ADVERTISEMENT

ಮೊದಲ ಸಲ ‘ಆರೆಂಜ್’ ಜೆರ್ಸಿಯಲ್ಲಿ ಕಾಣಿಸಿಕೊಂಡ ಟೀಂ ಇಂಡಿಯಾ

​ಪ್ರಜಾವಾಣಿ ವಾರ್ತೆ
Published 29 ಜೂನ್ 2019, 9:16 IST
Last Updated 29 ಜೂನ್ 2019, 9:16 IST
   

ಲಂಡನ್‌: ಭಾರತ ಕ್ರಿಕೆಟ್‌ ತಂಡದ ಆಟಗಾರರು ವಿಶ್ವಕಪ್‌ ಪಂದ್ಯಾವಳಿಯಲ್ಲಿ ಇದೇ ಮೊದಲ ಸಲ ಆರೆಂಜ್‌ ಜೆರ್ಸಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವಿರಾಟ್‌ ಕೊಹ್ಲಿ ಬಳಗ ಇದೇ 30ರಂದು ಆತಿಥೇಯ ಇಂಗ್ಲೆಂಡ್‌ ತಂಡವನ್ನು ಕಿತ್ತಳೆ ಬಣ್ಣದ ಜೆರ್ಸಿ ತೊಟ್ಟು ಎದುರಿಸಲಿದೆ.

ಆಂಗ್ಲರ ತಂಡ ಮತ್ತು ಭಾರತ ತಂಡದ ಜೆರ್ಸಿಗಳು ಒಂದೇ ಬಣ್ಣದಿಂದ ಕೂಡಿರುವುದರಿಂದ ಯಾವುದಾದರೂ ಒಂದು ತಂಡ ಜೆರ್ಸಿ ಬಣ್ಣ ಬದಲಿಸಿಕೊಳ್ಳಬೇಕಾಗುತ್ತದೆ. ಐಸಿಸಿ ನಿಯಮಾವಳಿ ಪ್ರಕಾರ ಆತಿಥೇಯ ತಂಡಕ್ಕೆ ಜೆರ್ಸಿ ಬಣ್ಣ ಬದಲಿಸಿಕೊಳ್ಳುವ ಅವಕಾಶವಿಲ್ಲ. ಹೀಗಾಗಿ ಟೀ ಇಂಡಿಯಾ ಕಿತ್ತಳೆ ಬಣ್ಣದ ಜೆರ್ಸಿ ತೊಡಲಿದೆ.

ಮೆನ್‌ ಇನ್‌ ಬ್ಲೂ ಖ್ಯಾತಿಯ ಕೊಹ್ಲಿ ಬಳಗ ಕಿತ್ತಳೆ ಬಣ್ಣದ ಜೆರ್ಸಿ ಧರಿಸುವುದಕ್ಕೆ ದೇಶದಲ್ಲಿ ವ್ಯಾಪಕ ವಿರೋಧ ಕೇಳಿಬರುತ್ತಿದೆ. ಇದರ ಹಿಂದೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಕೈವಾಡವಿದೆ. ಕೇಂದ್ರ ಸರ್ಕಾರವು ದೇಶವನ್ನು ಕೆಸರೀಕರಣಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಲಾಗುತ್ತಿದೆ. ಈ ಆರೋಪಗಳ ಹೊರತಾಗಿಯೂ ಭಾರತ ತಂಡ ಕಿತ್ತಳ ಬಣ್ಣದ ಜೆರ್ಸಿ ತೊಟ್ಟು ಆಡುವುದು ಖಚಿತವಾಗಿದೆ.

ADVERTISEMENT

ಹೊಸ ಬಣ್ಣದ ಧಿರಿಸಿನಲ್ಲಿ ಭಾರತ ಆಟಗಾರರು ಮೊದಲ ಸಲ ಫೋಟೋಗೆ ಫೋಸ್‌ ನೀಡಿದ್ದಾರೆ. ಚಿತ್ರಗಳನ್ನು ಹಾಗೂ ವಿಡಿಯೊಗಳನ್ನು ಐಸಿಸಿ, ಬಿಸಿಸಿಐ ಹಾಗೂ ಅಭಿಮಾನಿಗಳು ಟ್ವಿಟರ್‌ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.