ನವದೆಹಲಿ: ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಪಾಕಿಸ್ತಾನದ ವಿರುದ್ಧ ನಡೆದ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ಟಿ20 ಪಂದ್ಯವನ್ನು ಭಾರತ ತಂಡ 5 ವಿಕೆಟ್ ಅಂತರದಿಂದ ಗೆದ್ದು ಬೀಗಿತು. ಆಲ್ರೌಂಡ್ ಪ್ರದರ್ಶನ ನೀಡಿದ ಟೀಂ ಇಂಡಿಯಾಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಶಹಬ್ಬಾಸ್ ಹೇಳಿದ್ದಾರೆ.
ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಪಾಕಿಸ್ತಾನ ನಿಗದಿತ 19.5 ಓವರ್‌ಗಳಲ್ಲಿ 147 ರನ್ ಗಳಿಸಿ ಸರ್ವಪತನ ಕಂಡಿತ್ತು. ಭುವನೇಶ್ವರ್ ಕುಮಾರ್ 4 ವಿಕೆಟ್ ಉರುಳಿಸಿದರೆ, ಹಾರ್ದಿಕ್ ಪಾಂಡ್ಯ 3, ಅರ್ಷದೀಪ್ ಸಿಂಗ್ 2 ಹಾಗೂ ಆವೇಶ್ ಖಾನ್ 1 ವಿಕೆಟ್ ಪಡೆದು ಮಿಂಚಿದ್ದರು.
ಬಳಿಕ, ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಭಾರತ ಪರವಿರಾಟ್ ಕೊಹ್ಲಿ (35), ರವೀಂದ್ರ ಜಡೇಜಾ (35) ಮತ್ತು ಹಾರ್ದಿಕ್ ಪಾಂಡ್ಯ (ಅಜೇಯ 33) ಉತ್ತಮ ಬ್ಯಾಟಿಂಗ್ ನಡೆಸಿದರು. ಹೀಗಾಗಿ ರೋಹಿತ್ ಶರ್ಮಾ ಪಡೆ 5 ವಿಕೆಟ್ ಕಳೆದುಕೊಂಡು ಇನ್ನೂ ಎರೆಡು ಎಸೆತ ಬಾಕಿ ಇರುವಂತೆಯೇ ಗುರಿ ತಲುಪಿ ಜಯದ ನಗೆ ಬೀರಿತು.
ಈ ಗೆಲುವಿನ ಬಗ್ಗೆ ಟ್ವಿಟರ್‌ನಲ್ಲಿ ಮೆಚ್ಚುಗೆ ವ್ಯಕ್ತಪಡಿಸಿರುವ ಪ್ರಧಾನಿ ಮೋದಿ, 'ಇಂದಿನ (ಭಾನುವಾರದ) ಏಷ್ಯಾ ಕಪ್ ಪಂದ್ಯದಲ್ಲಿ ಟೀಂ ಇಂಡಿಯಾ ಅದ್ಭುತ ಆಲ್‌ರೌಂಡ್ ಆಟವಾಡಿದೆ. ತಂಡವು ಅಮೋಘ ಕೌಶಲ ಮತ್ತು ಛಲದ ಆಟ ಪ್ರದರ್ಶಿಸಿದೆ. ಜಯಭೇರಿ ಬಾರಿಸಿದ ತಂಡಕ್ಕೆ ಅಭಿನಂದನೆಗಳು' ಎಂದು ಬರೆದುಕೊಂಡಿದ್ದಾರೆ.
'ಏಷ್ಯಾ ಕಪ್ ಟಿ20 ಪಂದ್ಯದಲ್ಲಿಪಾಕಿಸ್ತಾನವನ್ನು ಸೋಲಿಸಿದ ಭಾರತ ತಂಡಕ್ಕೆ ಅಭಿನಂದನೆಗಳು. ಈ ಅದ್ಭುತ ಗೆಲುವು ನಿಜಕ್ಕೂ ಉಲ್ಲೇಖನಾರ್ಹ. ತಂಡಕ್ಕೆ ಅರ್ಹವಾದ ಗೆಲುವು. ಕ್ರಿಕೆಟ್ ಪ್ರಿಯ ದೇಶಕ್ಕೆ ಇಂತಹ (ಗೆಲುವಿನ) ಸತ್ಕಾರ ನೀಡಿದ್ದಕ್ಕೆ ಧನ್ಯವಾದಗಳು' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.
'ಏಷ್ಯಾ ಕಪ್ ಟೂರ್ನಿಯಲ್ಲಿ ಭಾರತಕ್ಕೆ ಎಂತಹ ಅದ್ಭುತ ಆರಂಭ.ಇದು ಉಗುರು ಕಚ್ಚಿಕೊಂಡು ನೋಡುವಂತಹ ಪಂದ್ಯವಾಗಿತ್ತು.ಈ ಅಮೋಘ ಗೆಲುವಿಗಾಗಿ ಇಡೀ ತಂಡಕ್ಕೆ ಅಭಿನಂದನೆಗಳು. ಹೀಗೆಯೇ ಮುಂದುವರಿಯಲಿ!' ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಭಕೋರಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ,'ಎಂತಹಾರೋಮಾಂಚನಕಾರಿ ಪಂದ್ಯ! ಟೀಂ ಇಂಡಿಯಾಚೆನ್ನಾಗಿ ಆಡಿದೆ. ಅತ್ಯಂತ ಸಂತೋಷ ಹಾಗೂ ಹೆಮ್ಮೆಯ ಭಾವನೆಯೊಂದಿಗೆದೇಶವನ್ನು ಪ್ರೇರೇಪಿಸಿದ್ದು ಮತ್ತು ಒಗ್ಗೂಡಿಸಿದ್ದು ಕ್ರೀಡೆಯ ಸೌಂದರ್ಯ' ಎಂದು ಟ್ವೀಟ್ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.