ADVERTISEMENT

ಕುತೂಹಲ ಘಟ್ಟದಲ್ಲಿ ಪರ್ತ್ ಟೆಸ್ಟ್‌: ವಿಹಾರಿ, ಪಂತ್‌ ಮೇಲೆ ನಿರೀಕ್ಷೆಯ ಭಾರ

ಪ್ರಮುಖ ಬ್ಯಾಟ್ಸ್‌ಮನ್‌ಗಳ ಪೆವಿಲಿಯನ್‌ ಪರೇಡ್‌

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2018, 20:27 IST
Last Updated 17 ಡಿಸೆಂಬರ್ 2018, 20:27 IST
ಆರು ವಿಕೆಟ್‌ ಪಡೆದ ಮೊಹಮ್ಮದ್‌ ಶಮಿ
ಆರು ವಿಕೆಟ್‌ ಪಡೆದ ಮೊಹಮ್ಮದ್‌ ಶಮಿ   

ಪರ್ತ್‌: ಇಲ್ಲಿನ ಪರ್ತ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಎರಡನೇ ಟೆಸ್ಟ್‌ ಕ್ರಿಕೆಟ್‌ ಪಂದ್ಯದಲ್ಲಿ ಯಾರು ಗೆಲುವಿನ ತೋರಣ ಕಟ್ಟುತ್ತಾರೆ ಎಂಬ ಕುತೂಹಲ ಕ್ರಿಕೆಟ್‌ ಪ್ರಿಯರಲ್ಲಿ ಗರಿಗೆದರಿದೆ.

ವಿರಾಟ್‌ ಕೊಹ್ಲಿ ಬಳಗಕ್ಕೆ ಜಯದ ಸಿಹಿ ಸವಿಯಲು 175ರನ್‌ಗಳ ಅಗತ್ಯವಿದ್ದು, ಆತಿಥೇಯರ ಗೆಲುವಿಗೆ ಐದು ವಿಕೆಟ್‌ಗಳು ಬೇಕಿವೆ. ಭಾರತಕ್ಕೆ ಡ್ರಾ ಮಾಡಿಕೊಳ್ಳುವ ಅವಕಾಶವೂ ಇದೆ. ಇದಕ್ಕಾಗಿ ಅಂತಿಮ ದಿನದಾಟದ ಪೂರ್ಣ 90 ಓವರ್‌ಗಳನ್ನು ಆಡಬೇಕು.

4 ವಿಕೆಟ್‌ಗೆ 132ರನ್‌ಗಳಿಂದ ಸೋಮವಾರ ಆಟ ಮುಂದುವರಿಸಿದ ಟಿಮ್‌ ಪೇನ್‌ ಪಡೆ ದ್ವಿತೀಯ ಇನಿಂಗ್ಸ್‌ನಲ್ಲಿ 93.2 ಓವರ್‌ಗಳಲ್ಲಿ 243ರನ್‌ಗಳಿಗೆ ಆಲೌಟ್‌ ಆಯಿತು.

ADVERTISEMENT

ಗೆಲುವಿಗೆ 287ರನ್‌ಗಳ ಗುರಿ ಬೆನ್ನಟ್ಟಿರುವ ಭಾರತ ದಿನದಾಟದ ಅಂತ್ಯಕ್ಕೆ 41 ಓವರ್‌ಗಳಲ್ಲಿ 5 ವಿಕೆಟ್‌ಗೆ 112ರನ್‌ ಕಲೆಹಾಕಿದೆ.

ಶಮಿ ಬೌಲಿಂಗ್‌ ಮೋಡಿ: ನಾಲ್ಕನೇ ದಿನದಾಟದಲ್ಲಿ ಭಾರತದ ಬೌಲರ್‌ ಮೊಹಮ್ಮದ್‌ ಶಮಿ ಮೋಡಿ ಮಾಡಿದರು. 56 ರನ್‌ ನೀಡಿ ಆರು ವಿಕೆಟ್‌ ಉರುಳಿಸಿದ ಅವರು ವೈಯಕ್ತಿಕ ಶ್ರೇಷ್ಠ ಬೌಲಿಂಗ್‌ ಸಾಧನೆ ಮಾಡಿದರು.

