರ್ ಯಾದವ್ 912 ಹಾಗೂ ವಿರಾಟ್ ಕೊಹ್ಲಿ 909 ರೇಟಿಂಗ್ ಪಾಯಿಂಟ್ಸ್ ಗಳಿಸಿದ್ದರು.

ಏಷ್ಯಾ ಕಪ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಫೈನಲ್‌ನಲ್ಲಿ ಪಾಕಿಸ್ತಾನ ತಂಡವನ್ನು ಮಣಿಸಿದ್ದ ಭಾರತ ಟ್ರೋಫಿ ಗೆದ್ದಿತ್ತು. ಟೂರ್ನಿಯಲ್ಲಿ ಸತತ ಮೂರು ಅರ್ಧಶತಕಗಳನ್ನು ಗಳಿಸಿದ್ದ ಅಭಿಷೇಕ್, ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಅಬ್ಬರಿಸಿದ್ದರು.

ಇನ್ನು ಅಗ್ರ 10ರ ಪಟ್ಟಿಯಲ್ಲಿ ತಿಲಕ್ ವರ್ಮಾ ಮೂರನೇ ಸ್ಥಾನ ಕಾಯ್ದುಕೊಂಡಿದ್ದಾರೆ. ಪಾಕಿಸ್ತಾನ ವಿರುದ್ಧನ ನಡೆದ ಫೈನಲ್ ಪಂದ್ಯದಲ್ಲಿ ತಿಲಕ್ ಅಮೋಘ ಅರ್ಧಶತಕ ಗಳಿಸಿದ್ದರು.

ಈ ನಡುವೆ ನಾಯಕ ಸೂರ್ಯಕುಮಾರ್ ಯಾದವ್ ಎರಡು ಸ್ಥಾನ ಇಳಿಕೆ ಕಂಡು ಎಂಟನೇ ಸ್ಥಾನಕ್ಕೆ ತಲುಪಿದ್ದಾರೆ. ಸಂಜು ಸ್ಯಾಮ್ಸನ್ ಎಂಟು ಸ್ಥಾನಗಳ ಬಡ್ತಿ ಪಡೆದು 31ನೇ ಸ್ಥಾನದಲ್ಲಿದ್ದಾರೆ.

ಇನ್ನು ಬೌಲರ್‌ಗಳ ವಿಭಾಗದಲ್ಲಿ ಭಾರತದ ವರುಣ್ ಚಕ್ರವರ್ತಿ 803 ರೇಟಿಂಗ್ ಅಂಕಗಳೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ.

ಕುಲದೀಪ್ ಯಾದವ್ ಒಂಬತ್ತು ಸ್ಥಾನ ಬಡ್ತಿ ಪಡೆದು 12ನೇ ಸ್ಥಾನಕ್ಕೆ ಜಿಗಿತ ಕಂಡಿದ್ದಾರೆ. ಆಲ್‌ರೌಂಡರ್ ಅಕ್ಷರ್ ಪಟೇಲ್ 13ನೇ ಸ್ಥಾನದಲ್ಲಿದ್ದಾರೆ.

ಏತನ್ಮಧ್ಯೆ ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ಹಾರ್ದಿಕ್ ಪಾಂಡ್ಯ ಅವರಿಗೆ ಅಗ್ರಸ್ಥಾನ ನಷ್ಟವಾಗಿದ್ದು, ಎರಡನೇ ಸ್ಥಾನದಲ್ಲಿದ್ದಾರೆ. ಹಾರ್ದಿಕ್ ಹಿಂದಿಕ್ಕಿರುವ ಪಾಕಿಸ್ತಾನದ ಸೈಮ್ ಅಯುಬ್ ಅಗ್ರಸ್ಥಾನ ಪಡೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.