ADVERTISEMENT

IPL 2025 | RR vs GT: ಗಿಲ್ ಬಳಗಕ್ಕೆ ರಾಯಲ್ಸ್‌ ಸವಾಲು

ಗೆಲುವಿನ ಓಟ ಮುಂದುವರಿಸುವತ್ತ ಗುಜರಾತ್ ಟೈಟನ್ಸ್ ಚಿತ್ತ

ಪಿಟಿಐ
Published 27 ಏಪ್ರಿಲ್ 2025, 23:30 IST
Last Updated 27 ಏಪ್ರಿಲ್ 2025, 23:30 IST
<div class="paragraphs"><p>ರಾಜಸ್ಥಾನ ರಾಯಲ್ಸ್ ಹಾಗೂ ಗುಜರಾತ್ ಟೈಟನ್ಸ್</p></div>

ರಾಜಸ್ಥಾನ ರಾಯಲ್ಸ್ ಹಾಗೂ ಗುಜರಾತ್ ಟೈಟನ್ಸ್

   

ಜೈಪುರ: ಅಮೋಘ ಲಯದಲ್ಲಿರುವ ಗುಜರಾತ್ ಟೈಟನ್ಸ್ ತಂಡವು ಸೋಮವಾರ ರಾಜಸ್ಥಾನ ರಾಯಲ್ಸ್ ಎದುರು ಕಣಕ್ಕಿಳಿಯಲಿದೆ. 

ಆತಿಥೇಯ ರಾಜಸ್ಥಾನ ತಂಡವು ಪ್ಲೇ ಆಫ್‌ ಹಾದಿಯಿಂದ ಬಹುತೇಕ ಹೊರಗೆ ಬಿದ್ದಂತಾಗಿದೆ. ಗುಜರಾತ್ ಮಾತ್ರ 12 ಅಂಕಗಳೊಂದಿಗೆ ಅಗ್ರ ತಂಡಗಳಲ್ಲಿದೆ. 6 ಪಂದ್ಯಗಳನ್ನು ಗೆದ್ದಿರುವ ಶುಭಮನ್ ಗಿಲ್ ನಾಯಕತ್ವದ ಗುಜರಾತ್ ತಂಡವು ಪ್ಲೇ ಆಫ್‌ ಹಂತದ ಸಮೀಪದಲ್ಲಿದೆ. ಇನ್ನುಳಿದಿರುವ ಪಂದ್ಯಗಳಲ್ಲಿ ಕನಿಷ್ಠ ಎರಡು ಗೆದ್ದರೂ ನಾಕೌಟ್ ಪ್ರವೇಶ ಖಚಿತವಾಗಲಿದೆ. ತಂಡವು ಎಲ್ಲ ವಿಭಾಗಗಳಲ್ಲಿಯೂ ಉತ್ತಮವಾಗಿರುವುದರಿಂದ ಈ ಸ್ಥಾನ ಕಾಪಾಡಿಕೊಳ್ಳಲು ಸಾಧ್ಯವಾಗಿದೆ.  

ADVERTISEMENT

ಎಲ್ಲ ವಿಭಾಗಗಳಲ್ಲಿಯೂ  ಆಟಗಾರರು ಉತ್ತಮವಾಗಿ ಆಡುತ್ತಿರುವುದರಿಂದ ತಂಡವು ಯಶಸ್ಸಿನತ್ತ ಮುನ್ನಡೆಯುತ್ತಿದೆ. ಅದರಲ್ಲೂ ಆರಂಭಿಕ ಬ್ಯಾಟರ್ ಸಾಯಿ ಸುದರ್ಶನ್ ಮತ್ತು ವೇಗಿ, ಕನ್ನಡಿಗ ಪ್ರಸಿದ್ಧ ಕೃಷ್ಣ ಅವರು ಸತತವಾಗಿ ಉತ್ತಮ ಲಯದಲ್ಲಿರುವುದು ತಂಡದ ಬಲ ಹೆಚ್ಚಿಸಿದೆ. ಸುದರ್ಶನ್ ಜೊತೆಗೆ ಗಿಲ್ ಮತ್ತು ಜೋಸ್ ಬಟ್ಲರ್ ಅವರೂ ಬ್ಯಾಟಿಂಗ್ ವಿಭಾಗದ ಶಕ್ತಿಯಾಗಿದ್ದಾರೆ. ಗಿಲ್ ಮತ್ತು ಬಟ್ಲರ್ ಅವರು 150ರ ಸ್ಟ್ರೈಕ್‌ರೇಟ್‌ನಲ್ಲಿ ರನ್‌ ಗಳಿಸುತ್ತಿದ್ದಾರೆ.

ಕಗಿಸೊ ರಬಾಡ ಅವರ ಅನುಪಸ್ಥಿತಿಯಲ್ಲಿಯೂ ಪ್ರಸಿದ್ಧ ತಮ್ಮ ಹೊಣೆಯನ್ನು ಉತ್ತಮವಾಗಿ ನಿಭಾಯಿಸುತ್ತಿದ್ದಾರೆ. ಎಂಟು ಪಂದ್ಯಗಳಿಂದ 16 ವಿಕೆಟ್‌ಗಳನ್ನು ಗಳಿಸಿದ್ದಾರೆ. 14.12ರ ಸರಾಸರಿಯಲ್ಲಿ ಅವರು ಈ ಸಾಧನೆ ಮಾಡಿದ್ದಾರೆ. ಇನ್ನೊಬ್ಬ ವೇಗಿ ಮೊಹಮ್ಮದ್ ಸಿರಾಜ್ (12 ವಿಕೆಟ್) ಕೂಡ ಪರಿಣಾಮಕಾರಿಯಾಗಿದ್ದಾರೆ. ಸ್ಪಿನ್ನರ್ ಸಾಯಿಕಿಶೋರ್(12 ವಿಕೆಟ್) ಅವರು 8.22ರ ಎಕಾನಮಿ ಹೊಂದಿದ್ದಾರೆ.

ಇಂಪ್ಯಾಕ್ಟ್‌ ಪ್ಲೇಯರ್ ಅಗಿ ಆಡಿರುವ ಅನುಭವಿ ವೇಗಿ ಇಶಾಂತ್ ಶರ್ಮಾ, ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಮತ್ತು ಕುಲವಂತ್ ಖೆಜ್ರೊಲಿಯಾ ಅವರು ಅವಕಾಶ ಸಿಕ್ಕಾಗ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ.

ಆದರೆ ರಾಜಸ್ಥಾನವು ಈ ಬಾರಿ ಪ್ಲೇ ಆಫ್‌ ಅವಕಾಶ ಕಳೆದುಕೊಂಡ ಮೊದಲ ತಂಡವಾಗಿದೆ. ಈಚೆಗೆ ಬೆಂಗಳೂರಿನಲ್ಲಿ ಆರ್‌ಸಿಬಿ ವಿರುದ್ಧ 11 ರನ್‌ಗಳಿಂದ ಸೋತಿದ್ದ ರಾಜಸ್ಥಾನ ತಂಡವು ಟೂರ್ನಿಯಿಂದ ಹೊರಬಿದ್ದಿತ್ತು. ರಿಯಾನ್ ಪರಾಗ್ ನಾಯಕತ್ವದ ತಂಡವು ಈಗ 9ನೇ ಸ್ಥಾನದಲ್ಲಿದೆ. 

ಪಂದ್ಯ ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೊ ಹಾಟ್‌ಸ್ಟಾರ್ ಆ್ಯಪ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.