ADVERTISEMENT

IND vs SA: ಕುಲದೀಪ್‌ ಯಾದವ್ ಸ್ಪಿನ್ ಮೋಡಿ

‘ಸಮಬಲದ’ ಅವಕಾಶ ಕಲ್ಪಿಸಿದ ಪಿಚ್; ತೆಂಬಾ ಬಳಗಕ್ಕೆ ಸಮಾಧಾನಕರ ಆರಂಭ

ಮಧು ಜವಳಿ
Published 23 ನವೆಂಬರ್ 2025, 0:01 IST
Last Updated 23 ನವೆಂಬರ್ 2025, 0:01 IST
ಭಾರತ ಕ್ರಿಕೆಟ್ ತಂಡದ ಸ್ಪಿನ್ನರ್ ಕುಲದೀಪ್ ಯಾದವ್ 
ಭಾರತ ಕ್ರಿಕೆಟ್ ತಂಡದ ಸ್ಪಿನ್ನರ್ ಕುಲದೀಪ್ ಯಾದವ್    

ಗುವಾಹಟಿ: ಕೋಲ್ಕತ್ತದಲ್ಲಿ ಹೋದವಾರ ನಡೆದಿದ್ದ ಟೆಸ್ಟ್ ಪಂದ್ಯಕ್ಕೆ ಸಿದ್ಧಗೊಳಿಸಲಾಗಿದ್ದ ಪಿಚ್‌ ಮತ್ತು ಗುವಾಹಟಿಯಲ್ಲಿ ಇರುವ ಅಂಗಣಕ್ಕೂ ಅಜಗಜಾಂತರವಿದೆ. 

ಕೋಲ್ಕತ್ತ ಟೆಸ್ಟ್‌ ಮತ್ತು ಪರ್ತ್‌ನಲ್ಲಿ ಕಳೆದ ಎರಡು ದಿನ ನಡೆದ ಇಂಗ್ಲೆಂಡ್– ಆಸ್ಟ್ರೇಲಿಯಾ ನಡುವಣ ಆ್ಯಷಸ್ ಟೆಸ್ಟ್‌ ಪಂದ್ಯಕ್ಕೂ ಸಾಮ್ಯತೆಗಳಿವೆ. ಆದರೆ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಣ ಸರಣಿಯ ಎರಡನೇ ಪಂದ್ಯ ಆಯೋಜನೆಯಾಗಿರುವ ಅಸ್ಸಾಂ ಕ್ರಿಕೆಟ್ ಮೈದಾನದ ಪಿಚ್‌ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಿತು. ಅದರಿಂದಾಗಿ ಮೊದಲ ದಿನದಾಟವು ಬ್ಯಾಟರ್ ಮತ್ತು ಬೌಲರ್‌ಗಳಿಬ್ಬರಿಗೂ ತಮ್ಮ ಸಾಮರ್ಥ್ಯವನ್ನು ಒರೆಗೆ ಹಚ್ಚಲು ವೇದಿಕೆಯಾಯಿತು. ಬ್ಯಾಟರ್‌ಗಳು ಏಕಾಗ್ರತೆ ಮತ್ತು ತಾಳ್ಮೆಯ ಆಟವಾಡಿದರು. ವೇಗಿಗಳಿಗೆ ಶಿಸ್ತು ಮತ್ತು ಸಹನೆಯೇ ಮುಖ್ಯ ಅಸ್ತ್ರವಾದವು. ಸ್ಪಿನ್ನರ್‌ಗಳು ದುಡುಕಲಿಲ್ಲ. ತಿರುವು ಮತ್ತು ನಿರೀಕ್ಷಿತ ವೇಗ ಸಿಗುವವರೆಗೂ ಕಾಯ್ದರು. ಇದರಿಂದಾಗಿ ಯಶಸ್ಸು ಎಂಬುದು ಜೋಕಾಲಿಯಂತೆ ಒಮ್ಮೆ ಆಚೆ ಮತ್ತೊಮ್ಮೆ ಈಚೆ ಜೀಕಿತು.