ದಿನದಾಟದ ಮೊದಲ ಅವಧಿಯಲ್ಲಿ ನಾಯಕ ಪೇನ್‌ (37; 116ಎ, 4ಬೌಂ) ಮತ್ತು ಉಸ್ಮಾನ್‌ ಖ್ವಾಜಾ (72; 213ಎ, 5ಬೌಂ) ಎಚ್ಚರಿಕೆಯ ಆಟ ಆಡಿದರು. ಆರನೇ ವಿಕೆಟ್‌ಗೆ 72ರನ್‌ಗಳನ್ನು ಸೇರಿಸಿದ ಈ ಜೋಡಿ ತಂಡದ ಮುನ್ನಡೆಯನ್ನು ಹೆಚ್ಚಿಸಿತು.

ಅಪಾಯಕಾರಿಯಾಗಿ ಬೆಳೆಯುತ್ತಿದ್ದ ಈ ಜೊತೆಯಾಟ ಮುರಿಯಲು ಭಾರತ ತಂಡದ ನಾಯಕ ಕೊಹ್ಲಿ ಬೌಲಿಂಗ್‌ನಲ್ಲಿ ಪದೇ ಪದೇ ಬದಲಾವಣೆ ಮಾಡಿದರು. 79ನೇ ಓವರ್‌ನಲ್ಲಿ ಮೊಹಮ್ಮದ್‌ ಶಮಿ ಆತಿಥೇಯರಿಗೆ ಯಶಸ್ಸು ತಂದುಕೊಟ್ಟರು. ಐದು ಮತ್ತು ಆರನೇ ಎಸೆತಗಳಲ್ಲಿ ಕ್ರಮವಾಗಿ ಪೇನ್‌ ಮತ್ತು ಆ್ಯರನ್‌ ಫಿಂಚ್‌ (25; 31ಎ, 5ಬೌಂ) ಅವರ ವಿಕೆಟ್‌ ಉರುಳಿಸಿದ ಶಮಿ ಸಂಭ್ರಮಿಸಿದರು. ನಂತರ ಆಸ್ಟ್ರೇಲಿಯಾ, ಕುಸಿತದ ಹಾದಿ ಹಿಡಿಯಿತು. ಈ ತಂಡ 51ರನ್‌ ಗಳಿಸುವಷ್ಟರಲ್ಲಿ ಆರು ವಿಕೆಟ್‌ ಕಳೆದುಕೊಂಡಿತು.

ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳನ್ನು ಬೇಗನೆ ಪೆವಿಲಿಯನ್‌ಗೆ ಕಳುಹಿಸಿದ ಶಮಿ ಮತ್ತು ಜಸ್‌ಪ್ರೀತ್‌ ಬೂಮ್ರಾ, ಬೃಹತ್‌ ಮುನ್ನಡೆ ಪಡೆಯುವ ಆತಿಥೇಯರ ಆಸೆಗೆ ತಣ್ಣೀರು ಸುರಿದರು.

ನಡೆಯದ ರಾಹುಲ್‌ ಆಟ: ಗುರಿ ಬೆನ್ನಟ್ಟಿದ ಭಾರತಕ್ಕೆ ಮೊದಲ ಓವರ್‌ನಲ್ಲೇ ಆಘಾತ ಎದುರಾಯಿತು.

ಮಿಷೆಲ್‌ ಸ್ಟಾರ್ಕ್‌ ಎಸೆತದಲ್ಲಿ ಕೆ.ಎಲ್‌.ರಾಹುಲ್‌ ಬೌಲ್ಡ್‌ ಆದರು. ನಾಲ್ಕು ಎಸೆತಗಳನ್ನು ಎದುರಿಸಿದ ಅವರು ಸೊನ್ನೆ ಸುತ್ತಿದರು. ಮೊದಲ ಇನಿಂಗ್ಸ್‌ನಲ್ಲಿ ಎರಡು ರನ್‌ ಗಳಿಸಿದ್ದರು.

