ನವದೆಹಲಿ (ಪಿಟಿಐ): ವೇಗಿ ಟಸ್ಕಿನ್ ಅಹ್ಮದ್ ಅವರು ಹಣಕಾಸು ಸಮೃದ್ಧ ಐಪಿಎಲ್‌ನಲ್ಲಿ ಆಡುತ್ತಿಲ್ಲ ಎಂದು ಬಾಂಗ್ಲಾದೇಶ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಬಿ) ಹೇಳಿದೆ. ಇಂಗ್ಲೆಂಡ್‌ನ ವೇಗದ ಬೌಲರ್ ಮಾರ್ಕ್ ವುಡ್ ಗಾಯಾಳಾಗಿರುವ ಕಾರಣ ಬದಲಿ ಆಟಗಾರನ ಶೋಧದಲ್ಲಿದ್ದ ಲಖನೌ ಸೂಪರ್ ಜೈಂಟ್ಸ್ ತಂಡ ಟಸ್ಕಿನ್ ಅವರನ್ನು ಸಂಪರ್ಕಿಸಿತ್ತು.
ಐಪಿಎಲ್ ಹೊಸ ತಂಡಗಳಲ್ಲಿ ಒಂದಾದ ಸೂಪರ್ ಜೈಂಟ್ಸ್, ವುಡ್ ಅವರಿಗೆ 7.5 ಕೋಟಿ ಕೊಟ್ಟ ಖರೀದಿಸಿತ್ತು. ಆದರೆ ಅವರು ಗಾಯಾಳಾಗಿ ಹಿಂದೆ ಸರಿದಿದ್ದರು. ಆಹ್ವಾನ ಪಡೆದಿದ್ದ ಟಸ್ಕಿನ್ ಅವರಿಗೆ ನಿರಾಕ್ಷೇಪಣಾ ಪತ್ರ ನೀಡಲು ಬಿಸಿಬಿ ನಿರಾಕರಿಸಿದೆ. ಐಪಿಎಲ್ ಸಮಯದಲ್ಲೇ ಬಾಂಗ್ಲಾ ತಂಡದ, ದಕ್ಷಿಣ ಆಫ್ರಿಕಾ ಪ್ರವಾಸವೂ ನಡೆಯುತ್ತಿದೆ.
‘ಪ್ರಸ್ತುತ ದಕ್ಷಿಣ ಆಫ್ರಿಕಾ ಪ್ರವಾಸ ಹಾಗೂ ನಂತರ ಶ್ರೀಲಂಕಾವು ಬಾಂಗ್ಲಾದೇಶಕ್ಕೆ ಪ್ರವಾಸ ಕೈಗೊಳ್ಳುವ ಕಾರಣ ಅವರಿಗೆ ಐಪಿಎಲ್‌ನಲ್ಲಿ ಆಡಲು ಆಗುವುದಿಲ್ಲ’ ಎಂದು ಬಿಸಿಬಿ ಕ್ರಿಕೆಟ್ ಆಪರೇಷನ್ಸ್ ಚೇರ್ಮನ್ ಜಲಾಲ್ ಯೂನುಸ್ ಹೇಳಿರುವುದಾಗಿ ‘ಕ್ರಿಕ್ ಬಝ್’ ಜಾಲತಾಣ ವರದಿ ಮಾಡಿದೆ. ಟಸ್ಕಿನ್ ಜೊತೆ ಮಾತನಾಡಿದ್ದು, ಅವರು ಪರಿಸ್ಥಿತಿ ಅರ್ಥ ಮಾಡಿಕೊಂಡಿದ್ದಾರೆ ಎಂದು ಜಲಾಲ್ ಹೇಳಿದ್ದಾರೆ.
ಬಾಂಗ್ಲಾದೇಶವು ಪ್ರಸ್ತುತ ದಕ್ಷಿಣ ಆಫ್ರಿಕಾದಲ್ಲಿ ಏಕದಿನ ಸರಣಿ ಆಡುತ್ತಿದೆ. ನಂತರ ಎರಡು ಟೆಸ್ಟ್‌ಗಳ ಸರಣಿ ಆಡಲಿದೆ. ಈ ಸರಣಿ ಏಪ್ರಿಲ್ 11ರವರೆಗೆ ಇದೆ. ಐಪಿಎಲ್ ಮಾರ್ಚ್ 26ರಂದು ಆರಂಭವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.