ಬೆಳಿಗ್ಗೆ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಪ್ರವಾಸಿ ತಂಡವು ದಿನದಾಟದ ಮುಕ್ತಾಯಕ್ಕೆ 81.5 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 247 ರನ್ ಗಳಿಸಿತು. ಟಾಸ್ ವಿಷಯದಲ್ಲಿ ದುರದೃಷ್ಟ ಈ ಪಂದ್ಯದಲ್ಲಿಯೂ ಭಾರತ ತಂಡವನ್ನು ಕಾಡಿತು. ಮೊದಲೆರಡು ಅವಧಿಗಳಲ್ಲಿ (1ಕ್ಕೆ82 ಮತ್ತು 1ಕ್ಕೆ74) ಬ್ಯಾಟರ್‌ಗಳು ಒಂದಿಷ್ಟು ಮೇಲುಗೈ ಸಾಧಿಸಿದರು. ಅಕ್ರಮಣಶೈಲಿಗಿಂತ ಸ್ಥಿರವಾದ ಆಟವಾಡುವತ್ತ ಗಮನ ಹರಿಸಿದರು. ಆದರೆ ದಿನದಾಟದ ಅಂತಿಮ ಅವಧಿಯಲ್ಲಿ  ಭಾರತದ ಬೌಲರ್‌ಗಳು ತಮ್ಮ ಪ್ರತಾಪ ಮೆರೆದರು. ಈ ಅವಧಿಯಲ್ಲಿ ನಾಲ್ಕು ವಿಕೆಟ್‌ಗಳನ್ನು ಕಬಳಿಸುವ ಮೂಲಕ ತುಸು ಮೇಲುಗೈ ಸಾಧಿಸಿದರು. 

ADVERTISEMENT

ಮಧ್ಯಾಹ್ನ ದಕ್ಷಿಣ ಆಫ್ರಿಕಾ ತಂಡವು 201 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡಾಗಲೇ ಆತಿಥೇಯ ಬೌಲರ್‌ಗಳು ಪಂದ್ಯದ ಮೇಲೆ ಹಿಡಿತ ಸಾಧಿಸಲು ಪ್ರಯತ್ನಿಸಿದರು. ಆದರೆ ಟೋನಿ ಡಿ ಝಾರ್ಜಿ (28 ರನ್) ಮತ್ತು ಸೆನುರನ್ ಮುತ್ತುಸಾಮಿ (ಔಟಾಗದೇ 25) ಆರನೇ ವಿಕೆಟ್ ಜೊತೆಯಾಟದಲ್ಲಿ 45 ರನ್ ಸೇರಿಸಿದರು. ಇದರಿಂದಾಗಿ ಪ್ರವಾಸಿ ಬಳಗವು ಚೇತರಿಸಿಕೊಂಡಿತು. 

ಹೊಸ ಚೆಂಡಿನೊಂದಿಗೆ ಬೌಲಿಂಗ್ ಮಾಡಿದ ಸಿರಾಜ್ ಅವರಿಗೆ ಕೊನೆಗೂ ಅದೃಷ್ಟ ಒಲಿಯಿತು. ಅವರ ಎಸೆತವನ್ನು ಆಡುವ ಭರದಲ್ಲಿ ಝಾರ್ಜಿ ಅವರು ವಿಕೆಟ್‌ಕೀಪರ್  ಪಂತ್‌ ಅವರಿಗೆ ಕ್ಯಾಚ್ ಆದರು.

ದಕ್ಷಿಣ ಆಫ್ರಿಕಾದ ಬ್ಯಾಟರ್‌ಗಳ ಸತ್ವಪರೀಕ್ಷೆ ನಡೆಯಿತು. ರಿಯಾನ್ ರಿಕೆಲ್ಟನ್ (35; 82ಎ), ನಾಯಕ ತೆಂಬಾ ಬವುಮಾ (41; 92ಎ) ಮತ್ತು ಟ್ರಿಸ್ಟನ್ ಸ್ಟಬ್ಸ್‌ (49; 112 ಎ) ಅವರು ತಾಳ್ಮೆಯಿಂದ ಆಡಿದಷ್ಟು ಹೊತ್ತು ರನ್‌ ಗಳಿಸಿದರು. ಆದರೆ ಸಹನೆ ಕಳೆದುಕೊಂಡು ಕೆಟ್ಟ ಹೊಡೆತಕ್ಕೆ ಕೈಹಾಕಿ ದಂಡ ತೆತ್ತರು. ವೇಗಿ ಜಸ್‌ಪ್ರೀತ್ ಬೂಮ್ರಾ (38ಕ್ಕೆ1) ಮತ್ತು ಎಡಗೈ ಸ್ಪಿನ್ನರ್ ಕುಲದೀಪ್ ಯಾದವ್ (48ಕ್ಕೆ3) ತಮ್ಮ ಪೂರ್ಣ ಸಾಮರ್ಥ್ಯ ವಿನಿಯೋಗಿಸಿ ಯಶಸ್ವಿಯಾದರು. 