ಟೆಸ್ಟ್‌ ಪರಿಣತ ಬ್ಯಾಟ್ಸ್‌ಮನ್ ಚೇತೇಶ್ವರ ಪೂಜಾರ (4; 11ಎ, 1ಬೌಂ) ಕೂಡಾ ಬಂದಷ್ಟೇ ವೇಗವಾಗಿ ಪೆವಿಲಿಯನ್‌ ಸೇರಿದರು.

ನಾಯಕ ಕೊಹ್ಲಿ ಮತ್ತು ಮುರಳಿ ವಿಜಯ್‌ (20; 67ಎ, 3ಬೌಂ) ಅವರ ಆಟವೂ ನಡೆಯಲಿಲ್ಲ.

ನೇಥನ್‌ ಲಯನ್‌ ಬೌಲ್‌ ಮಾಡಿದ 20ನೇ ಓವರ್‌ನ ಮೊದಲ ಎಸೆತದಲ್ಲಿ ವಿರಾಟ್‌, ಸ್ಲಿಪ್‌ನಲ್ಲಿದ್ದ ಉಸ್ಮಾನ್‌ ಖ್ವಾಜಾಗೆ ಕ್ಯಾಚ್‌ ನೀಡಿದರು. ಮೊದಲ ಇನಿಂಗ್ಸ್‌ನಲ್ಲಿ ಶತಕ ಸಿಡಿಸಿ ದಾಖಲೆ ಬರೆದಿದ್ದ ಅವರು 17ರನ್ ಗಳಿಸಲಷ್ಟೇ ಶಕ್ತರಾದರು. 40 ಎಸೆತಗಳನ್ನು ಎದುರಿಸಿದ ಕೊಹ್ಲಿ, ಎರಡು ಬೌಂಡರಿ ಸಿಡಿಸಿದರು. ಬಲಗೈ ಸ್ಪಿನ್ನರ್‌ ಲಯನ್‌, ಟೆಸ್ಟ್‌ನಲ್ಲಿ ಏಳನೇ ಬಾರಿ ಕೊಹ್ಲಿ ಅವರನ್ನು ಔಟ್‌ ಮಾಡಿದ ಶ್ರೇಯಕ್ಕೆ ಪಾತ್ರರಾದರು. 22ನೇ ಓವರ್‌ನ ಐದನೇ ಎಸೆತದಲ್ಲಿ ವಿಜಯ್‌ ಅವರನ್ನೂ ಬೌಲ್ಡ್‌ ಮಾಡಿ ಆತಿಥೇಯರ ಗೆಲುವಿನ ಕನಸಿಗೆ ಬಲ ತುಂಬಿದರು.

ಅನುಭವಿ ಅಜಿಂಕ್ಯ ರಹಾನೆ (30; 47ಎ, 2ಬೌಂ, 1ಸಿ) ಭರವಸೆ ಮೂಡಿಸಿದ್ದರು. ದಿನದಾಟ ಮುಗಿಯಲು ಆರು ಓವರ್‌ ಬಾಕಿ ಇದ್ದಾಗ ರಹಾನೆ ಔಟಾದರು. ನಂತರ ಹನುಮ ವಿಹಾರಿ (ಬ್ಯಾಟಿಂಗ್‌ 24; 58ಎ, 4ಬೌಂ) ಮತ್ತು ರಿಷಭ್‌ ಪಂತ್‌ (ಬ್ಯಾಟಿಂಗ್‌ 9; 19ಎ) ವಿಕೆಟ್‌ ಬೀಳದಂತೆ ಎಚ್ಚರ ವಹಿಸಿದರು.

ಟ್ರೋಲ್‌ಗೆ ಒಳಗಾದ ರಾಹುಲ್‌
ಆಸ್ಟ್ರೇಲಿಯಾ ಎದುರಿನ ಎರಡನೇ ಟೆಸ್ಟ್‌ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ಶೂನ್ಯಕ್ಕೆ ಔಟಾದ ಕರ್ನಾಟಕದ ಕೆ.ಎಲ್‌.ರಾಹುಲ್‌ ಟ್ರೋಲ್‌ಗೆ ಒಳಗಾಗಿದ್ದಾರೆ.