ಚೆಂಡು ಹದವಾಗಿ ಪುಟಿದೇಳುತ್ತಿದ್ದ ಪಿಚ್‌ನಲ್ಲಿ ಬೂಮ್ರಾ ಮತ್ತು ಸಿರಾಜ್ ಆರಂಭಿಕ ಓವರ್‌ಗಳನ್ನು ಉತ್ತಮವಾಗಿ ಬೌಲಿಂಗ್ ಮಾಡಿದರು. ಏಡನ್ ಮರ್ಕರಂ ಮತ್ತು ರಿಕೆಲ್ಟನ್ ಅವರು ರನ್ ಗಳಿಸಲು ಕಷ್ಟಪಟ್ಟರು. ಏಳನೇ ಓವರ್‌ನಲ್ಲಿ ಬೂಮ್ರಾ ಎಸೆತವನ್ನು ಆಡಲು ಪ್ರಯತ್ನಿಸಿದ ಮರ್ಕರಂ ಬ್ಯಾಟ್‌ಗೆ ಬಡಿದ ಚೆಂಡು ಗಾಳಿಯಲ್ಲಿ ಸಾಗಿತು. ಆದರೆ ಫೀಲ್ಡರ್ ಕೆ.ಎಲ್. ರಾಹುಲ್ ಸುಲಭ ಕ್ಯಾಚ್ ಕೈಚೆಲ್ಲಿದರು. ಮರ್ಕರಂ ತಮ್ಮ ಖಾತೆ ತೆರೆಯಲು 17 ಎಸೆತಗಳನ್ನು ಆಡಿದರು. ನಂತರ ಇಬ್ಬರೂ ಆರಂಭಿಕರು ಹಂತಹಂತವಾಗಿ ಆಟಕ್ಕೆ ಕುದುರಿಕೊಂಡರು.  ಚಹಾ ವಿರಾಮಕ್ಕೂ ಮುಂಚಿನ ಓವರ್‌ನಲ್ಲಿ ಬೂಮ್ರಾ ಅವರು ಮರ್ಕರಂ ವಿಕೆಟ್ ಎಗರಿಸಿದರು. ವಿರಾಮದ ನಂತರದ ಓವರ್‌ನಲ್ಲಿ ಕುಲದೀಪ್ ಎಸೆತ ಆಡುವ ಯತ್ನದಲ್ಲಿ ರಿಕೆಲ್ಟನ್, ವಿಕೆಟ್‌ಕೀಪರ್‌ ಪಂತ್‌ಗೆ ಕ್ಯಾಚಿತ್ತರು. 

ದಕ್ಷಿಣ ಆಫ್ರಿಕಾ ತಂಡವು ವೇಗಿ ಕಾರ್ಬಿನ್ ಬಾಷ್ ಅವರ ಬದಲಿಗೆ ಸ್ಪಿನ್ನರ್ ಮುತ್ತುಸಾಮಿ ಅವರಿಗೆ ಸ್ಥಾನ ನೀಡಿದೆ. ಭಾರತ ತಂಡವು ಶುಭಮನ್ ಗಿಲ್ ಮತ್ತು ಅಕ್ಷರ್ ಪಟೇಲ್ ಅವರ ಬದಲಿಗೆ ಸಾಯಿ ಸುದರ್ಶನ್ ಮತ್ತು ನಿತೀಶ್ ರೆಡ್ಡಿ ಅವರನ್ನು ಕಣಕ್ಕಿಳಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.