ರಾಹುಲ್‌, ಕನ್ನಡಿಗರಾದ ನೀವು ಆಸ್ಟ್ರೇಲಿಯಾದಲ್ಲಿ ಕೆ.ಜಿ.ಎಫ್‌ ಸಿನಿಮಾದ ಬದಲು ಶಾರುಖ್‌ ಖಾನ್‌ ಅಭಿನಯದ ‘ಜೀರೊ’ ಸಿನಿಮಾದ ಪ್ರಚಾರ ಮಾಡುತ್ತಿದ್ದೀರಾ ಎಂಬ ಪೋಸ್ಟ್ ಸಾಮಾಜಿಕಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಕೊಹ್ಲಿ–ಪೇನ್‌ ಜಟಾಪಟಿ:ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಮತ್ತು ಆಸ್ಟ್ರೇಲಿಯಾ ತಂಡದ ಸಾರಥ್ಯ ವಹಿಸಿರುವ ಟಿಮ್‌ ಪೇನ್‌ ಅವರ ಜಟಾಪಟಿ ಸೋಮವಾರವೂ ಮುಂದುವರಿಯಿತು.

ಭಾನುವಾರದ ಆಟದ ವೇಳೆ ಮಾತಿನ ಚಕಮಕಿ ನಡೆಸಿದ್ದ ಇವರು ನಾಲ್ಕನೇ ದಿನದಾಟದ ಮೊದಲ ಅವಧಿಯಲ್ಲೂ ವಾಗ್ಯುದ್ಧ ನಡೆಸಿದರು.

‘ನಾನು ನಿನ್ನ ಬಗ್ಗೆ ಏನೂ ಮಾತನಾಡಿಲ್ಲ. ಹೀಗಿದ್ದರೂ ಏಕೆ ಸಿಟ್ಟಾಗುತ್ತಿದ್ದೀಯಾ’ ಎಂದು ಕೊಹ್ಲಿ, ಪೇನ್‌ ಅವರನ್ನು ‍ಪ್ರಶ್ನಿಸಿದರು.

‘ನಾನು ಶಾಂತಚಿತ್ತದಿಂದಲೇ ಇದ್ದೇನೆ. ನಿನ್ನೆ ಆಕ್ರಮಣಕಾರಿ ಧೋರಣೆಯಿಂದ ವರ್ತಿಸುತ್ತಿದ್ದ ನೀನು ಇಂದೇಕೆ ತುಟಿ ಬಿಚ್ಚುತ್ತಿಲ್ಲ’ ಎಂದು ಪೇನ್‌ ಕೆಣಕಿದರು.

ಆಗ ಅಂಗಳದ ಅಂಪೈರ್‌ ಕ್ರಿಸ್‌ ಗಫಾನಿ ಮಧ್ಯಪ್ರವೇಶಿಸಿ ಇಬ್ಬರನ್ನೂ ಸಮಾಧಾನಪಡಿಸಲು ಪ್ರಯತ್ನಿಸಿದರು. ಹೀಗಿದ್ದರೂ ಪೇನ್‌ ಸುಮ್ಮನಾಗಲಿಲ್ಲ. ‘ನಾವು ಗಲಾಟೆ ಮಾಡುತ್ತಿಲ್ಲ. ಮಾತನಾಡಲು ಬಿಡಿ’ ಎಂದರು. ಆಗ ಗಫಾನಿ ‘ನೀವಿಬ್ಬರು ನಾಯಕರು. ಹೀಗೆ ವರ್ತಿಸುವುದು ಸರಿಯಲ್ಲ’ ಎಂದು ಕಿವಿಮಾತು ಹೇಳಿದರು.

ಎರಡನೇ ಇನಿಂಗ್ಸ್‌ನಲ್ಲಿಮೊಹಮ್ಮದ್‌ ಶಮಿಸಾಧನೆ
ಓವರ್‌:24
ಮೇಡನ್‌: 8
ನೀಡಿದ ರನ್‌: 56
ವಿಕೆಟ್‌: 6
ವೈಡ್‌: 2
ಇಕಾನಮಿ: 2.33

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.